ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23

 

ಪಠ್ಯ: ಯೆರೆಮಿಯ 18: 18-23

18 ಆಗ ಜನರು, “ಬನ್ನಿ, ಈ ಯೆರೆಮಿಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.

19 ಯೆರೆಮಿಯ: “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ.

20 ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.

21 ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ. ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತುಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ.

22 ಕಳ್ಳಕಾಕರ ಗುಂಪು ಫಕ್ಕನೆ ಅವರ ಮೇಲೆ ಬೀಳಲಿ. ಅವರ ಮನೆಮಠಗಳಿಂದ ಕಿರಿಚಾಟ ಕೇಳಿಬರಲಿ. ಅವರು ನನ್ನನ್ನು ಕೆಡವಲು ಗುಂಡಿಯನ್ನು ತೋಡಿದ್ದಾರೆ. ನನ್ನ ಕಾಲುಗಳಿಗೆ ಉರುಲನ್ನು ಗುಟ್ಟಾಗಿ ಒಡ್ಡಿದ್ದಾರೆ.

23 ಸರ್ವೇಶ್ವರಾ, ನನ್ನನ್ನು ಕೊಲ್ಲಲು ಅವರು ಮಾಡಿಕೊಂಡಿರುವ ಸಂಚು ನಿಮಗೆ ತಿಳಿದಿದೆ. ಅವರ ಅಪರಾಧವನ್ನು ಕ್ಷಮಿಸಬೇಡಿ, ಅವರ ಪಾಪವನ್ನು ಅಳಿಸಬೇಡಿ, ಅದು ನಿಮ್ಮ ಕಣ್ಣೆದುರಿಗೇ ಇರಲಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪ ವ್ಯಕ್ತವಾಗುವಾಗ ಅವರಿಗೆ ತಕ್ಕುದನ್ನು ಮಾಡಿ.”

ಮುನ್ನುಡಿ

ಯೆರೆಮಿಯನ ಐದನೆಯ ವಿಖ್ಯಾಪನೆ ಪ್ರವಾದಿಗಳ ಸಾಹಿತ್ಯ (prophetic literature) ದಲ್ಲಿ ಅತ್ಯಂತ ವೈಯಕ್ತಿಕ ಮತ್ತು ಭಾವನಾತ್ಮಕ ಪಠ್ಯಗಳಲ್ಲಿ ಒಂದು. ಜೂಡಾದ ಜನರಿಗೆ ಅಪ್ರಿಯವಾದ ತೀರ್ಪಿನ ಸಂದೇಶವನ್ನು ತಲುಪಿಸುವ ನಿಯೋಜನೆಯೊಂದಿಗೆ ಯೆರೆಮಿಯನ ಈ ಪ್ರಾರ್ಥನೆ ಅವನ ಆಂತರಿಕ ಹೋರಾಟವನ್ನು ನಮಗೆ ತೋರಿಸುತ್ತದೆ. ಯೆರೆಮಿಯನ ಆರು ವಿಖ್ಯಾಪನೆಗಳಲ್ಲಿ, ಐದನೆಯ ವಿಖ್ಯಾಪನೆ ಅತ್ಯಂತ ಕ್ಲೇಶಕರವಾಗಿದೆ, ಏಕೆಂದರೆ, ಇದರಲ್ಲಿ ತನ್ನ ಶತ್ರುಗಳ ವಿರುದ್ಧ ಸೇಡು ತೀರಿಸಲು ಯೆರೆಮಿಯ ದೇವರನ್ನು ಬೇಡುತ್ತಾನೆ.

ಯೆರೆಮಿಯನ ಈ ಐದನೆಯ ವಿಖ್ಯಾಪನೆಯಲ್ಲಿ, ಅವನಿಗಾದ ತಿರಸ್ಕಾರ ಮತ್ತು ಎದುರಾದ ಜೀವಬೆದರಿಕೆಗಳು, ಅವನ ವೈಯಕ್ತಿಕ ಮತ್ತು ಆಧ್ಯಾತ್ಮಿಕ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ನಮಗೆ ಕಾಣಸಿಗುತ್ತದೆ. ಯೆರೆಮಿಯ ಪ್ರಾರ್ಥನೆಯೊಂದಿಗೆ ದೇವರ ಮುಂದೆ ಬರುತ್ತಿದ್ದಂತೆ, ಆತ್ಮದಲ್ಲಿ ಬಹಳವಾಗಿ ಸಂಕಟವನ್ನು ಎದುರಿಸುತ್ತಾನೆ. ಈ ಸಂಕಟ ಅವನ ಜೀವದ ವಿರುದ್ಧದ ಪಿತೂರಿಗಳ ಪರಿಣಾಮವಾಗಿತ್ತು, ಅದು ಯೆರೆಮಿಯನನ್ನು ಪ್ರಾರ್ಥಿಸಲು ಮತ್ತು ಪಿತೂರಿಗಳಿಗೆ ತಕ್ಕ ರೀತಿಯಲ್ಲಿ ಉತ್ತರ ನೀಡಲು ಪ್ರೇರೇಪಿಸಿತು.

ಯೆರೆಮಿಯನ ಈ ಮನವಿಯನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು: 

  • ಯೆರೆಮಿಯ, ಅವನ ವಿರುದ್ಧದ ಬೆದರಿಕೆಯನ್ನು ವಿವರಿಸುತ್ತಾನೆ (18:18), 
  • ಯೆರೆಮಿಯ, ದೇವರಿಗೆ ವೈಯಕ್ತಿಕ ಮನವಿ ಮಾಡುತ್ತಾನೆ (18:19-20); ಮತ್ತು 
  • ಯೆರೆಮಿಯ, ತನ್ನ ಶತ್ರುಗಳ ಮೇಲೆ ತೀರ್ಪು ನೀಡಲು ದೇವರನ್ನು ವಿನಂತಿಸುತ್ತಾನೆ (18:21-23).

ಈ ವಿಖ್ಯಾಪನೆಯನ್ನು ಪ್ರೇರೇಪಿಸಿದ್ದು ಏನು?

ಸರ್ವೇಶ್ವರ ಯೆರೆಮಿಯನಿಗೆ ಕುಂಬಾರನ ಮನೆಗೆ ಹೋಗಿ ಕುಂಬಾರನ ಜೇಡಿಮಣ್ಣಿನ ಕೆಲಸವನ್ನು ವೀಕ್ಷಿಸಲು ಹೇಳಿದ ನಂತರ ಈ ಐದನೆಯ ವಿಖ್ಯಾಪನೆ ಬರುತ್ತದೆ (ಯೆರೆಮಿಯ 18:1–17). ಯೆರೆಮಿಯ ಕುಂಬಾರನ ಮನೆಗೆ ಭೇಟಿ ನೀಡಿದ ಉದ್ದೇಶ ದೇವರು ಲೋಕದಲ್ಲಿ ಹೇಗೆ ಕೆಲಸ ಮಾಡುತ್ತಾನೆ ಎಂಬುದನ್ನು ಅವನಿಗೆ ತಿಳಿಸುವುದು. ಆ ಭೇಟಿಯ ನಂತರ, ಯೆರೆಮಿಯ ಜನರನ್ನು ಜೇಡಿಮಣ್ಣಿಗೆ ಹೋಲಿಸುತ್ತಾನೆ; ದೇವರು ಜನರ ಪ್ರತಿಕ್ರಿಯೆಯನ್ನು ಅವಲಂಬಿಸಿ ನಾಶ ಅಥವಾ ಪುನಃಸ್ಥಾಪನೆಗಾಗಿ (destruction or restoration) ತನ್ನ ಇಚ್ಛೆಯಂತೆ ಮರುರೂಪಿಸಬಹುದು ಎಂದು ಸಾರುತ್ತಾನೆ. ಯೆರೆಮಿಯನ ಸಂದೇಶ ದೇವರ ತೀರ್ಪಿನ ಬಗ್ಗೆ ಎಚ್ಚರಿಕೆಯಾಗಿತ್ತು, ಮಾತ್ರವಲ್ಲ, ಭವಿಷ್ಯದ ಬಗ್ಗೆ ಭರವಸೆಯನ್ನು ನೀಡುವ ಸಂದೇಶವೂ ಆಗಿತ್ತು. ಯೆರೆಮಿಯ ಜೂಡಾದ ಜನರಿಗೆ, ತೀರ್ಪು ಸನ್ನಿಹಿತವಾಗಿದ್ದರೂ, ಅವರು ಪಶ್ಚಾತ್ತಾಪಪಟ್ಟರೆ, ದೇವರು ಅವರನ್ನು ಕ್ಷಮಿಸುತ್ತಾನೆ ಮತ್ತು ಜೂಡಾವನ್ನು ಬ್ಯಾಬಿಲೋನಿನ ಸೈನ್ಯ ಶಿಕ್ಷಿಸಲು ಬಿಡುವುದಿಲ್ಲ ಎಂದು ಘೋಷಿಸುತ್ತಾನೆ.

ಯೆರೆಮಿಯನ ಐದನೆಯ ವಿಖ್ಯಾಪನೆ , ಯೆರೆಮಿಯ 18:18–23

ಯೆರೆಮಿಯ ಜನರೊಂದಿಗೆ ಮಾತನಾಡಿದ ನಂತರ, ಪಶ್ಚಾತ್ತಾಪದಿಂದ ಪ್ರತಿಕ್ರಿಯಿಸುವ ಬದಲು ಜನರು ಅವನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಅವನ ವಿರುದ್ಧ ತಮ್ಮ ದ್ವೇಷವನ್ನು ತೋರಿಸುತ್ತಾರೆ.

ಯೆರೆಮಿಯನ ಜೀವಕ್ಕೆ ವಿರುದ್ಧವಾದ ಪಿತೂರಿ

ವಾ 18: ಆಗ ಜನರು, “ಬನ್ನಿ, ಈ ಯೆರೆಮಿಯನ ವಿರುದ್ಧ ಒಳಸಂಚುಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು.

ಈ ವಾಕ್ಯ, ಯೆರೆಮಿಯನ ಸಂದೇಶಕ್ಕೆ ಜನರ ವಿರೋಧದ ಹಿಂದಿನ ಹಲವಾರು ಕಾರಣಗಳನ್ನು ನಮಗೆ  ಬಹಿರಂಗಪಡಿಸುತ್ತದೆ. ಜನರು ಯೆರೆಮಿಯನ ಸಂದೇಶವನ್ನು ತಿರಸ್ಕರಿಸಿದರು, ಏಕೆಂದರೆ, ಅವರ ಬಳಿ ನಿಯಮಗಳನ್ನು ಕಲಿಸುವ ಧರ್ಮಶಾಸ್ತ್ರಿಗಳು ಇದ್ದರು; ಅವರ ಜೀವನವನ್ನು ಹೇಗೆ ನಡೆಸಬೇಕೆಂದು ಸಲಹೆ ನೀಡುವ ಬುದ್ಧಿವಂತ ವ್ಯಕ್ತಿಗಳು ಅವರಲ್ಲಿದ್ದರು; ಅವರಿಗೆ ದೇವರ ವಾಕ್ಯಗಳನ್ನು ಬೋಧಿಸುವ ಪ್ರವಾದಿಗಳೂ ಇದ್ದರು. ಜೊತೆಗೆ, ಯೆರೆಮಿಯನ ಸಂದೇಶಕ್ಕೆ ವಿರುದ್ಧವಾದ ಸಂದೇಶವನ್ನು ಪ್ರಸ್ತುತಪಡಿಸುವ ಬೇರೆ ಪ್ರವಾದಿಗಳು ಇದ್ದರು.

ಯೆರೆಮಿಯನ ತೀರ್ಪಿನ ಸಂದೇಶ ನ್ಯಾಯತೀರ್ಪಿನ ಬದಲು ಶಾಂತಿಯ ಸಂದೇಶವನ್ನು ಘೋಷಿಸುತ್ತಿದ್ದ ಸುಳ್ಳು ಪ್ರವಾದಿಗಳ ಸಂದೇಶಗಳಿಗೆ ವಿರುದ್ಧವಾಗಿತ್ತು. ಸುಳ್ಳು ಪ್ರವಾದಿಗಳು, “ಅವರು, ನನ್ನ ಜನರ ಗಾಯಗಳು ಗುಣವಾಗದಿದ್ದರೂ ಅವು ಕೇವಲ ಮಚ್ಚೆಗಳೋ ಎಂಬಂತೆ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ"  ವಂಚಿಸುತ್ತಿದ್ದರು. (ಯೆರೆಮಿಯ 6:14).

ನಿಜವಾದ ಪಶ್ಚಾತ್ತಾಪಕ್ಕಾಗಿ ಯೆರೆಮಿಯನ ಕರೆ ಮತ್ತು ಮುಂಬರುವ ನ್ಯಾಯತೀರ್ಪಿನ ಎಚ್ಚರಿಕೆ ಜನರು ಯೆರೆಮಿಯನನ್ನು ಸುಳ್ಳು ಪ್ರವಾದಿ ಎಂದು ಭಾವಿಸುವಂತೆ ಮಾಡಿತು, ಏಕೆಂದರೆ ಜನರು ದೇವರ ನಿಜವಾದ ಪ್ರವಾದಿಗಳೆಂದು ನಂಬಿದ್ದ ಪ್ರವಾದಿಗಳ ಸಂದೇಶಕ್ಕೆ ಅದು ವಿರುದ್ಧವಾಗಿತ್ತು.

ಯೆರೆಮಿಯನ ವಿಖ್ಯಾಪನೆ ಅವನ ವಿರುದ್ಧ ಜನರ ದ್ವೇಷವನ್ನು ತೋರಿಸುತ್ತದೆ. ಜನರು "ಅವನ ವಿರುದ್ಧ ಆರೋಪಗಳನ್ನು ತರಲು" ಬಯಸಿದರು. ಹೀಬ್ರೂ ಪಠ್ಯ, "Come on and let us strike at him with our tongue, (Jer 18:18 NAU)" ಎಂದಿದೆ. ಇದನ್ನು, "ನಮ್ಮ ನಾಲಗೆಯಿಂದ ಅವನ ಮೇಲೆ ದಾಳಿ ಮಾಡೋಣ" ಎಂದು ಅನುವಾದಿಸಬೇಕು. ಈ ಮಾತುಗಳು ಯೆರೆಮಿಯನ ವಿರುದ್ಧ ಅವರು ಮಾಡಲಿದ್ದ ಚಾರಿತ್ರ್ಯವಧೆ ಮತ್ತು ಸಾರ್ವಜನಿಕ ಮಾನನಷ್ಟದ ಸಂಘಟಿತ ಕಾರ್ಯವನ್ನು ತೋರಿಸುತ್ತದೆ. ಯೆರೆಮಿಯನನ್ನು ವೈಯಕ್ತಿಕವಾಗಿ ಅಪಖ್ಯಾತಿಗೊಳಿಸುವ ಮೂಲಕ ಅವನ ವಿರೋಧಿಗಳು ಅವನ ಸವಾಲಿನ ಸಂದೇಶವನ್ನು ತಟಸ್ಥಗೊಳಿಸಲು ಆಶಿಸಿದರು.

ಇದರ ಜೊತೆಗೆ, ಯೆರೆಮಿಯನ ಯಾವುದೇ ಮಾತುಗಳಿಗೆ ಗಮನ ಕೊಡದಿರಲು ಜನರು ದೃಢನಿಶ್ಚಯ ಮಾಡಿಕೊಂಡಿದ್ದರು. ಯೆರೆಮಿಯ ಸತ್ಯವನ್ನು ಮಾತನಾಡುತ್ತಿರಬಹುದು ಎಂಬ ಸಾಧ್ಯತೆಯನ್ನು ಪರಿಗಣಿಸಲು ಸಹ ಜನರು ಉದ್ದೇಶಪೂರ್ವಕವಾಗಿ ನಿರಾಕರಿಸಿದರು. ಯೆರೆಮಿಯನ ವಿರುದ್ಧವಾದ ತಿರಸ್ಕಾರ, ಟೀಕೆ ಮತ್ತು ಜೀವಬೆದರಿಕೆಗಳು ಯೆರೆಮಿಯನನ್ನು ದೇವರ ಮುಂದೆ ಬರಲು ಪ್ರೇರೇಪಿಸಿತು, ದೇವರ ಸಹಾಯಕ್ಕಾಗಿ ಮನವಿ ಮಾಡುವಂತೆ ಮಾಡಿತು.

ಯೆರೆಮಿಯನ ಮನವಿ

ವಾ 19 ಯೆರೆಮೀಯ: “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ.

ವಾ 20 ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.

“ನನಗೆ ಕಿವಿಗೊಡಿ,” ಮತ್ತು “ಗಮನಿಸಿ” ಎಂಬ ಪದಗಳು ದೇವರಿಗೆ ಯೆರೆಮಿಯನ ಮನವಿಯ ತುರ್ತುಸ್ಥಿತಿಯನ್ನು ತೋರಿಸುತ್ತವೆ. ಯೆರೆಮಿಯ ದೇವರನ್ನು ತನ್ನ ಮಾತುಗಳನ್ನು ಕೇಳಲು ಮಾತ್ರವಲ್ಲ, ತನ್ನ ವಿರೋಧಿಗಳ ಮಾತುಗಳನ್ನೂ, “ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ” ಎಂದು ಬೇಡುತ್ತಾನೆ. ತನ್ನ ವಿರೋಧಿಗಳು ತನ್ನ ವಿರುದ್ಧ ಏನು ಹೇಳುತ್ತಿದ್ದಾರೆಂದು ಕೇಳಲು ಅವನು ಮಾಡಿದ ಮನವಿ ಅವನ ವಿರೋಧಿಗಳು ಕಠಿಣ ಶಿಕ್ಷೆಗೆ ಅರ್ಹರು ಎಂದು ದೇವರಿಗೆ ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ.

ಜನರ ಟೀಕೆ ಮತ್ತು ವಿರೋಧದಿಂದ ಯೆರೆಮಿಯ ಆಶ್ಚರ್ಯಚಕಿತನಾಗುತ್ತಾನೆ. ಅವನು ಕೇಳುತ್ತಾನೆ, “ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ?” ಯೆರೆಮಿಯನ ಉದ್ದೇಶ ಜನರ ಯೋಗಕ್ಷೇಮವಾಗಿತ್ತು. ಈಗ ತನ್ನ ಪ್ರಾಣವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವ ಜನರಿಗಾಗಿ ಅವನು ಮಧ್ಯಸ್ಥಿಕೆ ವಹಿಸಿದ್ದನು. ಜನರಿಗಾಗಿ ಯೆರೆಮಿಯನ ಪ್ರಾರ್ಥನೆ, ಜನರಿಗಾಗಿ ಯೆರೆಮಿಯನ ಮಧ್ಯಸ್ಥಿಕೆ ಇವಕ್ಕೆ ಯಾವ ಪ್ರತಿಫಲವೂ ದೊರಕಲಿಲ್ಲ ಎಂದು ತಿಳಿಸುತ್ತದೆ (ಯೆರೆಮಿಯ 7:16, 11:14), ಆದರೂ ಯೆರೆಮಿಯ ಪ್ರಾರ್ಥನಾ ಪ್ರವಾದಿಯಾಗಿ ತನ್ನ ಸೇವೆಯಲ್ಲಿ ಮುಂದುವರೆದನು ಎಂದು ಇದು ಸೂಚಿಸುತ್ತದೆ.

"ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ." ಗುಂಡಿ ಎಂದರೆ, ಯೆರೆಮಿಯನನ್ನು ಮೋಸಗೊಳಿಸಲು, ಅವನನ್ನು ಬೀಳಿಸಲು ಅಥವಾ ಅಪಖ್ಯಾತಿಗೊಳಿಸಲು ಉದ್ದೇಶಿಸಲಾದ ಪಿತೂರಿಗಳನ್ನು ಪ್ರತಿನಿಧಿಸುತ್ತದೆ. "ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು…" ಎಂಬುದು ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ಸನ್ನಿವೇಶದಲ್ಲಿ ಬಳಸುವ ಭಾಷೆ.

ಈ ಮಾತುಗಳು ಯೆರೆಮಿಯ ಜನರ ರಕ್ಷಕನಾಗಿ ಕಾರ್ಯನಿರ್ವಹಿಸಿದನು ಮತ್ತು ಜನರ ಅಂತ್ಯಕ್ಕೆ ಕಾರಣವಾಗುವ ತೀರ್ಪಿನಿಂದ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದನು ಎಂಬುದನ್ನು ಸೂಚಿಸುತ್ತದೆ. ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿರುವ ಜನರಿಗಾಗಿ ಮಾಡಿದ ತನ್ನ ಪ್ರಾರ್ಥನೆಯನ್ನು ದೇವರಿಗೆ ನೆನಪಿಸುವ ಮೂಲಕ, ಯೆರೆಮಿಯ ದೇವರಿಗೆ ತನ್ನ ನಿಷ್ಠೆಯನ್ನು ಹಾಗೂ ತನ್ನ ಜೀವಹಾನಿ ಮಾಡುವವರ ಕೈಯಲ್ಲಿ ಅವನು ಎದುರಿಸುತ್ತಿರುವ ಅನ್ಯಾಯವನ್ನು ನಿರೂಪಿಸುತ್ತಾನೆ.

ನ್ಯಾಯಕ್ಕಾಗಿ ಯೆರೆಮಿಯನ ಪ್ರಾರ್ಥನೆ

ವಾ 21 “ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ. ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತುಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ.”

ವಾ 22 ಕಳ್ಳಕಾಕರ ಗುಂಪು ಫಕ್ಕನೆ ಅವರ ಮೇಲೆ ಬೀಳಲಿ. ಅವರ ಮನೆಮಠಗಳಿಂದ ಕಿರಿಚಾಟ ಕೇಳಿಬರಲಿ. ಅವರು ನನ್ನನ್ನು ಕೆಡವಲು ಗುಂಡಿಯನ್ನು ತೋಡಿದ್ದಾರೆ. ನನ್ನ ಕಾಲುಗಳಿಗೆ ಉರುಲನ್ನು ಗುಟ್ಟಾಗಿ ಒಡ್ಡಿದ್ದಾರೆ.

ಯೆರೆಮಿಯನ ಐದನೆಯ ವಿಖ್ಯಾಪನೆಯ ಮಾತುಗಳು ಅತ್ಯಂತ ಕಷ್ಟಕರವಾದ ಅಂಶವನ್ನು ಪ್ರತಿನಿಧಿಸುತ್ತವೆ; ತನ್ನ ಶತ್ರುಗಳ ಮೇಲೆ ಮತ್ತು ಅವರ ಕುಟುಂಬಗಳ ಮೇಲೆ ದೇವರು ಕಠಿಣ ತೀರ್ಪು ತರಬೇಕೆಂದು ಯೆರೆಮಿಯ ವಿನಂತಿಸುತ್ತಾನೆ. ಯೆರೆಮಿಯನ ವಿನಂತಿ ಮಕ್ಕಳು, ಹೆಂಡತಿಯರು, ಪುರುಷರು ಮತ್ತು ಯುವಕರು ಸೇರಿದಂತೆ ಇಸ್ರಯೇಲ್ ಸಮಾಜದ ಎಲ್ಲಾ ಸದಸ್ಯರ ಮೇಲೆ ಪರಿಣಾಮ ಬೀರುವ ಕಠಿಣ ತೀರ್ಪಿನ ಬಗ್ಗೆಯಾಗಿತ್ತು. ಧರ್ಮೋಪದೇಶಕಾಂಡ 28:15-68 ರಲ್ಲಿ ವಿವರಿಸಲಾದ ಒಡಂಬಡಿಕೆಯ ಶಾಪಗಳನ್ನು ತರಬೇಕೆಂದು ಅವನು ದೇವರನ್ನು ಕೇಳುತ್ತಿದ್ದಾನೆ ಎಂಬುದನ್ನು ಇದು ಸೂಚಿಸುತ್ತದೆ. ಒಡಂಬಡಿಕೆಯ ಶಾಪಗಳಲ್ಲಿ ಕ್ಷಾಮ, ಕತ್ತಿ, ವಿಯೋಗ, ವ್ಯಾಧಿ ಮತ್ತು ಸೇನೆಯ ಸೋಲು ಇವೆ.

ವಾ 23 ಸರ್ವೇಶ್ವರಾ, ನನ್ನನ್ನು ಕೊಲ್ಲಲು ಅವರು ಮಾಡಿಕೊಂಡಿರುವ ಸಂಚು ನಿಮಗೆ ತಿಳಿದಿದೆ. ಅವರ ಅಪರಾಧವನ್ನು ಕ್ಷಮಿಸಬೇಡಿ, ಅವರ ಪಾಪವನ್ನು ಅಳಿಸಬೇಡಿ, ಅದು ನಿಮ್ಮ ಕಣ್ಣೆದುರಿಗೇ ಇರಲಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪ ವ್ಯಕ್ತವಾಗುವಾಗ ಅವರಿಗೆ ತಕ್ಕುದನ್ನು ಮಾಡಿ.”

ತನ್ನ ವಿರೋಧಿಗಳು ತನ್ನ ವಿರುದ್ಧ ಹೂಡಿದ ಎಲ್ಲದರ ಬಗ್ಗೆಯೂ ದೇವರು ತಿಳಿದಿದ್ದಾನೆ ಎಂಬುದನ್ನು ಯೆರೆಮಿಯ ಒತ್ತಿಹೇಳುತ್ತಾನೆ. ಯೆರೆಮಿಯ ದೇವರಿಗೆ ಹೇಳುತ್ತಾನೆ: “ಅವರ ಅಪರಾಧವನ್ನು ಕ್ಷಮಿಸಬೇಡಿ.” ಯೆರೆಮಿಯನ ಈ ವಿನಂತಿ ಅನೇಕ ವರ್ಷಗಳಿಂದ ಅವನು ಘೋಷಿಸುತ್ತಿರುವ ಪಶ್ಚಾತ್ತಾಪ ಮತ್ತು ದೇವರ ಕರುಣೆಯ ಸಂದೇಶಕ್ಕೆ ವಿರುದ್ಧವಾಗಿದೆ. ಈ ಮಾತುಗಳು ಯೆರೆಮಿಯನನ್ನು ವಿರೋಧಿಸಿದವರ ತಿರಸ್ಕಾರ  ಮತ್ತು ಅವನ ವಿರುದ್ಧದ ದುಷ್ಟ ಉದ್ದೇಶಗಳು ಅವನನ್ನು ಹತಾಶೆ ಮತ್ತು ದುಃಖಕ್ಕೆ ಒಳಪಡಿಸಿರುವುದನ್ನು ಪ್ರತಿಬಿಂಬಿಸುತ್ತವೆ.

"ಅವರು ನಿನ್ನ ಮುಂದೆ ಎಡವಿ ಬೀಳಲಿ" ಎಂಬ ನುಡಿಗಟ್ಟು ಒಬ್ಬ ವ್ಯಕ್ತಿಯನ್ನು ತಪ್ಪಿತಸ್ಥರೆಂದು ನ್ಯಾಯಾಲಯದಲ್ಲಿ ಪರಿಗಣಿಸುವ ಕಲ್ಪನೆಯನ್ನು ಹೊಂದಿದೆ. ದೇವರು, ಅವನ ಮತ್ತು ಜನರ ನಡುವೆ ತೀರ್ಪು ನೀಡಿದಾಗ, ನೀತಿವಂತ ನ್ಯಾಯಾಧೀಶನಾದ ದೇವರು ಜೂಡಾದ ಒಡಂಬಡಿಕೆಯ ಉಲ್ಲಂಘನೆಗಳ ಆಧಾರದ ಮೇಲೆ ತನ್ನ ತೀರ್ಪನ್ನು ನೀಡುತ್ತಾನೆ ಎಂದು ಯೆರೆಮಿಯ ನಂಬುತ್ತಾನೆ.

ಯೆರೆಮಿಯ ತನ್ನ ಪ್ರಾರ್ಥನೆಯನ್ನು ದೇವರ ಕೋಪದ ಉಲ್ಲೇಖದೊಂದಿಗೆ ಕೊನೆಗೊಳಿಸುತ್ತಾನೆ, "ನಿಮ್ಮ ಕೋಪ ವ್ಯಕ್ತವಾಗುವಾಗ ಅವರಿಗೆ ತಕ್ಕುದನ್ನು ಮಾಡಿ." ಯೆರೆಮಿಯ ದೇವರಿಗೆ ತೀರ್ಪನ್ನು ವಿಳಂಬ ಮಾಡದಂತೆ, "ನೀವು ಕೋಪಗೊಂಡಿರುವಾಗಲೇ ಅವರಿಗೆ ತಕ್ಕುದನ್ನು ಮಾಡಿ" ಎಂದು ಒತ್ತಾಯಿಸುತ್ತಾನೆ. ಇದರರ್ಥ ದೇವರು ಕೋಪಗೊಳ್ಳುವುದನ್ನು ನಿಲ್ಲಿಸಿದರೆ, ತೀರ್ಪು ಸಂಭವಿಸುವುದಿಲ್ಲ ಎಂಬುದಾಗಿದೆ.

ವಿರೋಧವನ್ನು ಎದುರಿಸಲು ಸುವಾರ್ತಾ ಪ್ರಸಾರ ಕಾರ್ಯಭಾರಿಗಳಿಗೆ ವಿಖ್ಯಾಪನೆಯ ಅನ್ವಯಿಕೆಗಳು

  • ಯೆರೆಮಿಯನ ಐದನೆಯ ವಿಖ್ಯಾಪನೆ ಸುವಾರ್ತಾ ಪ್ರಸಾರ ಸೇವೆಯಲ್ಲಿರುವವರಿಗೆ ಸವಾಲನ್ನು ಒಡ್ಡುತ್ತದೆ. ಒಬ್ಬರ ಶತ್ರುಗಳನ್ನು ಪ್ರೀತಿಸಿ ಅವರಿಗಾಗಿ ಪ್ರಾರ್ಥಿಸುವಂತೆ ಹೇಳುವ ಯೇಸುವಿನ ಆಜ್ಞೆಯ ಬೆಳಕಿನಲ್ಲಿ, ಸುವಾರ್ತಾ ಪ್ರಸಾರ ಕಾರ್ಯಭಾರಿಗಳು ತಮ್ಮನ್ನು ವಿರೋಧಿಸುವವರ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಾರ್ಥಿಸಲು ಸಾಧ್ಯವಿಲ್ಲ. ಆದಾಗ್ಯೂ, ಕೋಪ, ಭಯ ಮತ್ತು ನ್ಯಾಯಕ್ಕಾಗಿ ಬಯಕೆಗಳನ್ನು ಒಳಗೊಂಡಂತೆ  ಮಾನವ ಭಾವನೆಗಳನ್ನು ದೇವರ ಮುಂದೆ ಅರ್ಪಿಸಿಕೊಳ್ಳಲು ಸುವಾರ್ತಾ ಪ್ರಸಾರ ಕಾರ್ಯಭಾರಿಗಳಿಗೆ ಅವಕಾಶವಿರುವುದನ್ನು ಯೆರೆಮಿಯನ ಈ ವಿಖ್ಯಾಪನೆಯಲ್ಲಿ ಕಾಣಬಹುದು.
  • ವಿರೋಧವನ್ನು ಎದುರಿಸುವ ಸುವಾರ್ತಾ ಪ್ರಸಾರ ಕಾರ್ಯಭಾರಿಗಳು ಸೇವೆಯಲ್ಲಿ ಅನುಭವಿಸುವ ದ್ರೋಹ, ಕಿರುಕುಳ ಅಥವಾ ತಿರಸ್ಕಾರದ ನೋವನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಮೂಲಕ ಯೆರೆಮಿಯನ ಮಾದರಿಯನ್ನು ಅನುಸರಿಸಬಹುದು. ತಮ್ಮ ಸಮುದಾಯಗಳಲ್ಲಿ ನ್ಯಾಯ, ಸದಾಚಾರ ಅಥವಾ ಸಾಂಸ್ಥಿಕ ವೈಫಲ್ಯಗಳ ಬಗ್ಗೆ ಅಹಿತಕರ ಸತ್ಯಗಳನ್ನು ಎದುರಿಸುವಾಗ ಸುವಾರ್ತಾ ಪ್ರಸಾರ ಕಾರ್ಯಭಾರಿಗಳು ಯೆರೆಮಿಯನ ಮಾದರಿಯಿಂದ ಆದರ್ಶವನ್ನು ಪಡೆಯಬಹುದು.
  • ಇಂದಿನ ಸುವಾರ್ತಾ ಪ್ರಸಾರ ಕಾರ್ಯಭಾರಿಗಳು, ತಮ್ಮ ವೈಫಲ್ಯಗಳಿಂದ ಉಂಟಾಗುವ ವಿರೋಧ ಮತ್ತು ಸವಾಲಿನ ಸತ್ಯಗಳ ನಿಷ್ಠಾವಂತ ಆತ್ಮವಿಮರ್ಶೆ ಮತ್ತು ಸಾರ್ವಜನಿಕ ಪ್ರತಿರೋಧದವನ್ನು ಗುರುತಿಸುವ ಆರೋಗ್ಯಕರ ದೃಷ್ಟಿಕೋನವನ್ನು ಕಾಪಾಡಿಕೊಳ್ಳಬಹುದು.
  • ಒಬ್ಬರ ಶತ್ರುಗಳಿಗಾಗಿ ಪ್ರಾರ್ಥಿಸಲು ಮತ್ತು ಅವರನ್ನು ಪ್ರೀತಿಸಲು ಹೇಳಿದ ಯೇಸುವಿನ ಬೋಧನೆಯನ್ನು (ಮತ್ತಾ. 5:44) ಮೇಲಿನ ವಿಖ್ಯಾಪನೆ ನಿರಾಕರಿಸುವುದಿಲ್ಲ , ಬದಲಿಗೆ ಅದನ್ನು ಉದ್ದೀಪನಗೊಳಿಸಿ, ಸುವಾರ್ತಾ ಪ್ರಸಾರ ಕಾರ್ಯಭಾರಿಗಳು ತಮ್ಮ ವಿರೋಧಿಗಳನ್ನು ನಾಶಮಾಡುವಂತೆ ಬೇಡುವ ಬದಲು, ಅವರ ವಿಮೋಚನೆಯನ್ನು ಬಯಸುವಂತೆ ಪ್ರಾರ್ಥಿಸಲು ಮಾರ್ಗದರ್ಶನ ನೀಡುತ್ತದೆ.

ಸಮಾರೋಪ

ಯೆರೆಮಿಯನ ಐದನೆಯ ವಿಖ್ಯಾಪನೆ, ಪ್ರತಿಕೂಲ ವಾತಾವರಣದಲ್ಲಿ ದೇವರ ಒಬ್ಬ ಪ್ರಾಮಾಣಿಕ ಸಂದೇಶವಾಹಕ ಎದುರಿಸುವ ಮಾನಸಿಕ ಮತ್ತು ಆಧ್ಯಾತ್ಮಿಕ ಸವಾಲುಗಳ ಒಂದು ನೋಟವನ್ನು ನೀಡುತ್ತದೆ. ಇದು ಪ್ರಾಮಾಣಿಕತೆ, ದೈವಭಯ ಮತ್ತು ಭಕ್ತಿಯ ಆಳ ಹಾಗೂ ಮಾನವ ಸಹಜ ಭಾವನೆಗಳು, ಸಮಕಾಲೀನ ಸುವಾರ್ತಾ ಪ್ರಸಾರ ಕಾರ್ಯಭಾರಿಗಳ ಸೇವೆಗೆ ಎದುರಾಗುವ ಸವಾಲುಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ.

ಯೆರೆಮಿಯನ ವಿಖ್ಯಾಪನೆ, ಇಂದು ವಿರೋಧವನ್ನು ಎದುರಿಸುತ್ತಿರುವ ಸುವಾರ್ತಾ ಪ್ರಸಾರ ಕಾರ್ಯಭಾರಿಗಳಿಗೆ, ತಾವೂ ಹಾಗೆಯೇ ಮಾಡುವ ರೀತಿಯನ್ನು ಬೋಧಿಸುತ್ತಿಲ್ಲ, ಬದಲಿಗೆ, ದೇವರ ಕರೆಗೆ ಪ್ರಾಮಾಣಿಕರಾಗಿ ಉಳಿಯುವುದರಲ್ಲಿ ಎದುರಾಗುವ ಕಷ್ಟ, ತೆರಬೇಕಾದ ಬೆಲೆ ಮತ್ತು ಬೆಲೆಕಟ್ಟಲಾಗದ ಅದರ ಪ್ರತಿಫಲಕ್ಕೆ ಸುಂದರ ಸಾಕ್ಷಿಯಾಗಿದೆ.

ಸಮಾಜದ ಅಂಚಿನಲ್ಲಿರುವವರಿಗೆ ಅಥವಾ ಸಕ್ರಿಯ ದಮನವನ್ನು ಎದುರಿಸುತ್ತಿರುವವರಿಗೆ ಯೆರೆಮಿಯನ ಐದನೆಯ ಈ ವಿಖ್ಯಾಪನೆ ಎಚ್ಚರಿಕೆ ಮತ್ತು ಪ್ರೋತ್ಸಾಹ ಎರಡನ್ನೂ ನೀಡುತ್ತದೆ. ಪ್ರಾಮಾಣಿಕ ಸಾಕ್ಷಿಯ ಮಾರ್ಗ ದುಃಖವನ್ನು ಒಳಗೊಂಡಿರಬಹುದು, ಆದರೆ ಅದು ಇತಿಹಾಸದುದ್ದಕ್ಕೂ ದೇವರ ಪ್ರಾಮಾಣಿಕ ಪ್ರವಾದಿಗಳು ನಡೆದ ಮಾರ್ಗವಾಗಿ ಉಳಿಯುತ್ತದೆ.

[ಇದು ಪ್ರೋಕ್ಲೌಡೆ ಮರಿಯೋಟಿನಿ ಅವರ Jeremiah’s Fifth Confession (Jeremiah 18:18–23) 
ಎಂಬ ಪ್ರಬಂಧದ ಕನ್ನಡ ಭಾಷಾಂತರಇದರ ಮೂಲ ಬರವಣಿಗೆಯನ್ನು Jeremiah’s Fifth Confession (Jeremiah 18:18–23) | Dr. Claude Mariottini – Professor of Old Testament ಇದರಲ್ಲಿ ಕಾಣಬಹುದು.]

Comments

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ