ಯೆರೆಮಿಯನ ಆರನೇ ವಿಖ್ಯಾಪನೆ - ಯೆರೆಮಿಯ 20:7–18

ಮುನ್ನುಡಿ

ಯೆರೆಮಿಯ 20:7–18 "ಯೆರೆಮಿಯನ ವಿಖ್ಯಾಪನೆಗಳು" (Confessions of Jeremiah) ಎಂದು ಕರೆಯಲಾಗುವ ಭಾಗದ ಕೊನೆಯ ವಿಖ್ಯಾಪನೆ. ತನ್ನ ಈ ಆರನೇ ವಿಖ್ಯಾಪನೆಯಲ್ಲಿ, ಯೆರೆಮಿಯ ವಿರೋಧ, ತಿರಸ್ಕಾರ ಮತ್ತು ಮಾನಸಿಕ ಹಿಂಸೆಯ ತನ್ನ ಅಂತರಂಗದ ತುಮುಲಗಳನ್ನು ಬಹಿರಂಗಪಡಿಸುತ್ತಾನೆ. ಆರನೇ ವಿಖ್ಯಾಪನೆ ಅದರ ಭಾವನಾತ್ಮಕ ತೀವ್ರತೆಗೆ ಹೆಸರುವಾಸಿಯಾಗಿದೆ.
ಭಾಗ, ಪ್ರವಾದಿಯನ್ನು ಅವನ ಅತ್ಯಂತ ದುರ್ಬಲ ವ್ಯಕ್ತಿಯಂತೆ ತೋರಿಸುತ್ತದೆ; ಪ್ರವಾದಿತನದ ಮಾನಸಿಕ ಮತ್ತು ಆಧ್ಯಾತ್ಮಿಕ ಕಷ್ಟಗಳ ಬಗ್ಗೆ ಸಾಟಿಯಿಲ್ಲದ ಒಳನೋಟವನ್ನು ಒದಗಿಸುತ್ತದೆ. ಈ ಪಠ್ಯ, ದೇವರ ವಿರುದ್ಧದ ಆರೋಪದಿಂದ, ದೇವರ ಇರುವಿಕೆಯ ದೃಢೀಕರಣದ ಕಡೆಗೆ, ಅಂತಿಮವಾಗಿ, ಆಳವಾದ ಹತಾಶೆಯ ಕಡೆಗೆ ಚಲಿಸುತ್ತದೆ, ಅದರಲ್ಲಿ ಯೆರೆಮಿಯ ತನ್ನ ಸ್ವಂತ ಹುಟ್ಟನ್ನು ಸಹ ಶಪಿಸುವುದನ್ನು ಕಾಣಬಹುದು.

ತಿರಸ್ಕಾರ ಮತ್ತು ಕಿರುಕುಳದ ಭಾವನಾತ್ಮಕ ನೋವು

ಸಂದರ್ಭ

ವಿಖ್ಯಾಪನೆಯನ್ನು ಪರಿಶೀಲಿಸುವ ಮೊದಲು, ನಾವು ಅದರ ತಕ್ಷಣದ ಸಂದರ್ಭವನ್ನು ಅರ್ಥಮಾಡಿಕೊಳ್ಳೋಣ. “ಸರ್ವೇಶ್ವರನ ಆಲಯದ ಮುಖ್ಯ ಅಧಿಕಾರಿಯಾಗಿದ್ದ ಇಮ್ಮೇರನ ಮಗನಾದ ಯಾಜಕ ಪಷ್ಹೂರ ಯೆರೆಮಿಯ ಪ್ರವಾದಿಸುವುದನ್ನು ಕೇಳಿದನು. ಆಗ ಪಷ್ಹೂರ ಯೆರೆಮಿಯನನ್ನು ಹೊಡೆದು ಸರ್ವೇಶ್ವರನ ಆಲಯದ ಮೇಲಿನ ಬೆನ್ಯಾಮಿನ್ ದ್ವಾರದಲ್ಲಿದ್ದ ಸೆರೆಯಲ್ಲಿ ಹಾಕಿದನು. ಮರುದಿನ ಬೆಳಿಗ್ಗೆ ಪಷ್ಹೂರ ಯೆರೆಮಿಯನನ್ನು ಸೆರೆಯಿಂದ ಬಿಡಿಸಿದಾಗ, ಯೆರೆಮಿಯ ಅವನಿಗೆ, “ಸರ್ವೇಶ್ವರ ನಿನಗೆ ಪಷ್ಹೂರ ಎಂದು ಹೆಸರಿಟ್ಟಿಲ್ಲ, ಬದಲಾಗಿಸುತ್ತಲೂ ಭಯಂಕರʼ  (ಹೀಬ್ರೂಮಾಗೋರ್-ಮಿಸ್ಸಾಬಿಬ್ಎಂದು ಹೆಸರಿಟ್ಟಿದ್ದಾನೆ ಎಂದು ಹೇಳಿದನು (ಯೆರೆಮಿಯ 20:1–3).  ಸಾರ್ವಜನಿಕ ಅವಮಾನ ಯೆರೆಮಿಯ ವರ್ಷಗಳಿಂದ ಸಹಿಸಿಕೊಂಡಿದ್ದ ನಿರಂತರ ತಿರಸ್ಕಾರ ಮತ್ತು ಬೆದರಿಕೆಗಳ ಪರಾಕಾಷ್ಠೆಯಾಗಿತ್ತು.

ಪ್ರವಾದಿ ಬಲಿಪಶುವಾದಂತಹ ಅನುಭವ

ವಿಖ್ಯಾಪನೆ ದೇವರನ್ನು ಉದ್ದೇಶಿಸಿ ಅಸಾಧಾರಣವಾದ ದಿಟ್ಟ ಭಾಷೆಯೊಂದಿಗೆ ಪ್ರಾರಂಭವಾಗುತ್ತದೆ:
 ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿನಾನು ಮರುಳಾದೆ
ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ?
ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ.
ನನ್ನ ಮಾತೆಲ್ಲ ಅರಚಾಟ,ಹಿಂಸಾಚಾರ, ಕೊಳ್ಳೆಇವೇ ನನ್ನ ಕೂಗಾಟ.
ಸರ್ವೇಶ್ವರನ ವಾಕ್ಯವನ್ನು ನಾನು ಸಾರಿದೆ, ಜನರ ನಿಂದೆ ಪರಿಹಾಸ್ಯಕ್ಕೆ ಗುರಿಯಾದೆ.” (ಯೆರೆಮಿಯ 20:7–8).
ಹೀಬ್ರೂ ಭಾಷೆಯಲ್ಲಿ ಫತ್ಹಾ ಎಂದರೆ, ಆಮೀಷಕ್ಕೆ ಒಳಪಡಿಸು, ಪ್ರಲೋಭನೆಗೆ ಒಳಗಾಗು, ಮೋಸಗೊಳಿಸು, ಮೋಹಗೊಳಿಸು ಅಥವಾ ಲೋಭಕ್ಕೆ ಒಳಗಾಗಿಸು. ದೇವರು ತನ್ನನ್ನು ಅಂತಹ ದುಃಖಕ್ಕೆ ಒಳಗಾಗುವ ಕಾರ್ಯವನ್ನು ಮಾಡುವಂತೆ ಮೋಸಗೊಳಿಸಿದ್ದಾನೆ ಎಂದು ಯೆರೆಮಿಯ ಆರೋಪಿಸುತ್ತಾನೆ;  ಪದ ವಂಚನೆಯನ್ನು ಸಹ ಸೂಚಿಸುತ್ತದೆ; ಯೆರೆಮಿಯ ತನ್ನ ಪ್ರವಾದಿಯ ಕರೆಯ ಮೂಲಕ ದಾರಿ ತಪ್ಪಿದ್ದಾನೆ ಎಂಬುದನ್ನು ಸೂಚ್ಯವಾಗಿ ಸೂಚಿಸುತ್ತದೆಅವನ ಈ ಭಾಷೆ ತನ್ನ ಸಾರ್ವಜನಿಕ ಅವಮಾನದ ನಂತರ ಯೆರೆಮಿಯನ ಭಾವನಾತ್ಮಕ ಸ್ಥಿತಿಯನ್ನು ನಮಗೆ ಬಹಿರಂಗಪಡಿಸುತ್ತದೆ. ದೇವರು ತನ್ನ ಕರೆಯ ವಿಷಯವನ್ನು ಸರಿಯಾಗಿ ಹೇಳದೆ ಮೋಸಗೊಳಿಸಿದ್ದಾನೆ ಎಂದು ಯೆರೆಮಿಯ ಭಾವಿಸುತ್ತಾನೆ
ತಾನು ಶಕ್ತಿಹೀನನೆಂದು ಭಾವಿಸುತ್ತಾನೆ: "ನೀನು ನನ್ನನ್ನು ಗೆದ್ದುಬಿಟ್ಟಿರಿ" ಎಂಬುದು ಯೆರೆಮಿಯನನ್ನು ಬಲವಂತಪಡಿಸಿ ಪ್ರವಾದಿಯ ಸೇವೆಗೆ ಅವನನ್ನು ಒತ್ತಾಯಿಸಲಾಯಿತು ಎಂಬುದನ್ನು ಸೂಚಿಸುತ್ತದೆ
ಯೆರೆಮಿಯನನ್ನು ಸಾರ್ವಜನಿಕವಾಗಿ ಅವಮಾನಿಸಲಾಯಿತು: "ನಾನು ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ," ಎಂಬ ಹೇಳಿಕೆ ಯೆರೆಮಿಯನಿಗೆ ಆದ ಸಾಮಾಜಿಕ ಬಹಿಷ್ಕಾರವನ್ನು ಪ್ರತಿಬಿಂಬಿಸುತ್ತದೆ. ಅವನ ಮಾನಸಿಕ ಒತ್ತಡ ಅವನ ಜೀವನದ ಮೇಲೆ ಪರಿಣಾಮ ಬೀರಿತು. “ದಿನವೆಲ್ಲಎಂಬ ನುಡಿಗಟ್ಟು ಇಲ್ಲಿ ಎರಡು ಬಾರಿ ಕಾಣಿಸಿಕೊಳ್ಳುತ್ತದೆ, ಇದು ಅವನ ಯಾತನೆಯ ಸ್ವರೂಪವನ್ನು ಒತ್ತಿಹೇಳುತ್ತದೆ.

ಯೆರೆಮಿಯನ ಆಂತರಿಕ ಸಂಘರ್ಷ

9 ನೇ ವಾಕ್ಯ ಯೆರೆಮಿಯನ ಆಂತರಿಕ ತುಮುಲವನ್ನು ತೋರಿಸುತ್ತದೆ
ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು,
ಅವರ ಹೆಸರಿನಲ್ಲಿ ಇನ್ನು ಮಾತಾಡೆನುಎಂದುಕೊಂಡೆನಾದರೆ
ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ.
ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ
ಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ.” (ಯೆರೆಮಿಯ 20:9).
ಅವನ ಮೂಳೆಗಳಲ್ಲಿ ʼಸಿಕ್ಕಿಹಾಕಿಕೊಂಡ ಬೆಂಕಿʼ ಪ್ರಬಲ ರೂಪಕ ಯೆರೆಮಿಯನ ಮಾನಸಿಕ ಹಿಂಸೆಯನ್ನು ವಿವರಿಸುತ್ತದೆ: ಅವನು ದುಃಖದಿಂದ ತಪ್ಪಿಸಿಕೊಳ್ಳಲು ತನ್ನ ಪ್ರವಾದಿ ಸ್ಥಾನವನ್ನು ತ್ಯಜಿಸಲು ಬಯಸುತ್ತಾನೆ. ಆದರೆ, ವಿರೋಧಿಸಲಾಗದ, ಶಕ್ತಿಶಾಲಿಯಾದ ಆಂತರಿಕ ತಿಕ್ಕಾಟವನ್ನು ದೇವರ ವಾಕ್ಯ ಸೃಷ್ಟಿಸುತ್ತದೆ. "ನನ್ನೆಲುಬುಗಳಲ್ಲಿ ಸುಡುಬೆಂಕಿ" ಎಂಬ ಚಿತ್ರಣ ಅವನ ಆತ್ಮದ ಆಳದಲ್ಲಿ ಅವನನ್ನು ಬಾಧಿಸುತ್ತಿರುವ ನೋವನ್ನು ಸೂಚಿಸುತ್ತದೆ.
"ಅದನ್ನು ತಡೆತಡೆದು ದಣಿದಿರುವೆ" ಎಂಬ ಮಾತು ಜನರಿಗೆ ದೇವರ ಸಂದೇಶವನ್ನು ಘೋಷಿಸದಿರುವ ಅವನ ಪ್ರಯತ್ನದಿಂದ ಆಗುತ್ತಿರುವ ಆಯಾಸವನ್ನು ಬಹಿರಂಗಪಡಿಸುತ್ತದೆ. ಯೆರೆಮಿಯ ತನ್ನನ್ನು ಅಸಾಧ್ಯವಾದ ಪರಿಸ್ಥಿತಿಯಲ್ಲಿ ನೋಡುತ್ತಾನೆ: ಮಾತನಾಡುವುದು ಕಿರುಕುಳವನ್ನು ತರುತ್ತದೆ, ಆದರೆ, ಮೌನ ಆಂತರಿಕ ಹಿಂಸೆಯನ್ನು ತರುತ್ತದೆ. ವಿರೋಧಾಭಾಸ ತೀವ್ರವಾದ ಭಾವನಾತ್ಮಕ ತೊಯ್ದಾಟವನ್ನು ಉಂಟುಮಾಡುತ್ತದೆ, ಅವನನ್ನು ಮಾನಸಿಕವಾಗಿ ಕುಗ್ಗಿಸುತ್ತದೆ.

ಹತಾಶೆಗೆ ಸಿಲುಕಿ ಅವನ ಜನನವನ್ನೂ ಶಪಿಸುತ್ತಾನೆ
ಕಿರುಕುಳದಿಂದ
ಮತಿವಿಕಲ್ಪಕ್ಕೆ

ವಾಕ್ಯ 10 ನಿರಂತರ ವಿರೋಧ ಯೆರೆಮಿಯನ ಮಾನಸಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ತೋರಿಸುತ್ತದೆ:
ಸುತ್ತಮುತ್ತಲು ದಿಗಿಲೆಂದರೆ ದಿಗಿಲು!
ಬನ್ನಿ, ಇವನ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು
ಎಂದು ಗುಸುಗುಟ್ಟುತ್ತಿರುವರು ಬಹುಜನರು.
ಇವನು ಎಡವಿಬೀಳಲಿ, ನಾವು ಹೊಂಚಿನೋಡುವೆವು
ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು.
ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’
ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ. (ಯೆರೆಮಿಯ 20:10).
“ಸುತ್ತಮುತ್ತಲು ದಿಗಿಲೆಂದರೆ ದಿಗಿಲು (ಹೀಬ್ರೂ: ಮಾಗೋರ್-ಮಿಸ್ಸಾಬಿಬ್) ಎಂಬ ನುಡಿಗಟ್ಟು ವಿಶೇಷವಾಗಿ ಮಹತ್ವದ್ದಾಗಿದೆ, ಏಕೆಂದರೆ, ಅದು ಯೆರೆಮಿಯ 20:3 ರಲ್ಲಿ ಪಷ್ಹೂರನಿಗೆ ಪ್ರವಾದನೆಯಾಗಿ ನೀಡಿದ ಹೆಸರು. ಈಗ ಯೆರೆಮಿಯ ಸ್ವತಃಸುತ್ತಮುತ್ತಲೂ ದಿಗಿಲನ್ನು ಅನುಭವಿಸುತ್ತಿದ್ದಾನೆ, ಅವನು ಬೆದರಿಕೆಗಳಿಂದ ಸುತ್ತುವರೆದಿದ್ದಾನೆ, ಅವನಿಗೆ ಎಲ್ಲಿಯೂ ಶಾಂತಿ ಇಲ್ಲ.
ನನ್ನಾಪ್ತ ಮಿತ್ರರೆಲ್ಲರು ಅವನ ಪತನಕ್ಕಾಗಿ ಕಾಯುತ್ತಿದ್ದಾರೆ ಎಂಬ ಅವನ ಅನಿಸಿಕೆ ವ್ಯವಸ್ಥಿತವಾಗಿ ಅವನ ಮೇಲೆ ನಡೆಸಲಾಗುತ್ತಿರುವ ಕಿರುಕುಳದಿಂದ ಬಹುಶಃ ಅವನಿಗೆ ಆಗಿರುವ ಮತಿವಿಕಲ್ಪವನ್ನು ಸೂಚಿಸುತ್ತದೆ. ಜೊತೆಗೆ, ಬೆಂಬಲ ನೀಡಬೇಕಾದವರೇ ಅವನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂಬ ಭಯ ಮತ್ತು ಸಾಮಾಜಿಕ ಒಂಟಿತನ ಅವನ ಭಾವನಾತ್ಮಕ ಯಾತನೆಯನ್ನು ಇನ್ನೂ ಹೆಚ್ಚಿಸುತ್ತದೆ.

ವಿಶ್ವಾಸದ ಸಂಕ್ಷಿಪ್ತ ದೃಢೀಕರಣ

11–13ನೇ ವಚನಗಳಲ್ಲಿ, ಯೆರೆಮಿಯ ದೇವರ ಸಾನಿಧ್ಯ ಮತ್ತು ಶಕ್ತಿಯನ್ನು ದೃಢೀಕರಿಸಲು ತನ್ನ ಪ್ರಲಾಪದಿಂದ ತಾತ್ಕಾಲಿಕವಾಗಿ ಹೊರಬರುತ್ತಾನೆ:
ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ
ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯಸಾಧಿಸದೆ.
ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ
ಶಾಶ್ವತ ಅವಮಾನಕ್ಕೆ ಗುರಿಯಾಗುವರು
ಎಂದಿಗೂ ಮರೆಯಲಾಗದಂತೆ.
ಸರ್ವಶಕ್ತರಾದ ಸರ್ವೇಶ್ವರಾ,
ನೀವು ಸತ್ಪುರುಷರನ್ನು ಪರಿಶೋಧಿಸುವವರು
ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು.
ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು
ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು
ನಾನು ನೋಡುವಂತೆ ಮಾಡಿ.
ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ.
ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ. (ಯೆರೆಮಿಯ 20:11–13).

 ವಿಶ್ವಾಸದ ಈ ದೃಢೀಕರಣ ಹತಾಶೆಯಿಂದ ಕ್ಷಣಿಕ ಶಾಂತಿಯನ್ನು ನೀಡುತ್ತದೆ. ಯೆರೆಮಿಯ ದೇವರ ಸಮರ್ಥನೆಯಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ ಮತ್ತು ದೇವರನ್ನು ಸ್ತುತಿಸಲು ಇತರರನ್ನು ಸಹ ಕರೆಯುತ್ತಾನೆ (ವಚನ 13). ಆದರೂ, ಅವನ ಪ್ರಲಾಪಕ್ಕೆ ಹೋಲಿಸಿದರೆ ಭಾಗದ ಸಂಕ್ಷಿಪ್ತತೆ ಅವನ ಮನಸ್ಸು ದುರ್ಬಲವಾಗುತ್ತಿದೆ ಎಂಬುದನ್ನು ಸೂಚ್ಯವಾಗಿ ತೋರಿಸುತ್ತದೆ.

ಅಂತಿಮ ಹತಾಶೆಗೆ ಕುಗ್ಗಿಹೋಗುತ್ತಾನೆ

ವಿಶ್ವಾಸದ ಸಂಕ್ಷಿಪ್ತ ಅಭಿವ್ಯಕ್ತಿಯ ನಂತರವೂ ಯೆರೆಮಿಯ ಮತ್ತೆ ಅಗಾಧವಾದ ಹತಾಶೆಗೆ ಮುಳುಗುತ್ತಾನೆ:
ಶಪಿಸಲ್ಪಡಲಿ ನಾ ಹುಟ್ಟಿದಾ ದಿನವು!
ಶುಭವೆನಿಸಿಕೊಳ್ಳದಿರಲಿ ತಾಯಿ ನನ್ನನ್ನು ಹೆತ್ತಿದಾ ದಿನವು.
ಶಪಿಸಲ್ಪಡಲಿನಿನಗೆ ಗಂಡು ಹುಟ್ಟಿದೆಎಂದು
ನನ್ನ ತಂದೆಗೆ ತಿಳಿಸಿದಾತ!
ಕೇವಲ ಸಂತಸವನ್ನು ನನ್ನ ತಂದೆಯಲ್ಲಿ
ಉಂಟುಮಾಡಿದಾತ.
ಸರ್ವೇಶ್ವರನು ಕನಿಕರಿಸದೆ ಕೆಡವಿಬಿಟ್ಟ
ಪಟ್ಟಣದ ಗತಿ ಅವನಿಗಾಗಲಿ!
ಬೆಳಿಗ್ಗೆ ಕಿರುಚಾಟ, ನಡುಹಗಲಲ್ಲಿ ಕೂಗಾಟ
ಅವನ ಕಿವಿಗೆ ಬೀಳಲಿ!
ತಾಯಗರ್ಭದಲ್ಲಿರುವಾಗಲೆ ಅವನೇಕೆ ನನ್ನನ್ನು ಕೊಂದುಹಾಕಲಿಲ್ಲ?
ಆಗ ನನ್ನ ತಾಯೇ ನನಗೆ ಗೋರಿಯಾಗುತ್ತಿದ್ದಳಲ್ಲಾ!
ಆಕೆಯ ಗರ್ಭ ಸದಾ ಬಸಿರಾಗಿಯೇ ಇರುತ್ತಿತ್ತಲ್ಲಾ!
ಗರ್ಭ ಬಿಟ್ಟು ನಾನೇಕೆ ಹೊರಬಂದೆ?
ಕಷ್ಟದುಃಖಗಳನ್ನು ಅನುಭವಿಸುವುದಕ್ಕೊ?
ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ ಕಳೆಯುವುದಕ್ಕೊ?” (ಯೆರೆಮಿಯ 20:14–18).
ಅವನ ಜನನದ ಬಗ್ಗೆ ಸ್ವತಃ ಶಪಿಸಿಕೊಳ್ಳುವುದು ಅವನ ಪ್ರವಾದಿಯ ಸೇವೆಯಲ್ಲಿ ಯೆರೆಮಿಯನ ಕಡು ಭಾವನಾತ್ಮಕ ಸಮಯವನ್ನು ಪ್ರತಿನಿಧಿಸುತ್ತದೆ. ಯೆರೆಮಿಯ ಸ್ವತಃ ಶಪಿಸಿಕೊಳ್ಳುವುದರಲ್ಲಿ ಹಲವಾರು ಅಂಶಗಳು ಗಮನಾರ್ಹವಾಗಿವೆ.
ಯೆರೆಮಿಯ ಮೊದಲು ಅವನ ಜನನದ ದಿನವನ್ನು ಶಪಿಸುತ್ತಾನೆ, ನಂತರ ಅವನು ತನ್ನ ಜನನವನ್ನು ಘೋಷಿಸಿದ ಸಂದೇಶಕಾರನನ್ನು ಶಪಿಸುತ್ತಾನೆ, ಅವನು ಜನನಕ್ಕೂ ಮೊದಲೇ ಅವನ ಮರಣವಾಗಿರಬೇಕಿತ್ತು ಎಂದು ಬಯಸುತ್ತಾನೆ. ಅವನು ಹುಟ್ಟಿದಾಗ ಅವನ ತಂದೆ ಪಟ್ಟ ಸಂತೋಷ ಮತ್ತು ಅವನ ಈಗಿನ ದುಃಖವನ್ನು ಹೋಲಿಸಿ ತೋರಿಸುತ್ತಾನೆ. ಇಸ್ರಯೇಲಿನಲ್ಲಿ ಆಶೀರ್ವಾದವೆಂದು ಪರಿಗಣಿಸಲಾಗುವ ಗಂಡು ಮಗುವಿನ ಜನನ, ಈಗ ಯೆರೆಮಿಯನಿಗೆ ಆಶೀರ್ವಾದವಾಗಿರಲಿಲ್ಲ, ಬದಲಾಗಿ ಶಾಪವಾಗಿತ್ತು. ಅವನ ಜನನದ ಶುಭ ಸುದ್ದಿಯನ್ನು ತಂದ ದೂತನನ್ನು ಖಂಡಿಸುತ್ತಾನೆ ಮತ್ತು ಶಾಪಗ್ರಸ್ತ ಎನ್ನುತ್ತಾನೆ.
ಇಲ್ಲಿ ಯೆರೆಮಿಯನಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವೇನೂ ಇಲ್ಲ ಆದರೆ, ಅವನು ಎಂದಿಗೂ ಹುಟ್ಟಲೇಬಾರದಾಗಿತ್ತು ಎಂದು ಬಯಸುತ್ತಾನೆ. ಅಸ್ತಿತ್ವವಿಲ್ಲದಿರುವ ಬಯಕೆ ಸಾವಿನ ಬಯಕೆಗಿಂತ ಆಳವಾದ ಹತಾಶೆಯನ್ನು ವ್ಯಕ್ತಪಡಿಸುತ್ತದೆ, ಅವನ ಸಂಪೂರ್ಣ ಅಸ್ತಿತ್ವವನ್ನೇ ನಿರಾಕರಿಸುತ್ತದೆ.
ಯೆರೆಮಿಯನ ಈ ಆರನೇ ವಿಖ್ಯಾಪನೆ ಪರಿಹಾರವಿಲ್ಲದೆ ಕೊನೆಗೊಳ್ಳುತ್ತದೆ. “ಗರ್ಭ ಬಿಟ್ಟು ನಾನೇಕೆ ಹೊರಬಂದೆ?” ಎಂಬ ಅವನ ಕೊನೆಯ ಪ್ರಶ್ನೆಗೆ ಉತ್ತರವಿಲ್ಲ. "ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ ಕಳೆಯುವುದಕ್ಕೊ" ಎಂಬ ಯೆರೆಮಿಯನ ಕೊನೆಯ ಮಾತುಗಳು ನಿರಂತರ ಹತಾಶೆಯ ಸ್ಥಿತಿಯನ್ನು ಸೂಚಿಸುತ್ತದೆ. ಯೆರೆಮಿಯ ತಾನು ಹುಟ್ಟಿದ ದಿನವನ್ನು ಶಪಿಸುವ ಕೊನೆಯ ವಿಖ್ಯಾಪನೆ ಯೆರೆಮಿಯನ ನೋವು ಪ್ರವಾದಿ ಎಂಬ ಅವನ ಗುರುತನ್ನು ಕೂಡ ಎಷ್ಟು ಸಂಪೂರ್ಣವಾಗಿ ಕಬಳಿಸಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಅವನ ಸೇವೆ ಅವನ ಜೀವನವನ್ನು ಎಷ್ಟು ಆವರಿಸಿತ್ತೆಂದರೆ, ಅವನ ಪ್ರವಾದಿಯ ಪಾತ್ರವನ್ನು ಅವನ ವ್ಯಕ್ತಿತ್ವದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಆದರೆ ಅವನ ಸೇವೆಗೆ ನಿರಾಕರಣೆ ಮತ್ತು ಕಿರುಕುಳ ಮಾತ್ರ ದೊರಕಿದಾಗ ಅವನು ತನ್ನ ಜೀವನದ ಮೌಲ್ಯವನ್ನೇ ಪ್ರಶ್ನಿಸುತ್ತಾನೆ.

ಇಂದಿನ ಪ್ರವಾದಿತನದ ಸೇವೆಗೆ ಅನ್ವಯಿಕೆ

ಯೆರೆಮಿಯನ ಈ ಆರನೇ ವಿಖ್ಯಾಪನೆ ಯಾವುದೇ ಕಾಲದಲ್ಲಿ ಪ್ರವಾದಿಯ ಸೇವೆಯೊಂದಿಗೆ ಪ್ರವಾದಿಗೆ ಬರುವ ಮಾನಸಿಕ ಮತ್ತು ಆಧ್ಯಾತ್ಮಿಕ ಹೋರಾಟಗಳ ಬಗ್ಗೆ ಗಂಭೀರ ಒಳನೋಟವನ್ನು ನೀಡುತ್ತದೆ.

ಭಾವನಾತ್ಮಕ ಮತ್ತು ಮಾನಸಿಕ ಒತ್ತಡ (Emotional and Psychological Strain)

ಆಧುನಿಕ ದಿನದ ಪ್ರವಾದಿಗಳುಸುವಾರ್ತಾ ಪ್ರಸಾರ ಕಾರ್ಯಕರ್ತರು, ಸತ್ಯ ನುಡಿಯುವವರು ಮತ್ತು ಸಮಾಜ ಸುಧಾರಕರು ಅಥವಾ ಸೇವಕರು - ಆಗಾಗ್ಗೆ ಒಂಟಿತನ, ಅಪಹಾಸ್ಯ ಮತ್ತು ಭಾವನಾತ್ಮಕ ಉರಿಯನ್ನು ಅನುಭವಿಸಬೇಕಾಗುತ್ತದೆ. ನಿಷ್ಠೆ ಮತ್ತು ವಿಶ್ವಾಸ ನೋವು-ಕಷ್ಟಗಳನ್ನು ತರುವುದಿಲ್ಲ ಎಂಬುದಕ್ಕೆ ಖಾತರಿಯಿಲ್ಲ ಎಂಬುದನ್ನು ಯೆರೆಮಿಯನ ಘಟನೆ ನಮಗೆ ಕಲಿಸುತ್ತದೆ. ಅಷ್ಟೇ ಸಹಜವಾಗಿ, ನಿಜವಾದ ಪ್ರವಾದಿಗಳ ಸಂಕಟಗಳು ಅನೇಕ ಬಾರಿ ತಮ್ಮ ಸ್ವಂತ ಧಾರ್ಮಿಕ ವ್ಯವಸ್ಥೆಗಳಿಂದಲೂ ಹಗೆತನದಿಂದಲೂ ಬರುತ್ತವೆ.

ದೇವರೊಂದಿಗೆ ಹೋರಾಡುವುದು (Wrestling with God)

ದೇವರ ವಿರುದ್ಧ ಯೆರೆಮಿಯ ಮಾಡಿದ ಆರೋಪಗಳು ಸರಳ, ಪ್ರಾಮಾಣಿಕ ಪ್ರಾರ್ಥನೆಯ ರೂಪವನ್ನು ತೋರಿಸುತ್ತವೆ. ಅವನು ತನ್ನ ಭಾವನೆಗಳನ್ನು ನಿಗ್ರಹಿಸುವುದಿಲ್ಲ ಆದರೆ ಅವುಗಳಿಂದ ದೇವರೊಂದಿಗೆ ಸಂವಾದಿಸುತ್ತಾನೆ. ಇದು ನಮ್ಮ ಕಾಲದ ಆಧುನಿಕ ಪ್ರವಾದಿಗಳ ಧ್ವನಿ ದುರ್ಬಲ ವಿಶ್ವಾಸದ ಸಂಕೇತವಲ್ಲ, ಬದಲಿಗೆ, ಅದು ದೇವರೊಂದಿಗಿನ ಒಡನಾಟದ ಸಲುಗೆ ಎಂದು ಸ್ವೀಕರಿಸಬಹುದು.

ದೈವಿಕ ಬಲವಂತ ಮತ್ತು ನಿರಂತರತೆ (Divine Compulsion and Persistence)

ಅವನ ನೋವಿನ ಹೊರತಾಗಿಯೂ, ದೇವರ ವಾಕ್ಯ ಅವನ ಮೂಳೆಗಳಲ್ಲಿ ಬೆಂಕಿಯಂತೆ ದಹಿಸುತ್ತಿದೆ ಎಂದು ಯೆರೆಮಿಯ ಒಪ್ಪಿಕೊಳ್ಳುತ್ತಾನೆ. ಬಾಹ್ಯ ವ್ಯಕ್ತಿಗಳು, ವಿಷಯಗಳು ವಿಫಲವಾದಾಗಲೂ, ಆಂತರಿಕ ಶಕ್ತಿ ಪ್ರವಾದಿಯನ್ನು ಉತ್ತೇಜಿಸುತ್ತದೆ. ನಮ್ಮ ಸಮಕಾಲೀನ ಪ್ರವಾದಿತನದ ಸೇವೆ ಜನಪ್ರಿಯ ಬೆಂಬಲವನ್ನು ಅವಲಂಬಿಸದೆ, ದೇವರು ನೀಡುವ ಸಮರ್ಥನೆ ಮತ್ತು ಅನುಗ್ರಹವನ್ನು ಅವಲಂಬಿಸಿರಬೇಕು ಎಂಬುದನ್ನು ಕಲಿಸುತ್ತದೆ.

ಸಂತೋಷ ಮತ್ತು ದುಃಖದ ವಿರೋಧಾಭಾಸ (The Paradox of Joy and Suffering)

ಯೆರೆಮಿಯ ಹತಾಶೆ ಮತ್ತು ಸ್ತೋತ್ರದ ನಡುವೆ ಆಂದೋಲನಕ್ಕೆ ಒಳಗಾಗುತ್ತಾನೆ (ವಾ 11–13). ವ್ಯವಸ್ಥಿತ ಪ್ರತಿರೋಧದ ನಡುವೆ ನ್ಯಾಯವನ್ನು ಹುಡುಕುವ ಆಧುನಿಕ ಸೇವಾಕಾರ್ಯಗಳಲ್ಲಿ ಭಾವನಾತ್ಮಕ ವಿರೋಧಾಭಾಸಗಳು ಸಾಮಾನ್ಯ ಎಂಬುದನ್ನು ಗ್ರಹಿಸಬೇಕು. ಪ್ರವಾದಿಯ ಮಾರ್ಗ ಅಳು ಮತ್ತು ಆರಾಧನೆ, ಪ್ರಲಾಪ ಮತ್ತು ಭರವಸೆಯ ಮಾರ್ಗ ಎಂಬುದನ್ನು ಈ ವಿಖ್ಯಾಪನೆ ತಿಳಿಸಿಕೊಡುತ್ತದೆ.

ಸಮಾರೋಪ

ಯೆರೆಮಿಯನ ಆರನೇ ವಿಖ್ಯಾಪನೆ ಪ್ರವಾದಿಯ ಸೇವೆಯ ಆಳವಾದ ಭಾವನಾತ್ಮಕ ಸಂಕಟಗಳನ್ನು ಬಹಿರಂಗಪಡಿಸುತ್ತದೆ. ದೇವರ ಬಲವಂತದಿಂದ, ಸಾರ್ವಜನಿಕ ನಿರಾಕರಣೆಯಿಂದ, ವೈಯಕ್ತಿಕ ಹತಾಶೆಗೆ ಒಳಪಡುವ ಪ್ರವಾದಿಯ ಜೀವನದ ಸಂಕೀರ್ಣತೆಯನ್ನು ಈ ವಿಖ್ಯಾಪನೆ ತೋರಿಸಿಕೊಡುತ್ತದೆ. ಅವನ ಸ್ವಂತ ಜನನವನ್ನು ಶಪಿಸಿಕೊಳ್ಳುವ ಪರಾಕಾಷ್ಠೆಯಾದ ಅವನ ಪ್ರಲಾಪದ ಪ್ರಾಮಾಣಿಕ ಅಭಿವ್ಯಕ್ತಿ, ಸಮಕಾಲೀನ ಓದುಗರಿಗೆ ವಿಶ್ವಾಸದ ಸಾಕ್ಷಿಯಾಗಲು ತೆರಬೇಕಾಗುವ ವೈಯಕ್ತಿಕ ಬೆಲೆಯನ್ನು ಗ್ರಹಿಸುವಂತೆ ಮಾಡುತ್ತದೆ.
ಹತಾಶೆಯ ಹೊರತಾಗಿಯೂ, ನಂತರದ ಅಧ್ಯಾಯಗಳಲ್ಲಿ ಯೆರೆಮಿಯನ ನಿರಂತರ ಸೇವೆ ಆತ್ಮದ ಅಂತಹ ಕರಾಳ ರಾತ್ರಿಗಳು ಪ್ರವಾದಿಯ ಕಥೆಯ ಅಂತ್ಯವಾಗಬೇಕಾಗಿಲ್ಲ ಎಂಬ ಆಶಾಭಾವವನ್ನು ಸೂಚಿಸುತ್ತದೆ. ಅಗಾಧವಾದ ಅಡೆತಡೆಗಳ ಹೊರತಾಗಿಯೂ ಅವನ ಪರಿಶ್ರಮಗಳು ಪ್ರತಿರೋಧಕ ಸಂದರ್ಭಗಳಲ್ಲಿಯೂ ಅಹಿತಕರ ಸತ್ಯಗಳನ್ನು ಮಾತನಾಡಲು ಕರೆಯಲಾಗಿರುವ ಎಲ್ಲರಿಗೂ ಭರವಸೆಯನ್ನು ನೀಡುತ್ತದೆ.
ನಿಜವಾದ ಪ್ರವಾದಿಯ ಸೇವೆ ದಿಟ್ಟವಾಗಿ ದೇವರ ವಾಕ್ಯವನ್ನು ಸಾರುವುದು ಮಾತ್ರವಲ್ಲ, ನಿಜವಾದ ಮಾನವ ದುರ್ಬಲತೆಯನ್ನು ಸ್ವತಃ ಗ್ರಹಿಸಿಕೊಳ್ಳುವುದು ಎಂಬುದಕ್ಕೆ ವಿಖ್ಯಾಪನೆ ಸಾಕ್ಷಿಯಾಗಿದೆ. ಶತಮಾನಗಳಾಂತರದಲ್ಲಿ ಯೆರೆಮಿಯನ ಈ ಸಾಕ್ಷಿಯನ್ನು ಬಹಳ ಶಕ್ತಿಯುತವಾಗಿಸಿರುವುದು ಮತ್ತು ಇಂದಿನ ಪ್ರವಾದಿಗಳ ಧ್ವನಿಗಳಿಗೆ ಅದನ್ನು ಪ್ರಸ್ತುತವಾಗಿಸಿರುವುದು ಯಾವುದೆಂದರೆ, ಸತ್ಯವನ್ನು ಅಚಲವಾಗಿ ಹೇಳುವ ಮತ್ತು ಭಾವನಾತ್ಮಕ ಪ್ರಾಮಾಣಿಕತೆಯನ್ನು ಮುಚ್ಚುಮರೆಯಿಲ್ಲದೆ ಎಲ್ಲರೆದುರು ಬಿಡಿಸಿಡುವ ಪ್ರವಾದಿಯ ಸಂಯೋಜನೆಯೇ.

[ಇದು ಪ್ರೋಕ್ಲೌಡೆ ಮರಿಯೋಟಿನಿ ಅವರ 
Jeremiah’s Sixth Confession (Jeremiah 20:7-18) ಎಂಬ ಪ್ರಬಂಧದ ಕನ್ನಡ ಭಾಷಾಂತರ
ಇದರ ಮೂಲ ಬರವಣಿಗೆಯನ್ನು 

Comments

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23