ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)
ಯೆರೆಮಿಯ 11:18–23 ರಿಂದ "ಯೆರೆಮಿಯನ ವಿಖ್ಯಾಪನೆಗಳು" (Confessions of Jeremiah) ಪ್ರಾರಂಭವಾಗುತ್ತವೆ. ಇದರಲ್ಲಿ ಪ್ರವಾದಿ ಯೆರೆಮಿಯನ ವೈಯಕ್ತಿಕ ಪ್ರಾರ್ಥನೆಗಳು ಮತ್ತು ಅವನ ದೈವಿಕ ಕರೆಯನ್ನು ನಿರ್ವಹಿಸುವಾಗ ಅವನಲ್ಲಿ ಉಂಟಾಗುತ್ತಿದ್ದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಹೋರಾಟಗಳನ್ನು ಇಲ್ಲಿ ನಾವು ಕಾಣಬಹುದು. ಈ ವಿಖ್ಯಾಪನೆಗಳು ಬಹಳ ಹೃದಯಸ್ಪರ್ಶಿ ಮತ್ತು ಭಾವನಾಭರಿತ ಹಾಗೂ ಪ್ರವಾದನೆಯ ಜವಾಬ್ದಾರಿಯ ಹೊರೆ ಮತ್ತು ಯೆರೆಮಿಯನ ಮಾನವ ದುರ್ಬಲತೆಗಳನ್ನು ಬಹಿರಂಗಪಡಿಸುತ್ತವೆ.
ಯೆರೆಮಿಯನ ಮೊದಲನೆಯ ವಿಖ್ಯಾಪನೆ, ನಂತರ ಮಾಡುವ ಎಲ್ಲ ವಿಖ್ಯಾಪನೆಗಳಿಗೆ ಪ್ರಾರಂಭವನ್ನು ಒದಗಿಸುತ್ತದೆ. ಪ್ರವಾದಿ ತನ್ನ ಕರೆ ಮತ್ತು ಅವನು ಇತರರಿಂದ ಎದುರಿಸುತ್ತಿರುವ ದ್ವೇಷ ಇವುಗಳೊಂದಿಗೆ ಹೋರಾಡುತ್ತಿರುವಂತೆಯೇ ಅದು ಇನ್ನೂ ಹೆಚ್ಚು ತೀವ್ರವಾಗುತ್ತದೆ. ಮೊದಲ ವಿಖ್ಯಾಪನೆಯಲ್ಲಿ, ಯೆರೆಮಿಯ ತನ್ನ ಸ್ವಂತ ಜನರಿಂದ, ವಿಶೇಷವಾಗಿ ತನ್ನ ಊರಾದ ಅನಾಥೋತಿನವರಿಂದ ದ್ರೋಹ ಮತ್ತು ಸಾವಿನ ಬೆದರಿಕೆಯನ್ನು ಎದುರಿಸುತ್ತಾನೆ. ಈ ಭಾಗದಲ್ಲಿ ನ್ಯಾಯಕ್ಕಾಗಿ ಅವನ ಕೂಗು ಮತ್ತು ದೇವರಲ್ಲಿ ಅವನ ಅಚಲ ವಿಶ್ವಾಸವನ್ನು ನಾವು ಕಾಣಬಹುದು.
ಈ ವಿಖ್ಯಾಪನೆ ಮುಖ್ಯವಾದುದು, ಏಕೆಂದರೆ, ಇದು ಯೆರೆಮಿಯನ ವೈಯಕ್ತಿಕ ದುಃಖವನ್ನು ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ದೈವಿಕ ನ್ಯಾಯ, ಮಾನವನ ಬಂಡಾಯ ಮತ್ತು ವಿಶ್ವಾಸಕ್ಕೆ ತೆರಬೇಕಾದ ಬೆಲೆಯನ್ನು ಪ್ರತಿಬಿಂಬಿಸುತ್ತದೆ. ದೇವರ ಸೇವಕ ಅಥವಾ ಪ್ರವಾದಿಯ ಜೀವನ ವಿರೋಧಗಳಿಂದ ಮತ್ತು ಸವಾಲುಗಳಿಂದ ತುಂಬಿರುತ್ತದೆ ಎಂಬುದನ್ನು ಇದು ನೆನಪಿಸುತ್ತದೆ; ಆದರೂ ದೇವರ ನೀತಿವಂತ ತೀರ್ಪಿನ ಭರವಸೆ ಪ್ರವಾದಿತ್ವವನ್ನು ಕಾಪಾಡುತ್ತದೆ ಎಂಬುದನ್ನು ನಾವು ಕಾಣಬಹುದು. ಯೆರೆಮಿಯನ ಮೊದಲ ವಿಖ್ಯಾಪನೆ ಪ್ರವಾದಿ ಒಬ್ಬ ಮನುಷ್ಯಮಾತ್ರ ಎಂಬುದನ್ನು ಅವನಿಗೂ ನಮಗೂ ತೋರಿಸುತ್ತದೆ, ಅಲ್ಲದೇ, ದೇವರು ಆಯ್ಕೆಮಾಡಿಕೊಂಡ ಸಂದೇಶವಾಹಕರು ಸಹ ಅನುಮಾನ ಮತ್ತು ಭಯದ ವಿರುದ್ಧ ಅಂತರಂಗದಲ್ಲೇ ಮತ್ತು ನ್ಯಾಯಕ್ಕಾಗಿ ಬಹಿಂರಂಗದಲ್ಲಿ ಹೋರಾಡಬೇಕಾಗುತ್ತದೆ ಎಂದು ತೋರಿಸುತ್ತದೆ. ಈ ವಿಖ್ಯಾಪನೆ ಬೈಬಲ್ಲಿನ ಅನೇಕ ಪ್ರಲಾಪಗಳಲ್ಲಿ ಕಂಡುಬರುವ ಮಾದರಿಯನ್ನು ಅನುಸರಿಸುತ್ತದೆ, ಉದಾಹರಣೆಗೆ, ದೂರು (ವಚನಗಳು 18–19), ದೇವರಿಗೆ ಮನವಿ (ವಚನಗಳು 20) ಮತ್ತು ದೇವರ ಪ್ರತಿಕ್ರಿಯೆ (ವಚನಗಳು 21–23).
ಯೆರೆಮಿಯನ ಮೊದಲ ವಿಖ್ಯಾಪನೆಯನ್ನು ಅರ್ಥಮಾಡಿಕೊಳ್ಳಲು ಅವನು ಪ್ರವಾದಿಸಿದ ಐತಿಹಾಸಿಕ ಮತ್ತು ಸಾಮಾಜಿಕ ಸಂದರ್ಭವನ್ನು ಪರಿಗಣಿಸುವುದು ಅತ್ಯಗತ್ಯ. ಯೆರೆಮಿಯ ಜೂಡಾದ ಇತಿಹಾಸದಲ್ಲಿ ಕ್ರಿಸ್ತಪೂರ್ವ 7 ನೇ ಶತಮಾನದ ಉತ್ತರಾರ್ಧ ಮತ್ತು 6 ನೇ ಶತಮಾನದ ಆರಂಭದಲ್ಲಿದ್ದ ಒಂದು ಪ್ರಕ್ಷುಬ್ಧ ಅವಧಿಯಲ್ಲಿ ಜೀವಿಸಿದ್ದನು. ಇದು ರಾಜಕೀಯ ಅಸ್ಥಿರತೆ, ನೈತಿಕ ಅವನತಿ ಮತ್ತು ಸನ್ನಿಹಿತವಾದ ನ್ಯಾಯತೀರ್ಪಿನ ಸಮಯ. ಉದಯಿಸುತ್ತಿರುವ ಬ್ಯಾಬಿಲೋನಿಯನ್ ಸಾಮ್ರಾಜ್ಯ ಜೂಡಾ ರಾಜ್ಯಕ್ಕೆ ಬೆದರಿಕೆ ಹಾಕಿತ್ತು. ಇದೇ ಸಮಯದಲ್ಲಿ, ಜೂಡಾದ ಬಂಡಾಯಕೋರ ಜನರಿಗೆ ಪಶ್ಚಾತ್ತಾಪ, ಪರಿವರ್ತನೆ ಮತ್ತು ಎಚ್ಚರಿಕೆಯ ಸಂದೇಶವನ್ನು ತಲುಪಿಸಲು ಯೆರೆಮಿಯನನ್ನು ಕಳುಹಿಸಲಾಯಿತು.
ಜೆರುಸಲೆಮ್ನಿಂದ ಈಶಾನ್ಯಕ್ಕೆ ಕೆಲವು ಮೈಲುಗಳಷ್ಟು ದೂರದಲ್ಲಿರುವ ಯೆರೆಮಿಯನ ಊರು ಅನಾಥೋತ್, ಒಂದು ಲೇವಿಯರ ನಗರ (ಯೆಹೋಶುವ 21:18) ಮತ್ತು ಅವನು ಬೆಂಬಲ ಮತ್ತು ಒಗ್ಗಟ್ಟನ್ನು ಪಡೆಯಬೇಕಾಗಿದ್ದ ಅವನ ಸ್ವಂತಸ್ಥಳ. ಅನಾಥೋತ್ನ ಪುರುಷರಲ್ಲಿ ಬಹುಶಃ ಯೆರೆಮಿಯನ ಸಂಬಂಧಿಕರು ಮತ್ತು ಬಾಲ್ಯದ ಪರಿಚಯಸ್ಥರು ಇದ್ದರು; ಅವರ ದ್ರೋಹ ಇನ್ನೂ ಹೆಚ್ಚಾಗಿ ಯೆರೆಮಿಯನನ್ನು ನೋಯಿಸಿದ್ದು ಇದೇ ಕಾರಣಕ್ಕಾಗಿ. ಆದಾಗ್ಯೂ, ಇಲ್ಲಿಯೇ ಯೆರೆಮಿಯ ವಿರೋಧ ಮತ್ತು ಅವನ ಜೀವದ ವಿರುದ್ಧ ಪಿತೂರಿಗಳನ್ನು ಎದುರಿಸಿದನು. ಅನಾಥೋತ್ನ ಜನರು ಯೆರೆಮಿಯನ ಸಂದೇಶವನ್ನು ತಿರಸ್ಕರಿಸಿದರು, ಬಹುಶಃ ಅದು ಅವರ ಸ್ವಂತ ಹಿತಾಸಕ್ತಿಗಳು ಮತ್ತು ಸಿದ್ಧಾಂತಗಳೊಂದಿಗೆ ಸಂಘರ್ಷಿಸಿದ್ದರಿಂದ; ಜೂಡಾದ ಜನರು ದೇವರ ವಾಕ್ಯವನ್ನು ಪೂರ್ತಿಯಾಗಿ ತಿರಸ್ಕರಿಸಿದ್ದರು ಎಂಬುದನ್ನು ಪ್ರವಾದಿಯ ಬಗ್ಗೆ ಅವರ ವೈರತ್ವ ಎತ್ತಿ ತೋರಿಸುತ್ತದೆ.
ಇದೇ ಕಾಲದಲ್ಲಿ ಯೋಷೀಯ, ಯೆಹೋಯಾಕೀಮ್ ಮತ್ತು ಚಿದ್ಕೀಯ ಸೇರಿದಂತೆ ಹಲವಾರು ರಾಜರ ಆಳ್ವಿಕೆಯನ್ನು ಸಹ ನಾವು ಕಾಣುತ್ತೇವೆ. ಯೋಷೀಯನ ಸುಧಾರಣೆಗಳ ಸಮಯದಲ್ಲಿ ಯೆರೆಮಿಯನ ಸೇವೆ ಪ್ರಾರಂಭವಾಯಿತು. ಯೋಷೀಯನ ಧಾರ್ಮಿಕ ಸುಧಾರಣೆಗಳು ಸ್ಥಳೀಯ ಧಾರ್ಮಿಕ ಪದ್ಧತಿಗಳಿಗೆ ಬೆದರಿಕೆಯನ್ನುಂಟುಮಾಡಿದವು, ಆದರೆ ಈ ಸುಧಾರಣೆಗಳು ಮೇಲ್ನೋಟಕ್ಕೆ ಮಾತ್ರ ಆದವು ಆದರೆ ನಿಜವಾದ ಪಶ್ಚಾತ್ತಾಪವನ್ನು ತರುವಲ್ಲಿ ವಿಫಲವಾದವು. ಜನರು ತಮ್ಮ ದಂಗೆಯನ್ನು ಮುಂದುವರಿಸಿದಂತೆ ಯೆರೆಮಿಯನ ಎಚ್ಚರಿಕೆಗಳು ಇನ್ನೂ ಹೆಚ್ಚಾದವು, ಆದರೆ ಅವುಗಳಿಗೆ ಪ್ರತಿರೋಧ ಮತ್ತು ಹಗೆತನವು ಅಷ್ಟೇ ಹೆಚ್ಚಾಯಿತು.
ಯೆರೆಮಿಯನ ದೂರು
ವಚನ 18: “ಸರ್ವೇಶ್ವರ ಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ್ದ ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು.”
ಈ ವಚನದಲ್ಲಿ, ದೇವರು ತನ್ನ ವಿರೋಧಿಗಳ ದುಷ್ಟ ಉದ್ದೇಶಗಳನ್ನು ಬಹಿರಂಗಪಡಿಸಿದರೆಂದು ಯೆರೆಮಿಯ ಒಪ್ಪಿಕೊಳ್ಳುತ್ತಾನೆ. ಪ್ರವಾದಿಗೆ ತನ್ನ ಸುತ್ತಲೂ ಅಡಗಿರುವ ಅಪಾಯದ ಬಗ್ಗೆ ತಿಳಿದಿರಲಿಲ್ಲ, ಆದರೆ ದೇವರು ಯೆರೆಮಿಯನ ಜೀವನದ ವಿರುದ್ಧದ ಪಿತೂರಿಯನ್ನು ಅವನಿಗೆ ಬಹಿರಂಗಪಡಿಸಿದರು. ಈ ಬಹಿರಂಗಪಡಿಸುವಿಕೆಯಲ್ಲಿ ಯೆರೆಮಿಯ ಮತ್ತು ದೇವರ ನಡುವಿನ ನಿಕಟ ಸಂಬಂಧವನ್ನು ಮತ್ತು ತಮ್ಮ ಸೇವಕನ ಮೇಲೆ ದೇವರಿಗಿರುವ ರಕ್ಷಣಾತ್ಮಕ ಕಾಳಜಿಯನ್ನು ನಾವು ಕಾಣಬಹುದು. ದೇವರ ಕಣ್ಣಿನಿಂದ ಏನನ್ನೂ ಮರೆಮಾಡಲಾಗದು ಎಂಬುದನ್ನು ಇದು ನೆನಪಿಸುತ್ತದೆ ಮತ್ತು ಅವರು ತಮ್ಮ ಜನರಿಗೆ ಬುದ್ಧಿವಂತಿಕೆ ಮತ್ತು ಮಾರ್ಗದರ್ಶನದ ಮೂಲ ಎಂಬುದನ್ನು ತಿಳಿಸುತ್ತದೆ.
ವಚನ 19: “ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. ʼಮರವನ್ನು ಫಲಸಹಿತ ನಾಶಪಡಿಸೋಣ, ಜೀವಲೋಕದಿಂದ ಇವನನ್ನು ನಿರ್ಮೂಲಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ,ʼ ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ನನಗೆ ಅದು ತಿಳಿದಿರಲಿಲ್ಲ.’”
ಇಲ್ಲಿ, ಯೆರೆಮಿಯ ತಾನು ಎದುರಿಸುತ್ತಿರುವ ದ್ರೋಹದ ಬಗ್ಗೆ ತನ್ನ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸುತ್ತಾನೆ. “ವಧೆಗೆ ಒಯ್ಯುವ ಸಾಧು ಕುರಿಯಂತೆ” ಎಂಬ ರೂಪಕ ಅವನ ಮುಗ್ಧತೆ ಮತ್ತು ದುರ್ಬಲತೆಯನ್ನು ಹಾಗೂ ಅವನ ಶತ್ರುಗಳ ವಿಶ್ವಾಸಘಾತುಕತನವನ್ನು ತಿಳಿಸುತ್ತದೆ. “ಮರವನ್ನು ಫಲಸಹಿತ ನಾಶಪಡಿಸೋಣ” ಎಂಬ ನುಡಿಗಟ್ಟು ಯೆರೆಮಿಯನನ್ನು ಕೊಲ್ಲುವ ಉದ್ದೇಶವನ್ನು ಮಾತ್ರವಲ್ಲದೆ ಅವನ ಕುಟುಂಬ ಮತ್ತು ಪೀಳಿಗೆಯನ್ನೇ ನಿರ್ಮೂಲನ ಮಾಡುವ ಉದ್ದೇಶವನ್ನು ಸೂಚಿಸುತ್ತದೆ. ಇದು ಪ್ರವಾದಿಯ ಧ್ವನಿಯನ್ನು ಸಂಪೂರ್ಣವಾಗಿ ಮೌನಗೊಳಿಸಲು ಪ್ರಯತ್ನಿಸಿದ ಅವನ ವಿರೋಧಿಗಳ ಭಯಂಕರ ದ್ವೇಷವನ್ನು ಪ್ರತಿಬಿಂಬಿಸುತ್ತದೆ.
ಯೆರೆಮಿಯನ ಈ ಅನುಭವ ಕ್ರಿಸ್ತನ ಸಂಕಟವನ್ನು ಮುನ್ಸೂಚಿಸುತ್ತದೆ; ಯೇಸು ಸಹ ದ್ರೋಹಕ್ಕೊಳಗಾಗಿ ಮುಗ್ಧ ಕುರಿಮರಿಯಂತೆ ಸಾವಿಗೆ ತುತ್ತಾದರು (ಯೆಶಾಯ 53:7; ಯೋಹಾನ 1:29). ಈ ಸಾಮ್ಯತೆ ವಿಶ್ವಾಸಕ್ಕೆ ತೆರಬೇಕಾದ ಬೆಲೆ ಮತ್ತು ದೇವರ ಸೇವಕರ ಅಂತಿಮ ಸಮರ್ಥನೆಯ ಬಗ್ಗೆ ನಮಗೆ ನೆನಪಿಸುತ್ತದೆ.
ವಚನ 20: "ಆಗ ನಾನು, “ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತೀಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ,” ಎಂದೆನು."
ಈ
ವಚನದಲ್ಲಿ, ಯೆರೆಮಿಯ
ದೂರು ಹೇಳುವುದರಿಂದ ಪ್ರಾರ್ಥನೆಗೆ ಬದಲಾಗುತ್ತಾನೆ, ದೇವರೇ ನ್ಯಾಯ ತೀರಿಸುವಂತೆ
ಮನವಿ ಮಾಡುತ್ತಾನೆ.
ಮಾನವನ ಒಳಗಿನ
ಆಲೋಚನೆಗಳು ಮತ್ತು
ಉದ್ದೇಶಗಳನ್ನು ಪರೀಕ್ಷಿಸುವ ನೀತಿವಂತ ನ್ಯಾಯಾಧೀಶನಾಗಿ ದೇವರ
ಪಾತ್ರವನ್ನು ತನ್ನ ಜೀವನದಲ್ಲಿ ಅವನು ಒಪ್ಪಿಕೊಳ್ಳುತ್ತಾನೆ.
ತನ್ನ ಕಾರ್ಯವನ್ನು
ದೇವರಿಗೆ ಒಪ್ಪಿಸುವ
ಮೂಲಕ, ಯೆರೆಮಿಯ
ದೈವಿಕ ನ್ಯಾಯದಲ್ಲಿ
ತನ್ನ ವಿಶ್ವಾಸವನ್ನು
ಮತ್ತು ಜವಾಬ್ದಾರಿಯನ್ನು
ತನ್ನ ಮೇಲೆಯೇ
ತೆಗೆದುಕೊಳ್ಳಲು ನಿರಾಕರಿಸುವುದನ್ನು ನಾವು ಇಲ್ಲಿ ನೋಡಬಹುದು.
ಪ್ರತೀಕಾರಕ್ಕಾಗಿ ಅವನು ಮಾಡುವ ಈ ಪ್ರಾರ್ಥನೆ ವೈಯಕ್ತಿಕ ಸೇಡಿನಿಂದ
ಮಾಡಿದ್ದಲ್ಲ, ಬದಲಾಗಿ ದೇವರ ನ್ಯಾಯನೀತಿ ಮೇಲುಗೈ
ಸಾಧಿಸಬೇಕೆಂಬ ಬಯಕೆಯಿಂದ ಹುಟ್ಟಿದ್ದು.
ಹೀಬ್ರೂ ಭಾಷೆಯಲ್ಲಿ ʼನಕಮ್ʼ (naqam) ಎಂದರೆ, "ಸೇಡು" ಅಥವಾ "ಪ್ರತೀಕಾರ" ಎಂದು ಅನುವಾದಿಸಬಹುದು. ಈ ಪದದ ಹಿಂದೆ ವ್ಯಕ್ತಿಯ ವಿರುದ್ಧ ಮಾಡಿದ ದುಷ್ಟತನಕ್ಕೆ ಪ್ರತೀಕಾರ ತೀರಿಸುವ ಕಲ್ಪನೆ ಇಲ್ಲ, ಬದಲಾಗಿ ಸಮರ್ಥನೆಯ ಕಲ್ಪನೆ ಇದೆ. ತನ್ನನ್ನು ವಿರೋಧಿಸುವ ಜನರ ಮುಂದೆ ತನ್ನನ್ನು ದೇವರೇ ಕಳುಹಿಸಿರುವ ಪ್ರವಾದಿ ಎಂಬುದನ್ನು ಸಮರ್ಥಿಸುವಂತೆ ಯೆರೆಮಿಯ ದೇವರನ್ನು ಕೇಳುತ್ತಿರುವುದನ್ನು ಗಮನಿಸಬಹುದು.
ಈ ವಚನ ʼಹಿಡಿಶಾಪ ಹಾಕುವ ಪ್ರಾರ್ಥನೆಗಳʼ (imprecatory prayers) ರೀತಿಯಲ್ಲಿದೆ. ನ್ಯಾಯ ಮತ್ತು ಕ್ಷಮೆಯ ನಡುವಿನ ದ್ವಂದ್ವದ ಬಗ್ಗೆ ನಮ್ಮನ್ನು ಕಾಡುತ್ತವೆ ಮತ್ತು ತನ್ನ ಸಮರ್ಥನೆಗಾಗಿ ಯೆರೆಮಿಯನ ಕೂಗು ಕಠಿಣವೆಂದು ತೋರುತ್ತದೆ, ಆದರೂ, ದುಷ್ಟತನ ಮತ್ತು ಅನ್ಯಾಯದಿಂದ ತುಂಬಿದ ಈ ಜಗತ್ತಿನಲ್ಲಿ ದೇವರ ನ್ಯಾಯಕ್ಕಾಗಿ ಹಾತೊರೆಯುವ ಪ್ರವಾದಿಯನ್ನು ಇಲ್ಲಿ ನಾವು ಕಾಣಬಹುದು.
ಯೆರೆಮಿಯನಿಗೆ ದೇವರ ಪ್ರತಿಕ್ರಿಯೆ
ವಚನಗಳು 21–23: “ಹೀಗಿರಲು, “ಸರ್ವೇಶ್ವರನ ಹೆಸರೆತ್ತಿ ಪ್ರವಾದನೆ ಮಾಡಬೇಡ, ಮಾಡಿದರೆ ನಮ್ಮ ಕೈಯಿಂದಲೆ ನೀನು ಸಾಯುವೆ,” ಎಂದು ಅನಾತೋತಿನವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಿದ್ದರು. ಅವರ ವಿಷಯವಾಗಿ ಸರ್ವೇಶ್ವರ, “ಇಗೋ ಅವರನ್ನು ನಾನು ದಂಡಿಸಿಯೇ ತೀರುವೆನು. ಅವರ ಯುವಕರು ಕತ್ತಿಗೆ ತುತ್ತಾಗುವರು. ಅವರ ಗಂಡುಹೆಣ್ಣು ಮಕ್ಕಳು ಕ್ಷಾಮದಿಂದ ಸಾಯುವರು. ದಂಡನೆಯ ಕಾಲವನ್ನು ಗೊತ್ತುಮಾಡಿರುವೆನು. ಅದು ಬಂದಾಗ ಅವರಲ್ಲಿ ಯಾರೂ ಉಳಿಯರು. ಇದು ನನ್ನ ತೀರ್ಮಾನ,” ಎಂದರು.”
ಯೆರೆಮಿಯನ ಪ್ರಾರ್ಥನೆಗೆ ದೇವರ ಪ್ರತಿಕ್ರಿಯೆ ತ್ವರಿತ ಮತ್ತು ನಿರ್ಣಾಯಕವಾಗಿತ್ತು. ಅನಾತೋತಿನ ಜನರು ದೇವರ ವಿರುದ್ಧ ಮಾಡಿದ ಬಂಡಾಯ ಮತ್ತು ಅವರ ಪ್ರವಾದಿಗೆ ಮಾಡಿದ ವಿರೋಧಕ್ಕಾಗಿ ಶಿಕ್ಷೆಗೆ ಒಳಗಾಗುವುದರಲ್ಲಿದ್ದರು. ಯೆರೆಮಿಯನನ್ನು ಮೌನಗೊಳಿಸುವ ಅವರ ಬೆದರಿಕೆ ಅಂತಿಮವಾಗಿ ದೇವರ ವಿರುದ್ಧವೇ ಧಿಕ್ಕಾರದ ಕ್ರಿಯೆಯಾಗಿತ್ತು ಮತ್ತು ಅದು ದೇವರ ತೀರ್ಪನ್ನು ತಮ್ಮ ಮೇಲೆ ಬರಮಾಡಿಕೊಳ್ಳುವಂತದ್ದಾಗಿತ್ತು. ಅವರಿಗೆ ಬರಲಿರುವ ಶಿಕ್ಷೆ ಕಠಿಣವಾಗಿತ್ತು: ಕತ್ತಿಯಿಂದ ಸಾವು, ಕ್ಷಾಮ ಮತ್ತು ಅವರ ವಂಶದ ನಿರ್ಮೂಲನೆ. ಈ ಪ್ರವಾದನೆ ದೇವರ ವಾಕ್ಯವನ್ನು ತಿರಸ್ಕರಿಸುವುದರ ಗಂಭೀರತೆ ಮತ್ತು ಬಂಡಾಯದ ಭೀಕರ ಪರಿಣಾಮಗಳನ್ನು ಒತ್ತಿಹೇಳುತ್ತದೆ.
ಈ ತೀರ್ಪು ಕಠಿಣವೆಂದು ತೋರುತ್ತದೆಯಾದರೂ, ಇದು ವಿಧೇಯತೆಗೆ ಆಶೀರ್ವಾದಗಳು ಮತ್ತು ಅವಿಧೇಯತೆಗೆ ಶಿಕ್ಷೆಗಳ ಒಡಂಬಡಿಕೆಯ ಚೌಕಟ್ಟಿಗೆ ಒಳಪಡುತ್ತದೆ (ಧರ್ಮೋಪದೇಶಕಾಂಡ 28). ಇದು ದೇವರ ಪವಿತ್ರತೆ ಮತ್ತು ಅವರ ನ್ಯಾಯದ ಗಂಭೀರ ಜ್ಞಾಪನೆಗೆ ಹಾಗೂ ಅವರ ವಾಕ್ಯಕ್ಕೆ ಅವರ ಅಚಲ ಬದ್ಧತೆಗೆ ಸೂಚಕವಾಗಿದೆ.
ಇಂದಿನ ಸುವಾರ್ತಾ ಪ್ರಸಾರಕರಿಗೆ ಸಂದೇಶಗಳು
· ಯೆರೆಮಿಯನ ಮೊದಲನೆಯ ವಿಖ್ಯಾಪನೆ ಇಂದಿನ ಸುವಾರ್ತಾ ಪ್ರಸಾರಕರಿಗೆ ಮತ್ತು ವಿಶ್ವಾಸಿಗಳಿಗೆ ಅನೇಕ ಒಳನೋಟಗಳನ್ನು ಮತ್ತು ಪಾಠಗಳನ್ನು ಕಲಿಸುತ್ತದೆ. ದೇವರ ಸತ್ಯವನ್ನು ನಿಷ್ಠೆಯಿಂದ ಸಾರುವ ಕಾರ್ಯಕ್ಕೆ ವಿರೋಧ ಮತ್ತು ಹಗೆತನದ ಮೂಲಕ ಎದುರಾಗುವ ಸವಾಲುಗಳನ್ನು ಇಲ್ಲಿ ಕಾಣುತ್ತೇವೆ. ಯೆರೆಮಿಯ ತನ್ನ ಸ್ವಂತ ಜನರಿಂದ ದ್ರೋಹ ಮತ್ತು ಬೆದರಿಕೆಗಳನ್ನು ಎದುರಿಸಿದಂತೆಯೇ, ಆಧುನಿಕ ದಿನದ ಸುವಾರ್ತಾ ಪ್ರಸಾರಕರು ಪ್ರತಿರೋಧ, ಟೀಕೆ ಮತ್ತು ವೈಯಕ್ತಿಕ ದಾಳಿಗಳನ್ನು ಎದುರಿಸಬೇಕಾಗುತ್ತದೆ. ಸುವಾರ್ತಾ ಪ್ರಸಾರಕರ ಮುಖ್ಯ ಜವಾಬ್ದಾರಿ, ಮಾನವರನ್ನು ಮೆಚ್ಚಿಸುವುದು ಅಥವಾ ಜನರ ಅನುಮೋದನೆ ಹೊಂದುವುದು ಅಲ್ಲ, ದೇವರಿಗೆ ಮತ್ತು ಅವರ ಕರೆಗೆ ಪ್ರಾಮಾಣಿಕರಾಗಿರುವುದು ಎಂದು ಈ ಭಾಗ ನೆನಪಿಸುತ್ತದೆ.
·
ಇದಲ್ಲದೆ, ದೇವರ ನ್ಯಾಯತೀರ್ಪಿನಲ್ಲಿ
ಯೆರೆಮಿಯನ ಅಚಲ
ನಂಬಿಕೆ, ಭಕ್ತರು
ಅನುಸರಿಸಬೇಕಾದ ಒಂದು ಉದಾಹರಣೆಯಾಗಿ ನಿಲ್ಲುತ್ತದೆ. ಪ್ರತಿಕೂಲ
ಸಮಯದಲ್ಲಿ, ಶಾಂತಿಗಾಗಿ
ಸೇಡು ತೀರಿಸಿಕೊಳ್ಳುವುದು
ಅಥವಾ ಸತ್ಯವನ್ನು
ರಾಜಿ ಮಾಡಿಕೊಳ್ಳುವುದು
ಸಲ್ಲದು ಎಂಬುದನ್ನು ಮನಗಾಣಿಸುತ್ತದೆ. ಆದರೂ,
ವ್ಯಾಜ್ಯವನ್ನು ದೇವರಿಗೆ ವಹಿಸಿಬಿಡುವ ಮತ್ತು ಅವರ
ನೀತಿವಂತ ತೀರ್ಪಿನ
ಮೇಲೆ ಅವಲಂಬಿತರಾಗುವ
ಮಹತ್ವವನ್ನು ಯೆರೆಮಿಯ ನಮಗೆ ಕಲಿಸುತ್ತಾನೆ.
·
ಈ ಭಾಗ, ಶಿಷ್ಯತ್ವಕ್ಕೆ
ತೆರಬೇಕಾದ ಬೆಲೆ ಮತ್ತು ಕ್ರೈಸ್ತ
ಜೀವನದ ದುಃಖಮಯ
ವಾಸ್ತವತೆಯನ್ನು ಎತ್ತಿ ತೋರಿಸುತ್ತದೆ. ದೇವರ ಕರೆಯನ್ನು
ಅನುಸರಿಸಲು ಸತತ
ತ್ಯಾಗ ಮತ್ತು
ಪರಿಶ್ರಮ ಅಗತ್ಯ,
ಆದರೆ ಅದರೊಂದಿಗೆ
ದೇವರ ಪ್ರಸನ್ನತೆ
ಮತ್ತು ಅವರ ಸಮರ್ಥನೆಯ ಭರವಸೆ ನಿಸ್ಸಂದೇಹವಾಗಿ
ಇರುತ್ತದೆ. ಇಂದಿನ ಸುವಾರ್ತಾ ಪ್ರಸಾರಕರು ತಮ್ಮ ಶ್ರಮ ವ್ಯರ್ಥವಲ್ಲ ಎಂಬುದನ್ನು
ತಿಳಿದುಕೊಂಡು ದೇವರ ವಿಶ್ವಾಸಾರ್ಹತೆಯಲ್ಲಿ ತಮ್ಮ
ಶಕ್ತಿ ಮತ್ತು
ಧೈರ್ಯವನ್ನು ಕಂಡುಕೊಳ್ಳಲು ಇದು ಪ್ರೋತ್ಸಾಹಿಸುತ್ತದೆ.
·
ಕೊನೆಯದಾಗಿ,
ಯೆರೆಮಿಯನ ಮೊದಲ
ಈ ವಿಖ್ಯಾಪನೆ ದೇವರ ವಾಕ್ಯಕ್ಕೆ ಅವನ ಪ್ರತಿಕ್ರಿಯೆಯನ್ನು
ನಾವು ಅನುಕರಿಸುವಂತೆ ನಮಗೆ ಸವಾಲು ಹಾಕುತ್ತದೆ.
ಅನಾಥೋತ್ನ
ಜನರು ಪ್ರವಾದಿಯ
ಸಂದೇಶವನ್ನು ತಿರಸ್ಕರಿಸಿದರು ಮತ್ತು ಅವರ ಬಂಡಾಯದ
ತೀವ್ರ ಪರಿಣಾಮಗಳನ್ನು
ಎದುರಿಸಿದರು. ಇದು ತಮ್ಮ ಸ್ವಂತ ಹೃದಯವನ್ನು ಕಠಿಣಗೊಳಿಸುವುದರ
ವಿರುದ್ಧ ಎಚ್ಚರಿಕೆಯಾಗಿ
ಮಾತ್ರವಲ್ಲ, ದೀನತೆ ಹಾಗೂ ವಿಧೇಯತೆಯಿಂದ ದೇವರ ಸತ್ಯವನ್ನು
ಸ್ವೀಕರಿಸಲು ಆಹ್ವಾನವಾಗಿದೆ.
[ಇದು ಪ್ರೋ. ಕ್ಲೌಡೆ ಮರಿಯೋಟಿನಿ ಅವರ Jeremiah’s First Confession (Jeremiah 11:18–23) ಎಂಬ ಪ್ರಬಂಧದ ಕನ್ನಡ ಭಾಷಾಂತರ. ಇದರ ಮೂಲ ಬರವಣಿಗೆಯನ್ನು https://claudemariottini.com/2025/04/14/jeremiahs-first-confession-jeremiah-1118-23/ ಇದರಲ್ಲಿ ಕಾಣಬಹುದು.]

Comments
Post a Comment