ಅನುದಿನ ಪ್ರಾರ್ಥನೆಗಳು
ಬೆಳಗಿನ
ಪ್ರಾರ್ಥನೆಗಳು
ಶಿಲುಬೆಯ ಗುರುತು
ಪವಿತ್ರ ಶಿಲುಬೆಯ ಗುರುತಿನ ಮೂಲಕ
ನಮ್ಮ ವೈರಿಗಳಿಂದ ನಮ್ಮನ್ನು ರಕ್ಷಿಸಿರಿ.
ನಮ್ಮ ಸರ್ವೇಶ್ವರ, ಪಿತನ ಮತ್ತು
ಸುತನ ಮತ್ತು
ಪವಿತ್ರಾತ್ಮನ ನಾಮದಲ್ಲಿ ಆಮೆನ್.
ಪರಮತ್ರಿತ್ವ ಸ್ತೋತ್ರ
ಪಿತನಿಗೂ ಮತ್ತು ಸುತನಿಗೂ ಮತ್ತು ಪವಿತ್ರಾತ್ಮರಿಗೂ ಸ್ತೋತ್ರವಾಗಲಿ
ಆದಿಯಲ್ಲಿದ್ದ ಹಾಗೆಯೇ, ಈಗಲೂ
ಸದಾಕಾಲಕ್ಕೂ ಆಮೆನ್.
ಪ್ರಭು ಕಲಿಸಿದ ಪ್ರಾರ್ಥನೆ
ಸ್ವರ್ಗದಲ್ಲಿರುವ ನಮ್ಮ ತಂದೆಯೇ,
ನಿಮ್ಮ ನಾಮ ಪೂಜಿತವಾಗಲಿ
ನಿಮ್ಮ ರಾಜ್ಯ ಬರಲಿ
ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವಂತೆಯೇ
ಭುವಿಯಲ್ಲಿಯೂ ನೆರವೇರಲಿ.
ನಮ್ಮ ಅನುದಿನದ ಆಹಾರವನ್ನು
ಇಂದು ನಮಗೆ ನೀಡಿರಿ.
ನಮಗೆ ತಪ್ಪು ಮಾಡಿದವರನ್ನು
ನಾವು ಕ್ಷಮಿಸುವ ಪ್ರಕಾರ
ನಮ್ಮ ಪಾಪಗಳನ್ನು ಕ್ಷಮಿಸಿರಿ
ನಮ್ಮನ್ನು ಶೋಧನೆಗೆ ಒಳಪಡಿಸದೆ
ಕೇಡಿನಿಂದ ನಮ್ಮನ್ನು ರಕ್ಷಿಸಿರಿ. ಆಮೆನ್.
ನಮೋ ಮರಿಯ ಪ್ರಾರ್ಥನೆ
ನಮೋ ಮರಿಯಾ ಕೃಪಾ ಪೂರ್ಣೆಯೇ
ಪ್ರಭು ನಿಮ್ಮೊಡನೆ ಇದ್ದಾರೆ
ಸ್ತ್ರೀಯರಲ್ಲಿ ನೀವು ಧನ್ಯರು
ಮತ್ತು ನಿಮ್ಮ ಉದರದ ಫಲವಾದ
ಯೇಸುವೂ ಧನ್ಯರು.
ಸಂತ ಮರಿಯ ದೇವ ಮಾತೆಯೇ
ಪಾಪಿಗಳಾಗಿರುವ ನಮಗಾಗಿ
ಈಗಲೂ ನಮ್ಮ ಮರಣದ ಸಮಯದಲ್ಲೂ
ಪ್ರಾರ್ಥಿಸಿರಿ, ಆಮೆನ್.
ತ್ರಿಕಾಲ ಪ್ರಾರ್ಥನೆ
ಪ್ರಭುವಿನ ದೂತನು ಮರಿಯಮ್ಮನವರಿಗೆ ಸಂದೇಶವಿತ್ತನು
ಅವರು ಪವಿತ್ರಾತ್ಮರಿಂದ ಗರ್ಭಧರಿಸಿದರು. ನಮೋ ಮರಿಯಾ…
ಇಗೋ, ಪ್ರಭುವಿನ ಸೇವಕಿ
ನಿಮ್ಮ ವಚನದಂತೆಯೇ ನನಗಾಗಲಿ. ನಮೋ ಮರಿಯಾ…
ವಾಕ್ಯ ಎಂಬುವವರು ಮನುಜರಾದರು
ಮತ್ತು ನಮ್ಮಲ್ಲಿ ವಾಸಮಾಡಿದರು. ನಮೋ ಮರಿಯಾ…
ಶ್ಲೋಕ: ಪ್ರಭುವಿನ ವಾಗ್ದಾನಗಳಿಗೆ ನಾವು ಪಾತ್ರರಾಗುವಂತೆ
ಪ್ರತಿಶ್ಲೋಕ: ಪರಿಶುದ್ಧ ದೇವಮಾತೆಯೇ ನಮಗಾಗಿ ಪ್ರಾರ್ಥಿಸಿರಿ.
ಪ್ರಾರ್ಥಿಸೋಣ
ಸ್ವಾಮಿ, ದೇವದೂತನ ಸಂದೇಶದಿಂದ ನಿಮ್ಮ
ಪುತ್ರರಾದ ಯೇಸುಕ್ರಿಸ್ತರು ಮನುಷ್ಯ ಸ್ವಭಾವ ತಾಳಿದ್ದನ್ನು ಅರಿತಿರುವ ನಾವು,
ಅವರ ಪಾಡುಗಳ ಹಾಗೂ ಶಿಲುಬೆಯ ಮೂಲಕ ಪುನರುತ್ಥಾನದ ಮಹಿಮೆಯನ್ನು ಪಡೆಯುವಂತೆ,
ನಿಮ್ಮ ಕೃಪೆಯನ್ನು ನಮ್ಮ ಹೃದಯದಲ್ಲಿ ಸುರಿಸಬೇಕೆಂದು ನಮ್ಮ ಪ್ರಭುಕ್ರಿಸ್ತರ ಮುಖಾಂತರ
ನಿಮ್ಮನ್ನು ಪ್ರಾರ್ಥಿಸುತ್ತೇವೆ, ಆಮೆನ್.
ಪ್ರೇಷಿತರ ವಿಶ್ವಾಸ ಸಂಗ್ರಹ
ಸ್ವರ್ಗವನ್ನು ಭುವಿಯನ್ನೂ ಸೃಷ್ಟಿಸಿದ ಸರ್ವಶಕ್ತ ದೇವಪಿತನನ್ನು
ವಿಶ್ವಾಸಿಸುತ್ತೇನೆ.
ಅವರ ಏಕಮಾತ್ರ ಪುತ್ರರೂ, ನಮ್ಮ
ಪ್ರಭುವೂ ಆದ ಯೇಸುಕ್ರಿಸ್ತರನ್ನು ವಿಶ್ವಾಸಿಸುತ್ತೇನೆ.
ಇವರು ಪವಿತ್ರಾತ್ಮರಿಂದ ಗರ್ಭ ಧರಿಸಿದ ಕನ್ಯಾಮರಿಯಮ್ಮನವರಲ್ಲಿ ಜನಿಸಿದರು.
ಪೋಂತ್ಸಿಯಸ್ ಪಿಲಾತನ ಅಧಿಕಾರದಲ್ಲಿ ಯಾತನೆ ಅನುಭವಿಸಿ, ಶಿಲುಬೆಗೇರಿಸಲ್ಪಟ್ಟು,
ಮೃತರಾಗಿ ಸಮಾಧಿ ಮಾಡಲ್ಪಟ್ಟರು.
ಪಾತಾಳಕ್ಕಿಳಿದು ಮೂರನೇ ದಿನ ಮೃತರ ಮಧ್ಯದಿಂದ ಪುನರುತ್ಥಾನರಾಗಿ
ಎದ್ದರು.
ಸ್ವರ್ಗಕ್ಕೇರಿ ಪಿತನ ಬಲಗಡೆಯಲ್ಲಿ ಆಸೀನರಾಗಿದ್ದಾರೆ.
ಅಲ್ಲಿಂದ ಜೀವಂತರಿಗೂ ಮೃತರಿಗೂ ತೀರ್ಪುಕೊಡಲು ಬರುವರು.
ಪವಿತ್ರಾತ್ಮರನ್ನು
ವಿಶ್ವಾಸಿಸುತ್ತೇನೆ.
ಪವಿತ್ರ ಕಥೋಲಿಕ ಧರ್ಮಸಭೆಯನ್ನೂ, ಸಂತರ
ಅನ್ಯೋನ್ಯತೆಯನ್ನೂ ವಿಶ್ವಾಸಿಸುತ್ತೇನೆ.
ಪಾಪಪರಿಹಾರವನ್ನೂ ವಿಶ್ವಾಸಿಸುತ್ತೇನೆ.
ಮೃತರ ಪುನರುತ್ಥಾನವನ್ನೂ ವಿಶ್ವಾಸಿಸುತ್ತೇನೆ.
ನಿತ್ಯಜೀವವನ್ನೂ ವಿಶ್ವಾಸಿಸುತ್ತೇನೆ, ಆಮೆನ್.
ಪಾಪವಿಖ್ಯಾಪನೆ ಪ್ರಾರ್ಥನೆ
ಸರ್ವಶಕ್ತ ದೇವರಿಗೂ ಸಹೋದರ ಸಹೋದರಿಯರೇ ನಿಮಗೂ ಯೋಚನೆಯಿಂದಲೂ
ನುಡಿಯಿಂದಲೂ ನಡತೆಯಿಂದಲೂ ಕರ್ತವ್ಯ ಲೋಪದಿಂದಲೂ ನಾನು ಅನೇಕ ಪಾಪಗಳನ್ನು ಮಾಡಿದ್ದೇನೆಂದು ನಿವೇದಿಸುತ್ತೇನೆ.
(ಎದೆ ಬಡಿದುಕೊಳ್ಳುತ್ತಾ) ನನ್ನ ಪಾಪವೇ, ನನ್ನ ಪಾಪವೇ, ನನ್ನ ಮಹಾ ಪಾಪವೇ! ಆದುದರಿಂದ ಸದಾ ಕನ್ನಿಕೆಯಾದ
ಸಂತ ಮರಿಯಮ್ಮನವರನ್ನೂ ಸಕಲ ದೇವದೂತರನ್ನೂ ಸಂತರನ್ನೂ ಸಹೋದರ ಸಹೋದರಿಯರೇ ನಿಮ್ಮನ್ನೂ, ನನಗಾಗಿ ಪ್ರಭು
ದೇವರಲ್ಲಿ ಪ್ರಾರ್ಥಿಸಬೇಕೆಂದು ಬೇಡಿಕೊಳ್ಳುತ್ತೇನೆ, ಆಮೆನ್.
ಪಶ್ಚಾತ್ತಾಪದ ವಿಧಾನ
ಸರ್ವೇಶ್ವರಾ, ಪ್ರೀತಿಪಾತ್ರರಾದ
ತಂದೆಯೇ, ನನ್ನ ಪಾಪಗಳಿಂದ ನಿಮಗೆ ವಿರೋಧವಾಗಿ ನಡೆದು
ನಿಮ್ಮನ್ನು ದುಃಖಪಡಿಸಿದ್ದೇನೆ. ನಿಮ್ಮ ಪುತ್ರರಾದ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ್ದೇನೆ,
ನಿಮ್ಮ ದಂಡನೆಗೆ ಗುರಿಯಾಗಿದ್ದೇನೆ. ಆದುದರಿಂದ, ನಾನು
ಮಾಡಿದ ಪಾಪಗಳಿಗಾಗಿ ಬಹಳ ವ್ಯಸನಪಡುತ್ತೇನೆ, ಬಹಳ
ದುಃಖಪಡುತ್ತೇನೆ, ಬಹಳ ಪಶ್ಚಾತಾಪಪಡುತ್ತೇನೆ. ಇನ್ನು ಮೇಲೆ ನಿಮ್ಮ
ವರಪ್ರಸಾದದ ಸಹಾಯದಿಂದ ನಿಮ್ಮ ಚಿತ್ತದ ಪ್ರಕಾರ ನಡೆದು ಪಾಪ ಮಾಡುವುದಿಲ್ಲವೆಂದು ದೃಢ ಪ್ರತಿಜ್ಞೆ
ಮಾಡುತ್ತೇನೆಸ ಸ್ವಾಮಿ, ಆಮೆನ್.
ಪ್ರೀತಿಯ ವಿಧಾನ
ಸರ್ವೇಶ್ವರಾ, ನೀವು ಮಿತಿಯಿಲ್ಲದ ಪ್ರೀತಿಗೆ ಪಾತ್ರರಾಗಿದ್ದೀರಿ.
ನೀವು ನನ್ನನ್ನು ಪ್ರೀತಿಯಿಂದ ಸೃಷ್ಟಿಸಿ, ರಕ್ಷಿಸಿ ನಿಮ್ಮನ್ನೇ ನನಗೆ ತಿಳಿಯಪಡಿಸಿದ್ದೀರಿ. ಆದುದರಿಂದ,
ನಾನು ಎಲ್ಲಕ್ಕಿಂತಲೂ ಹೆಚ್ಚಾಗಿ ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ನಿಮಗೋಸ್ಕರ ನನ್ನಂತೆಯೇ ಪರರನ್ನು
ಪ್ರೀತಿಸುತ್ತೇನೆ, ಆಮೆನ್.
ವಿಶ್ವಾಸದ ವಿಧಾನ
ಸರ್ವೇಶ್ವರಾ, ನೀವು ಒಬ್ಬರೇ ದೇವರಾಗಿದ್ದೂ ನಿಮ್ಮಲ್ಲಿ
ಪಿತ, ಸುತ ಮತ್ತು ಪವಿತ್ರಾತ್ಮರು ಎಂಬ ದೈವೀ ವ್ಯಕ್ತಿಗಳಿದ್ದಾರೆಂದು ನಾನು ವಿಶ್ವಾಸಿಸುತ್ತೇನೆ.
ನಿಮ್ಮ ಪುತ್ರ ಮನುಷ್ಯರಾಗಿ ಮತ್ತು ನಮ್ಮ ಪಾಪಗಳಿಗೋಸ್ಕರ ಮೃತರಾಗಿ ಜೀವಂತರಿಗೂ ಮೃತರಿಗೂ ನ್ಯಾಯ ನಿರ್ಣಯ
ಮಾಡಲು ಬರುವರೆಂದು ವಿಶ್ವಾಸಿಸುತ್ತೇನೆ. ಪವಿತ್ರ ಕಥೋಲಿಕ ಧರ್ಮಸಭೆ ಬೋಧಿಸುವ ಎಲ್ಲಾ ಸತ್ಯಗಳನ್ನು
ನೀವೇ ತಿಳಿಯಪಡಿಸಿದ್ದೀರಿ. ಅನಂತ ಜ್ಞಾನವೂ, ಸತ್ಯವೂ ಆಗಿರುವ ನೀವು ಮೋಸ ಹೋಗುವವರಲ್ಲ ಹಾಗೂ ಮೋಸ
ಮಾಡುವವರು ಅಲ್ಲ ಎಂಬುದನ್ನು ನಾನು ವಿಶ್ವಾಸಿಸುತ್ತೇನೆ, ಈ ವಿಶ್ವಾಸದಲ್ಲಿ ನಾನು ಜೀವಿಸಲು ಮತ್ತು
ಸಾಯಲು ಸಂಕಲ್ಪಿಸುತ್ತೇನೆ, ಆಮೆನ್.
ಭರವಸೆಯ ವಿಧಾನ
ಸರ್ವೇಶ್ವರಾ, ನೀವು ಅನಂತ ಶಕ್ತಿಶಾಲಿ, ಪ್ರಾಮಾಣಿಕರು,
ದಯಾಪರರು ಮತ್ತು ಕೃಪಾಳು. ನೀವು ವಾಗ್ದಾನಿಸಿದ ಮೇರೆಗೆ ನಿಮ್ಮ ಕೃಪಾವರದಿಂದ ನನ್ನ ಎಲ್ಲಾ ಪಾಪಗಳಿಗೆ
ಕ್ಷಮೆಯನ್ನು ಮತ್ತು ಇಹಲೋಕದ ಜೀವನ ಮುಗಿದಾಗ ಅನಂತ ಆನಂದವನ್ನು ನಾನು ಪಡೆಯುವೆನೆಂದೆ ನನ್ನ ಭರವಸೆ.
ಈ ಭರವಸೆಯಲ್ಲಿ ನಾನು ಜೀವಿಸಲು ಮತ್ತು ಸಾಯಲು ಸಂಕಲ್ಪಸಿದ್ದೇನೆ, ಆಮೆನ್.
ಮಾತೆಯ ಮಧ್ಯಸ್ಥಿಕೆಗೆ ವಿಜ್ಞಾಪನೆ
ಓ ಮಹಾ ಮರುಕವುಳ್ಳ ಕನ್ನಿಕೆಯಾದ ಮಾತೆಯೇ, ನಿಮ್ಮ ಆಶ್ರಯವನ್ನು
ಕೋರಿ, ನಿಮ್ಮ ಮಧ್ಯಸ್ಥಿಕೆಯನ್ನು ವಿಜ್ಞಾಪಿಸಿ,
ನಿಮ್ಮ ಸಹಾಯವನ್ನು ಬೇಡಿಕೊಂಡವರಲ್ಲಿ ಒಬ್ಬರಾದರೂ ನಿರಾಶರಾದರು ಎಂಬುದನ್ನು
ನಾವು ಎಂದಿಗೂ ಕೇಳಲಿಲ್ಲ. ಕನ್ನಿಕೆಯರಲ್ಲಿ
ಶ್ರೇಷ್ಠ ಕನ್ನಿಕೆಯೇ, ನನ್ನ ತಾಯಿಯೇ ಈ ವಿಶ್ವಾಸದಿಂದ ಪ್ರೇರಣೆಗೊಂಡು, ನಿಮ್ಮ
ಬಳಿಗೆ ಓಡಿಬರುತ್ತೇನೆ; ಪಾಪದಿಂದ ದುಃಖಿತನಾಗಿ ನಿಮ್ಮ ಬಳಿಗೆ ಬಂದಿದ್ದೇನೆ, ನಿಮ್ಮೆದುರು ನಿಂತಿದ್ದೇನೆ.
ದೇವವಾಕ್ಯ ಮನುಜರಾದ ಕ್ರಿಸ್ತರ ಮಾತೆಯೇ, ನನ್ನ ಕೋರಿಕೆಯನ್ನು ತಿರಸ್ಕರಿಸದೆ ನಿಮ್ಮ ದಯೆಯಿಂದ ಆಲಿಸಿ
ಅನುಗ್ರಹಿಸಿ, ಆಮೆನ್.
ಬೆಳಗಿನ ಸ್ವಸಮರ್ಪಣಾ ಪ್ರಾರ್ಥನೆ
ನನ್ನ ಪ್ರೀತಿಯ ಸರ್ವೇಶ್ವರಾ, ಈ ದಿನ ಹೇಗಿರುತ್ತದೆ
ಎಂದು ನನಗೆ ತಿಳಿದಿಲ್ಲ – ನನಗೆ ತಿಳಿದಿರುವುದು
ಇಷ್ಟೇ: ನಿಮಗೆ ತಿಳಿಯದೇ ನನಗೆ ಏನೂ ಸಂಭವಿಸುವುದಿಲ್ಲ, ಮಾತ್ರವಲ್ಲ, ನಡೆಯುವ ಪ್ರತಿಯೊಂದು ನನ್ನ
ಒಳಿತಿಗಾಗಿಯೇ ನೀವು ಅನುಗ್ರಹಿಸುವುದು. ನಿಮ್ಮ ಪರಿಶುದ್ಧ ಮತ್ತು ನನ್ನಿಂದ ಗ್ರಹಿಸಲಾಗದ ನಿಮ್ಮ ಯೋಜನೆಗಳನ್ನು
ನಿಮ್ಮ ಮೇಲಿನ ಪ್ರೀತಿಗಾಗಿ ನನ್ನ ಪೂರ್ಣ ಹೃದಯದಿಂದ ಸ್ವೀಕರಿಸುತ್ತೇನೆ. ಆಮೆನ್.
ಸಂರಕ್ಷಕ ದೂತನಲ್ಲಿ ಪ್ರಾರ್ಥನೆ
ದೇವರ ದೂತನೇ, ನನ್ನ ಪ್ರೀತಿಯ ಸಂರಕ್ಷಕ ದೂತನೇ, ಸರ್ವೇಶ್ವರ
ದೇವರೇ ನಿಮ್ಮನ್ನು ನನಗೆ ನೀಡಿದ್ದಾರೆ ಎಂದು ವಿಶ್ವಾಸಿಸುತ್ತೇನೆ, ನನಗೆ ಬೆಳಕಾಗಿ, ಕಾವಲಾಗಿ ಮಾರ್ಗದರ್ಶನ
ನೀಡಲು ಮತ್ತು ನನ್ನನ್ನು ಮುನ್ನಡೆಸಲು ಈ ದಿನ ನನ್ನ ಜೊತೆಯಲ್ಲಿಯೇ ಇರಿ. ಆಮೆನ್.
ಶರಣಾಗತಿ ಪ್ರಾರ್ಥನೆ
ಪ್ರಭು ಯೇಸು ಕ್ರಿಸ್ತರೇ, ನನ್ನ ಸಂಪೂರ್ಣ ಸ್ವಾತಂತ್ರ್ಯ,
ನನ್ನ ತಿಳುವಳಿಕೆ ಮತ್ತು ನನ್ನ ಇಚ್ಛೆಯನ್ನು ನಿಮಗೆ ಸಮರ್ಪಿಸುತ್ತೇನೆ. ನಾನು ಹೊಂದಿರುವ ಮತ್ತು ಹರ್ಷಿಸುವ
ಎಲ್ಲವನ್ನೂ ನೀವೇ ನನಗೆ ನೀಡಿದ್ದೀರಿ. ನಿಮ್ಮ ಚಿತ್ತದಂತೆ ನಡೆಯಲು ನಾನು ಅದೆಲ್ಲವನ್ನೂ ನಿಮಗೆ ಒಪ್ಪಿಸುತ್ತಿದ್ದೇನೆ.
ನಿಮ್ಮ ಪ್ರೀತಿ ಮತ್ತು ನಿಮ್ಮ ಕೃಪೆಯೇ ನನ್ನ ಸಂಪತ್ತು. ಪ್ರಭು ಯೇಸುವೇ, ಇದಿಷ್ಟನ್ನು ನನಗೆ ನೀಡಿ, ಇನ್ನೇನನ್ನೂ
ನಾನು ಬೇಡುವುದಿಲ್ಲ. ಆಮೆನ್.
ಊಟಕ್ಕೆ ಮುಂಚೆ
ಸರ್ವಶಕ್ತ ದೇವರೇ, ನಿಮ್ಮ ಔದಾರ್ಯದಿಂದ ನಾವು ಪಡೆದಿರುವ
ಈ ಆಹಾರವನ್ನು ಮತ್ತು ಅದನ್ನು ಸೇವಿಸುವ ನಮ್ಮನ್ನು ನಮ್ಮ ಪ್ರಭು ಕ್ರಿಸ್ತರ ಮೂಲಕ ಆಶೀರ್ವದಿಸಿ. ಆಮೆನ್.
ಊಟದ ನಂತರದ
ಸರ್ವಶಕ್ತ ದೇವರೇ, ನೀವು ನೀಡಿದ ಈ ಆಹಾರಕ್ಕಾಗಿಯೂ
ಮತ್ತು ಎಲ್ಲ ಕೃಪಾವರಗಳಿಗಾಗಿಯೂ ನಮ್ಮ ಪ್ರಭು ಕ್ರಿಸ್ತರ ಮುಖಾಂತರ ನಿಮಗೆ ವಂದನೆ ಸಲ್ಲಿಸುತ್ತೇನೆ.
ಆಮೆನ್.
ಮೃತರಿಗಾಗಿ ಪ್ರಾರ್ಥನೆ
ಪ್ರಭುವೇ, ಮೃತರಿಗೆ ನಿತ್ಯವಿಶ್ರಾಂತಿಯನ್ನು ದಯಪಾಲಿಸಿರಿ,
ನಿತ್ಯಜ್ಯೋತಿ ಅವರ ಮೇಲೆ ಪ್ರಕಾಶಿಸಲಿ;
ಎಲ್ಲ ವಿಶ್ವಾಸಿಗಳ ಆತ್ಮಗಳು ಸರ್ವೇಶ್ವರನ ಕೃಪೆಯಿಂದ ಸಮಾಧಾನದಲ್ಲಿ ವಿಶ್ರಮಿಸಲಿ. ಆಮೆನ್.

Comments
Post a Comment