ಯೆರೆಮಿಯನ ಗ್ರಂಥದ ಮತ್ತು ಅವನ ಆರು ವಿಖ್ಯಾಪನೆಗಳ ಪರಿಚಯ

ಪ್ರವಾದಿ ಯೆರೆಮಿಯನ ಗ್ರಂಥದಲ್ಲಿ ಯೆರೆಮಿಯನ ವಿವರವಾದ ಜೀವನಚರಿತ್ರೆಯನ್ನು ಕಾಣುತ್ತೇವೆ, ಇದು ಹಳೆಯ ಒಡಂಬಡಿಕೆಯ ಪ್ರವಾದಿಗಳ ಆಂತರಿಕ ಜೀವನವನ್ನು ನೋಡಲು ಕೂಡ ನಮಗೆ ಹೆಚ್ಚಿನ ಸಹಾಯ ನೀಡುತ್ತದೆ. ಮಾತ್ರವಲ್ಲ, ಜೂಡಾದ ಅಂತಿಮ ದಿನಗಳ ಮತ್ತು ಜೆರುಸಲೆಮ್ ಪತನಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ತಿಳಿದಿರುವ ಹೆಚ್ಚಿನ ವಿಚಾರಗಳು ಯೆರೆಮಿಯನ ಗ್ರಂಥದಿಂದಲೇ ನಮಗೆ ತಿಳಿದು ಬರುತ್ತದೆ.

ಯೆರೆಮಿಯನ ಗ್ರಂಥ ನಮಗೆ ಒಬ್ಬ ವಾಗ್ಮಿಯನ್ನು, ದೇವರೊಂದಿಗಿನ ಸಂಬಂಧದಲ್ಲಿ ಸೂಕ್ಷ್ಮತೆಯನ್ನು ಹೊಂದಿದ್ದ ವ್ಯಕ್ತಿಯನ್ನು ಮತ್ತು ಜೂಡಾದ ಜನರಿಗೆ ದೇವರ ಸಂದೇಶವನ್ನು ನಿರರ್ಗಳವಾಗಿ ಘೋಷಿಸುತ್ತಿದ್ದ ವ್ಯಕ್ತಿಯನ್ನು  ಪರಿಚಯಿಸುತ್ತದೆ.

ಇಸ್ರಯೇಲ್‌ ರಾಷ್ಟ್ರದ ನಿರ್ಣಾಯಕ ಹಾಗೂ ಬಹು ಮುಖ್ಯವಾದ ಸಮಯದಲ್ಲಿ ದಕ್ಷಿಣದಲ್ಲಿದ್ದ ಜೂಡಾ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಯೆರೆಮಿಯನನ್ನು ದೇವರು ಕರೆದರು. ಸುಮಾರು ಅರ್ಧ ಶತಮಾನ, ಆ ದಂಗೆಕೋರ ಜನರಿಗೆ ಯೆರೆಮಿಯ ದೇವರ ವಾಕ್ಯವನ್ನು ಸಾರಿದನು. ಪಶ್ಚಾತ್ತಾಪಪಡುವಂತೆ ಸಾರುತ್ತಿದ್ದ ಯೆರೆಮಿಯನ ಕೂಗಿಗೆ ಪ್ರತಿಯಾಗಿ, ರಾಜರು, ಪ್ರವಾದಿಗಳು, ಯಾಜಕರು ಮತ್ತು ಜೂಡಾದ ನಿವಾಸಿಗಳು ಅವನ ಮಾತನ್ನು ಕೇಳಲು ನಿರಾಕರಿಸಿದರು. ಜನರ ತಿರಸ್ಕಾರ ಎಷ್ಟಿತ್ತೆಂದರೆ, ಯೆರೆಮಿಯ ತಾನು ಒಬ್ಬ ಪ್ರವಾದಿಯೋ ಅಲ್ಲವೋ ಎಂಬ ಸಂಶಯದೊಡನೆ ತನ್ನ ಆಂತರ್ಯದಲ್ಲಿ ಹೋರಾಡುವಂತೆ ಮಾಡಿತ್ತು.

ಯೆರೆಮಿಯ ಜೆರುಸಲೆಮಿನ ಉತ್ತರದಲ್ಲಿರುವ ಅನಾಥೋತ್ ಎಂಬ ಹಳ್ಳಿಯಲ್ಲಿ ಜನಿಸಿದನು. ಅವನು ಹಿಲ್ಕೀಯನ ಮಗ. ಹಿಲ್ಕೀಯ ಒಬ್ಬ ಯಾಜಕ, (ಆದರೆ ಇವನು ಯೋಷೀಯನ ದಿನಗಳಲ್ಲಿ ಮಹಾಯಾಜಕನಾಗಿದ್ದ ಹಿಲ್ಕೀಯನಲ್ಲ (2 ಅರಸುಗಳು 22:4). ಯೆರೆಮಿಯನ ಕುಟುಂಬ, ಬಹುಶಃ ದಾವೀದನ ಮರಣದ ನಂತರ ಅದೋನೀಯ ರಾಜನಾಗಲು ಮಾಡಿದ ಪ್ರಯತ್ನದಲ್ಲಿ ಭಾಗವಹಿಸಿದ್ದಕ್ಕಾಗಿ ಸೊಲೊಮೋನ್ ಅನಾಥೋತಿಗೆ ಗಡಿಪಾರು ಮಾಡಿದ ಯಾಜಕನಾದ ಅಬಿಯಾತರನ ವಂಶಸ್ಥರಾಗಿರಬಹುದು. ಸಮುವೇಲನ ಆರಂಭಿಕ ದಿನಗಳಲ್ಲಿ ಶಿಲೋವಿನಲ್ಲಿರುವ ಪವಿತ್ರಾಲಯದಲ್ಲಿ ಸೇವೆ ಸಲ್ಲಿಸಿದ ಯಾಜಕನಾದ ಎಲಿಯನ ಮೂಲಕ ಯೆರೆಮಿಯನ ಕುಟುಂಬ ಮೋಶೆ ಮತ್ತು ಆರೋನರಿಂದ ಬಂದಿರಬಹುದು.

ಯೆರೆಮಿಯನ ಗ್ರಂಥ ಅಧ್ಯಯನ ಮಾಡಲು ಸ್ವಲ್ಪ ಕಷ್ಟಕರವಾದ ಗ್ರಂಥ. ಗ್ರಂಥದ ಕಾಲಾನುಕ್ರಮದ ಸಮಸ್ಯೆಗಳು ಮತ್ತು ಅದರಲ್ಲಿ ಕಂಡುಬರುವ ಬರವಣಿಗೆಯ ನಿಗೂಢ ವ್ಯವಸ್ಥೆ (mysterious arrangement of the book) ಈ ಗ್ರಂಥ ಸುದೀರ್ಘವಾಗಿ ಕಾಲದಿಂದ ಕಾಲಕ್ಕೆ ತಿದ್ದುಪಡಿಯಾಗಿರುವುದಕ್ಕೆ ಮತ್ತು ಪ್ರಸಾರವಾಗಿರುವುದಕ್ಕೆ (edited and transmitted) ಸಾಕ್ಷಿಯಾಗಿದೆ, ಇದನ್ನು ಅದರ ಎಲ್ಲಾ ವಿವರಗಳೊಂದಿಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ.

ಯೆರೆಮಿಯನ ಗ್ರಂಥದ ಸಂಯೋಜನೆ ಚರ್ಚೆಗೆ ಗ್ರಾಸವಾಗಿರುವ ಒಂದು ವಿಷಯ. ಈ ಗ್ರಂಥ ಈಗ ಇರುವ ಹಾಗೆ ಇರುವುದಕ್ಕೆ ಮುಂಚೆ ಹಲವಾರು ಆವೃತ್ತಿಗಳ ತಿದ್ದುಪಡಿಗಳನ್ನು ಪಡೆದಿದೆ. ಗ್ರಂಥದ ಮೊದಲ ಆವೃತ್ತಿ ಯೆರೆಮಿಯನ ಸಮಯದಲ್ಲಿ 1:125:13 ನಡೆದಿತ್ತು. ಈ ವಿಭಾಗವನ್ನು ಮೊದಲ ಆವೃತ್ತಿಯ ಭಾಗವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ಭಾಗದಲ್ಲಿ ಸೆಪ್ಟುವಾಜಿಂತ್‌ ಆವೃತ್ತಿ [LXX] ರಾಷ್ಟ್ರಗಳ ಬಗ್ಗೆ ದೈವೋಕ್ತಿಗಳನ್ನು ಸೇರಿಸಿದೆ.

ಅರಸ ಯೆಹೋಯಾಕೀಮ್ ಈ ಗ್ರಂಥದ ಮೊದಲ ಆವೃತ್ತಿಯನ್ನು ಸುಟ್ಟ ನಂತರ, ಯೆರೆಮಿಯ ತನ್ನ ಪ್ರವಾದನಾ ವಾಕ್ಯಗಳನ್ನು ತನ್ನ ಸಹಾಯಕ ಬಾರೂಕನಿಗೆ ಹೇಳಿ ಬರೆಸಿದನು. ಬಾರೂಕ್‌ ಗ್ರಂಥಕ್ಕೆ ಕೆಲವು ಹೆಚ್ಚುವರಿ ವಿಷಯಗಳನ್ನೂ ಸೇರಿಸಿದನು:

“ಆಗ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾದ ಲೇಖಕ ಬಾರೂಕನಿಗೆ ಕೊಟ್ಟನು. ಅವನು ಅದರಲ್ಲಿ ಜುದೇಯದ ಅರಸ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಗ್ರಂಥದ ಎಲ್ಲ ಮಾತುಗಳನ್ನು ಬರೆದನು. ಅದು ಮಾತ್ರವಲ್ಲ, ಅಂಥ ಅನೇಕ ಮಾತುಗಳನ್ನೂ ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು.” (ಯೆರೆಮಿಯ 36:32). ಇದು ಗ್ರಂಥದ ಎರಡನೇ ಆವೃತ್ತಿ.

ಆ ನಂತರ, ಬಾರೂಕ್ ಯೆರೆಮಿಯನ ಬಗ್ಗೆ ಹೆಚ್ಚಿನ ದೈವೋಕ್ತಿಗಳನ್ನು ಮತ್ತು ಪ್ರವಾದಿಯ ಜೀವನಚರಿತ್ರೆಯ ಮಾಹಿತಿಯನ್ನು ಮತ್ತು ಈಜಿಪ್ಟ್‌ನಲ್ಲಿ ಆದ ಯೆರೆಮಿಯನ ಬಗೆಗಿನ ವಿಷಯಗಳನ್ನು ಸೇರಿಸಿದನು (ಯೆರೆಮಿಯ 4044). ಇದು ಗ್ರಂಥದ ಮೂರನೇ ಆವೃತ್ತಿ.

ಗ್ರಂಥದ ನಾಲ್ಕನೇ ಆವೃತ್ತಿಯನ್ನು, ಯೆರೆಮಿಯನ ಸಂದೇಶವನ್ನು ಒಪ್ಪಿಕೊಂಡ ಜನರು ಮೌಖಿಕವಾಗಿ ಅಥವಾ ಲಿಖಿತ ರೂಪದಲ್ಲಿ ಪ್ರಸಾರವಾಗುತ್ತಿದ್ದ ಇತರ ವಿಷಯಗಳನ್ನು ಸೇರಿಸಿದಾಗ, ದೇಶಭ್ರಷ್ಟತೆ ಅಥವಾ ದೇಶಭ್ರಷ್ಟತೆಯ ನಂತರದ ಅವಧಿಯಲ್ಲಿ ರಚಿಸಲಾಯಿತು. ಯೆರೆಮಿಯ 52:3134 ಜೂಡಾದ ಜನರನ್ನು ಬಾಬಿಲೋನಿಗೆ ಗಡಿಪಾರು ಮಾಡಿದ ಮೂವತ್ತೇಳನೇ ವರ್ಷದಲ್ಲಿ ಜೂಡಾದ ರಾಜ ಯೆಹೋಯಾಕೀನನ ಬಿಡುಗಡೆಯ ಬಗ್ಗೆ ಉಲ್ಲೇಖಿಸುತ್ತದೆ.

ಯೆರೆಮಿಯನ ಗ್ರಂಥ ಪ್ರವಾದಿಯ ಸೇವೆಗೆ ಅವನ ಕರೆಯೊಂದಿಗೆ ಪ್ರಾರಂಭವಾಗುತ್ತದೆ. ಸರ್ವೇಶ್ವರ ಯೆರೆಮಿಯನನ್ನು ಪ್ರವಾದಿಯಾಗಲು ಕರೆದಾಗ, ಯೆರೆಮಿಯ ಇನ್ನೂ ಯುವಕ ಮತ್ತು ಅವನು ಬಹಳ ಚಿಕ್ಕವನು ಮತ್ತು ಅನನುಭವಿಯಾಗಿದ್ದನು ಎಂಬ ಕಾರಣದಿಂದಾಗಿ ಪ್ರವಾದಿಯಾಗಲು ಹಿಂಜರಿದನು. ಯೆರೆಮಿಯ ಸರ್ವೇಶ್ವರನಿಂದ ಅತ್ಯಂತ ಕಷ್ಟಕರವಾದ ಸಂದೇಶವನ್ನು ಪಡೆದನು: ಜೂಡಾದ ದಂಗೆ ಮತ್ತು ಧರ್ಮಭ್ರಷ್ಟತೆಗಾಗಿ ದೇವರ ನ್ಯಾಯತೀರ್ಪನ್ನು ಆ ಜನರಿಗೆ ಸಾರಬೇಕಾಯಿತು.

ಯೆರೆಮಿಯನಿಗೆ ಸರ್ವೇಶ್ವರನ ವಾಕ್ಯ ಬಂದಾಗ, ಅವನು ಪಡೆದದ್ದು, ತೀರ್ಪು ಮತ್ತು ಭರವಸೆಯ ಸಂದೇಶ (Judgement and Hope):

“ರಾಷ್ಟ್ರಗಳ ಮೇಲೂ ರಾಜ್ಯಗಳ ಮೇಲೂ ಅಧಿಕಾರವುಳ್ಳವನನ್ನಾಗಿ ನಾನು ನಿನ್ನನ್ನು ಈ ದಿನ ನೇಮಿಸಿದ್ದೇನೆ. ಇದರಿಂದಾಗಿ ಕಿತ್ತುಹಾಕುವ ಹಾಗು ಕೆಡುವುವ, ನಾಶಪಡಿಸುವ ಹಾಗು ನೆಲಸಮಮಾಡುವ, ಕಟ್ಟುವ ಹಾಗು ನೆಡುವ ಕಾರ್ಯ ನಿನ್ನದು,” (ಯೆರೆಮಿಯ 1:10).

ಯೆರೆಮಿಯ ಜೂಡಾಕ್ಕೆ ಸಾರಬೇಕಾದ ಸಂದೇಶದ ನಕಾರಾತ್ಮಕ ವಿಷಯ ತೀರ್ಪು ಮತ್ತು ವಿನಾಶವನ್ನು ಒತ್ತಿಹೇಳುತ್ತದೆ: “ಕೀಳಲು ಮತ್ತು ಕೆಡವಲು, ನಾಶಮಾಡಲು ಮತ್ತು ಕೆಡವಲು.” “ಕಟ್ಟಲು ಮತ್ತು ನೆಡಲು”ಎಂಬ ಅವನ ಸಂದೇಶದ ಸಕಾರಾತ್ಮಕ ವಿಷಯ ದೇವರ ತೀರ್ಪು ರಾಷ್ಟ್ರದ ಅಂತ್ಯವಲ್ಲ ಎಂಬ ದೃಢನಿಶ್ಚಯವನ್ನು ಸಹ ಪ್ರತಿಬಿಂಬಿಸುತ್ತದೆ. ಬ್ಯಾಬಿಲೋನಿಗೆ ಸೆರೆಯಾಳುಗಳಾಗಿ ಕರೆದೊಯ್ಯಲಾದ ಜನರಿಗೆ ಈ ಭರವಸೆಯ ಸಂದೇಶ ಬಹಳ ಮುಖ್ಯವಾಗಿತ್ತು, ಏಕೆಂದರೆ ಸರ್ವೇಶ್ವರ ತನ್ನ ಜನರನ್ನು ಕೈಬಿಡುವುದಿಲ್ಲ ಮತ್ತು ಇನ್ನೂ ಅವರಿಗೆ ಭವಿಷ್ಯವಿದೆ ಎಂದು ಅದು ಅವರಿಗೆ ಭರವಸೆ ನೀಡುತ್ತದೆ.

ಯೆರೆಮಿಯ ಸಾರುತ್ತಿದ್ದ ವಿನಾಶದ ಸಂದೇಶ (Message of Destruction) ಯೆರೆಮಿಯನ ಗ್ರಂಥದಲ್ಲಿ ಹಲವಾರು ಬಾರಿ ಒತ್ತಿಹೇಳಲಾದ ಒಂದು ಮುಖ್ಯ ವಿಷಯ (ಯೆರೆಮಿಯ 18:79; 24:6; 31:28; 45:4). ತೀರ್ಪು ಮತ್ತು ವಿನಾಶದ ಸಂದೇಶಕ್ಕೆ ಯೆರೆಮಿಯನ ಜನರು ತೋರಿಸಿದ ಪ್ರತಿಕ್ರಿಯೆ ಯೆರೆಮಿಯನ ಜೀವನವನ್ನು ಅಪಾಯಕ್ಕೆ ಸಿಲುಕಿಸಿತು ಮತ್ತು ರಾಷ್ಟ್ರದ ರಾಜಕೀಯ ಹಾಗೂ ಧಾರ್ಮಿಕ ನಾಯಕರೊಂದಿಗೆ ಹೆಚ್ಚಿನ ಸಂಘರ್ಷಕ್ಕೆ ಕಾರಣವಾಯಿತು.

ಯೆರೆಮಿಯ ಸುಧಾರಣೆಗಳನ್ನು ಸಾರುತ್ತಿದ್ದಕ್ಕಾಗಿ ಯೆರೆಮಿಯನ ಕುಟುಂಬ ಮತ್ತು ಅನಾಥೋತಿನ ಜನರು ಯೆರೆಮಿಯನನ್ನು ಕೊಲ್ಲಲು ಪ್ರಯತ್ನಿಸಿದರು (ಯೆರೆಮಿಯ 11:1823). ಯಾಜಕ ಪಶ್ಹೂರ್ ಯೆರೆಮಿಯನನ್ನು ಹೊಡೆದು ಸೆರೆಗೆ ಹಾಕಿದನು (ಯೆರೆಮಿಯ 20:16). ಜೂಡಾದ ಅಧಿಕಾರಿಗಳು ಅವನನ್ನು ಕೆಸರು ತುಂಬಿದ ಬಾವಿಯಲ್ಲಿ ಹಾಕಿ ಸಾಯಲು ಅಲ್ಲಿಯೇ ಬಿಟ್ಟರು (ಯೆರೆಮಿಯ 38:613). ಯೆರೆಮಿಯ ದೇವಾಲಯದಲ್ಲಿ ಪ್ರವಾದನೆಯನ್ನು ಹೇಳಿದ ನಂತರ (ಯೆರೆಮಿಯ 7:115) ಅವನನ್ನು ಧಾರ್ಮಿಕ ಅಧಿಕಾರಿಗಳು ಆರಾಧಿಸಲು ಸರ್ವೇಶ್ವರನ ಆಲಯವನ್ನು ಪ್ರವೇಶಿಸುವುದನ್ನು ತಡೆದರು (ಯೆರೆಮಿಯ 36:5). ʼಬಾಬಿಲೋನಿಯರು ಜೂಡಾವನ್ನು ನಾಶಮಾಡುತ್ತಾರೆʼ ಎಂಬ ಯೆರೆಮಿಯನ ಘೋಷಣೆಯಿಂದ ಕೋಪಗೊಂಡ ರಾಜ ಯೆಹೋಯಾಕೀಮ್ ತನ್ನ ಅಧಿಕಾರಿಗಳಿಗೆ ಅವನನ್ನು ಬಂಧಿಸಲು ಆಜ್ಞಾಪಿಸಿದನು (ಯೆರೆಮಿಯ 36:17). ಸುಳ್ಳು ಪ್ರವಾದಿಗಳ ನಿರೀಕ್ಷೆ ಮತ್ತು ಶಾಂತಿಯ ಸಂದೇಶ (Message of Hope and Peace) ಯೆರೆಮಿಯನ ತೀರ್ಪಿನ ಸಂದೇಶಕ್ಕೆ (Message of Judgement)  ವಿರುದ್ಧವಾಗಿದ್ದುದರಿಂದ ಯೆರೆಮಿಯನನ್ನು ವಿರೋಧಿಸಿದರು.

ಜೂಡಾದ ರಾಜಕೀಯ ಮತ್ತು ಧಾರ್ಮಿಕ ನಾಯಕರ ಟೀಕೆಯಿಂದಾಗಿ ಯೆರೆಮಿಯ ಜೀವಾವಧಿ ತೀರ್ಪಿಗೆ ಒಳಪಡಬೇಕಾಯಿತು:

“ಆಗ ಯಾಜಕರು ಮತ್ತು ಪ್ರವಾದಿಗಳು ಅಧಿಕಾರಿಗಳಿಗೆ ಮತ್ತು ಎಲ್ಲಾ ಜನರಿಗೆ, ‘ಈ ಮನುಷ್ಯನು ಈ ಪಟ್ಟಣದ ವಿರುದ್ಧ ಪ್ರವಾದಿಸಿದ್ದರಿಂದ ಮರಣದಂಡನೆಗೆ ಅರ್ಹನು’ ಎಂದು ಹೇಳಿದರು” (ಯೆರೆಮಿಯ 26:11).

ಪ್ರವಾದಿ ಮಿಕಾ ಯೆರೆಮಿಯನ ಸಂದೇಶಕ್ಕೆ ಹೋಲುವ ಸಂದೇಶವನ್ನು ಸಾರಿದ್ದನು ಆದರೆ ಮಿಕನಿಗೆ ಮರಣದಂಡನೆ ವಿಧಿಸಲಾಗಿಲ್ಲ ಎಂದು ದೇಶದ ಕೆಲವು ಹಿರಿಯರು ಜನರಿಗೆ ನೆನಪಿಸಿದ್ದರಿಂದ ಯೆರೆಮಿಯ ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಯಿತು (ಯೆರೆಮಿಯ 26:1019).

ಜೂಡಾದ ಜನರು ಬಾಬಿಲೋನಿಗೆ ಅಧೀನರಾಗುವಂತೆ ಯೆರೆಮಿಯ ಒತ್ತಾಯಿಸಿದನು, ಏಕೆಂದರೆ ಅದು ರಾಷ್ಟ್ರದ ಒಳಿತಿಗೆ  ಸರ್ವೇಶ್ವರನ ಯೋಜನೆಯಾಗಿತ್ತು. ಬ್ಯಾಬಿಲೋನಿಯನ್ ಪರ ದೃಷ್ಟಿಕೋನಗಳಿಂದಾಗಿ ಯೆರೆಮಿಯನನ್ನು ಸೈನ್ಯದಲ್ಲಿರುವ ಜನರನ್ನು ಪಕ್ಷಾಂತರ ಮಾಡುವಂತೆ ಮಾಡುತ್ತಿದ್ದ ದೇಶದ್ರೋಹಿ ಎಂದು ಪರಿಗಣಿಸಲಾಯಿತು, ಆಗ ಅಧಿಕಾರಿಗಳು ರಾಜನಿಗೆ:

“ಒಡೆಯಾ, ಈ ಯೆರೆಮಿಯನಿಗೆ ಮರಣ ದಂಡನೆಯಾಗಬೇಕು. ಇವನು ನಗರದಲ್ಲಿರುವ ಸೈನಿಕರಿಗೂ ಜನರೆಲ್ಲರಿಗೂ ಇಂಥ ಭವಿಷ್ಯವನ್ನು ನುಡಿಯುತ್ತಾ ಅವರು ಎದೆಗುಂದುವಂತೆ ಮಾಡುತ್ತಿದ್ದಾನೆ. ಅವನು ಹಾರೈಸುವುದು ಜನರ ಕ್ಷೇಮವನ್ನಲ್ಲ ಹಾನಿಯನ್ನೇ, ಎಂದು ದೂರಿತ್ತರು.'" (ಯೆರೆಮಿಯ 38:4).

ಸುಳ್ಳು ಪ್ರವಾದಿಗಳೊಂದಿಗಿನ ತನ್ನ ಮುಖಾಮುಖಿಯಲ್ಲಿ, ಅವರ ಶಾಂತಿಯ ಸಂದೇಶ ಸರ್ವೇಶ್ವರ ಅವರಿಗೆ ವಹಿಸಿಕೊಟ್ಟ ಸಂದೇಶವಲ್ಲ ಎಂದು ಯೆರೆಮಿಯ ಹೇಳಿದನು. ಸುಳ್ಳು ಪ್ರವಾದಿಗಳು ಶಾಂತಿ ಇಲ್ಲದಿರುವ ಸಮಯದಲ್ಲಿ ‘ಎಲ್ಲ ಚೆನ್ನಾಗಿದೆ’ ಎಂದು ಸಮಾಧಾನ ಹೇಳಿ ವಂಚಿಸುತ್ತಿದ್ದಾರೆ (ಯೆರೆಮಿಯ 8:11) ಎಂದನು.

ದೇವರೊಂದಿಗಿನ ತನ್ನ ಸಂಬಂಧದಲ್ಲಿ ಯೆರೆಮಿಯ ದಿಟ್ಟ, ಮುಕ್ತ ಮತ್ತು ಪ್ರಾಮಾಣಿಕನಾಗಿದ್ದನು. ತನ್ನ ಧ್ಯೇಯವನ್ನು ನಿರ್ವಹಿಸುವಲ್ಲಿ ಅವನು ಎದುರಿಸಿದ ತಿರಸ್ಕಾರ ಮತ್ತು ಹಗೆತನದ ಕಾರಣದಿಂದಾಗಿ ಯೆರೆಮಿಯ ತನ್ನ ಕರೆಯ ಕುರಿತು ಆಂತರ್ಯದಲ್ಲಿ ಹೋರಾಡಿದನು. ಯೆರೆಮಿಯನ ಆರು ಪ್ರಲಾಪಗಳಲ್ಲಿ ಈ ಹೋರಾಟಗಳನ್ನು ನಾವು ಕಾಣಬಹುದು, ಇದನ್ನು "ಯೆರೆಮಿಯನ ವಿಖ್ಯಾಪನೆಗಳು" (Confessions of Jeremiah) ಎಂದು ಕರೆಯಲಾಗಿದೆ. ಈ ವಿಖ್ಯಾಪನೆಗಳಲ್ಲಿ ಯೆರೆಮಿಯ ತನ್ನ ಭಾವನೆಗಳ ಮತ್ತು ಅನುಮಾನಗಳ ಬಗ್ಗೆ ದೇವರಿಗೆ ದೂರು ನೀಡುತ್ತಾನೆ. ಸರ್ವೇಶ್ವರನೊಂದಿಗಿನ ಯೆರೆಮಿಯನ ಈ ಸಂಭಾಷಣೆಗಳು ನೇರ, ಸ್ಪಷ್ಟ ಮತ್ತು ಪ್ರಾಮಾಣಿಕ ಮನಸ್ಸಿನಿಂದ ಮಾಡಿದುದು. ಯೆರೆಮಿಯನ ಈ ಮಾತುಗಳು ಕೆಲವೊಮ್ಮೆ ಅವಿಧೇಯತೆ ಅಥವಾ ದೇವದೂಷಣೆಯಂತೆ ಕಾಣಬಹುದು, ಆದರೆ ಅವು ನಿಷ್ಕಲ್ಮಶ ಹೃದಯದಿಂದ ಮೂಡಿದವು ಎಂಬುದನ್ನು ನಾವು ಗ್ರಹಿಸಬಹುದು.

 [ಇದು ಪ್ರೋಕ್ಲೌಡೆ ಮರಿಯೋಟಿನಿ ಅವರ 
Introduction to the Book of Jeremiah ಎಂಬ ಪ್ರಬಂಧದ ಕನ್ನಡ ಭಾಷಾಂತರ
ಇದರ ಮೂಲ ಬರವಣಿಗೆಯನ್ನು Introduction to the Book of Jeremiah | Dr. Claude Mariottini Professor of Old Testament ಇದರಲ್ಲಿ ಕಾಣಬಹುದು.]

Comments

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23