ಯೆರೆಮಿಯನ ನಾಲ್ಕನೆಯ ವಿಖ್ಯಾಪನೆ: ಯೆರೆಮಿಯ 17:14–18

 

ಪಠ್ಯ: ಯೆರೆಮಿಯ 17:14–18

14 ಹೇ ಸರ್ವೇಶ್ವರಾ, ನನ್ನನ್ನು ಸ್ವಸ್ಥಪಡಿಸಿರಿ, ನಾನು ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸಿರಿ, ನಾನು ರಕ್ಷಿತನಾಗಿಯೆ ತೀರುವೆನು. ನೀವೇ ನನಗೆ ಸ್ತುತ್ಯಾರ್ಹರು!

15 ಅಕಟಾ, ಜನರು ನನ್ನನ್ನುಸರ್ವೇಶ್ವರನ ಮಾತೆಲ್ಲಿ? ಅದು ಈಗಲೇ ನೆರವೇರಲಿಎಂದು ಮೂದಲಿಸುತ್ತಾರೆ.

16 ನಾನಾದರೋಕೇಡನ್ನು ಬರಮಾಡಿಎಂದು ನಿಮ್ಮನ್ನು ತವಕಪಡಿಸಲಿಲ್ಲ. ಅನಿವಾರ್ಯ ವಿಪತ್ತಿನ ದಿನವನ್ನು ನಾನು ಅಪೇಕ್ಷಿಸಲಿಲ್ಲ. ಇದು ನಿಮಗೆ ತಿಳಿದ ವಿಷಯ. ನನ್ನ ಮಾತುಗಳು ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯಿಂದ ಹೊರಟವು.

17 ನನಗೆ ಭಯಕ್ಕೆ ಕಾರಣವಾಗಬೇಡಿ, ಕೇಡಿನ ಕಾಲದಲ್ಲಿ ನನಗೆ ಆಶ್ರಯ ನೀಡಿ.

18 ನನಗಲ್ಲ, ನನ್ನ ಹಿಂಸಕರಿಗೆ ಅವಮಾನವಾಗಲಿ. ಭಯಭ್ರಾಂತಿ ನನ್ನನ್ನಲ್ಲ, ಅವರನ್ನು ಅಪಹರಿಸಲಿ. ಅವರಿಗೆ ಕೇಡುಗಾಲವನ್ನು ಬರಮಾಡಿ ಬೇರುಸಹಿತ ಅವರನ್ನು ನಾಶಪಡಿಸಿರಿ!

ಮುನ್ನುಡಿ

ಯೆರೆಮಿಯನ ವಿಖ್ಯಾಪನೆಗಳು ಪ್ರವಾದಿಯ ಆಂತರಿಕ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ವಲಯಗಳನ್ನು ಬಹಿರಂಗಪಡಿಸುವ ವೈಯಕ್ತಿಕ ಪ್ರಲಾಪಗಳ ಸರಣಿಯನ್ನು ನಮಗೆ ಪರಿಚಯಿಸುತ್ತದೆ. ನಾಲ್ಕನೆಯ ಈ ವಿಖ್ಯಾಪನೆ, ಅವನ ದುರ್ಬಲತೆಯ ಹೃದಯಸ್ಪರ್ಶಿ ಚಿತ್ರಣವಾಗಿ ಕಾಣಸಿಗುತ್ತದೆ; ಇದರಲ್ಲಿ ಪ್ರವಾದಿ ತನ್ನ ಹೋರಾಟಗಳು, ಭಯ ಮತ್ತು ದೇವರಲ್ಲಿ ಅತ್ಯಂತ ಹೆಚ್ಚಿನ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ. ಪ್ರಾರ್ಥನೆ, ಯೆರೆಮಿಯನ ಸೇವಾಕಾರ್ಯದ ಸವಾಲುಗಳ ಬಗ್ಗೆ ಮತ್ತು ದೇವರ ಕರೆಯೊಂದಿಗಿನ ಅವನ ಸಂಕೀರ್ಣ ಸಂಬಂಧದ ಬಗ್ಗೆ ಒಂದು ಅನನ್ಯ ದೃಷ್ಟಿಕೋನವನ್ನು ಒದಗಿಸುತ್ತದೆ.

ಇದರಲ್ಲಿ, ವೈಯಕ್ತಿಕ ಸಮರ್ಥನೆ, ದೈವಿಕ ಗುಣಪಡಿಸುವಿಕೆ ಮತ್ತು ತನ್ನ ಹಿಂಸಕರ ಮೇಲೆ ತೀರ್ಪಿಗಾಗಿ ತನ್ನ ಮನವಿಯನ್ನು ಯೆರೆಮಿಯ ಮಂಡಿಸುತ್ತಾನೆ. ಇದು ಬಹಳ ವೈಯಕ್ತಿಕವಾಗಿ ಕಂಡರೂ, ದೇವರ ನ್ಯಾಯ ಮತ್ತು ಅವರ ಕರುಣಾ ದಾನ (provision) ದಲ್ಲಿ ನಂಬಿಕೆಯನ್ನು ದೃಢೀಕರಿಸುತ್ತದೆ, ಮಾತ್ರವಲ್ಲ ಅವನ ದುರ್ಬಲತೆಯನ್ನು (vulnerability) ಈ ವಿಖ್ಯಾಪನೆ ಪ್ರತಿಬಿಂಬಿಸುತ್ತದೆ.

ಐತಿಹಾಸಿಕ ಹಿನ್ನೆಲೆ

ನಾಲ್ಕನೆಯ ವಿಖ್ಯಾಪನೆ ಜೂಡಾದ ಇತಿಹಾಸದ ಪ್ರಕ್ಷುಬ್ಧ ಅವಧಿಯಲ್ಲಿ ಸಂಭವಿಸಿತು. ಇದು ತೀವ್ರ ರಾಜಕೀಯ ಅಸ್ಥಿರತೆಯ ಅವಧಿ; ಇದು ಬ್ಯಾಬಿಲೋನ್ ಸಾಮ್ರಾಜ್ಯದ ತ್ವರಿತ ವಿಸ್ತರಣೆ ಮತ್ತು ಜೂಡಾದ ಸಾರ್ವಭೌಮತ್ವಕ್ಕೆ ಬೆದರಿಕೆಯುಂಟಾದ ಸಮಯದಲ್ಲಿ ನಡೆಯಿತು. ಜೂಡಾದ ನಿರಂತರ ವಿಗ್ರಹಾರಾಧನೆ ಮತ್ತು ನೈತಿಕ ಭ್ರಷ್ಟಾಚಾರದಿಂದಾಗಿ ಸನ್ನಿಹಿತವಾಗುತ್ತಿರುವ ʼದೇವರ ತೀರ್ಪಿʼನ ಬಗ್ಗೆ ಅವನ ಸಂದೇಶಗಳು ಎಚ್ಚರಿಸುತ್ತಿತ್ತು.

ಯೆರೆಮಿಯನ ಸಂದೇಶಗಳು ಪಶ್ಚಾತ್ತಾಪಕ್ಕೆ ಮತ್ತು ದೇವರ ತೀರ್ಪಿನ ಭಾಗವಾಗಿ ಜೂಡಾ ಬ್ಯಾಬಿಲೋನಿಗೆ ಮಣಿಯುವಂತೆ ಆಹ್ವಾನಿಸುತ್ತಿದ್ದವು. ಇದು ರಾಜಕೀಯ ಮತ್ತು ಧಾರ್ಮಿಕ ನಾಯಕರ ಹಾಗೂ ಸಾಮಾನ್ಯ ಜನರ ತೀವ್ರ ವಿರೋಧಕ್ಕೆ ಕಾರಣವಾಯಿತು. ಸನ್ನಿವೇಶದಲ್ಲಿ, ಅವನು ಜನರಿಗೆ ಪ್ರಿಯವಾಗದ ʼದೇವರ ತೀರ್ಪಿʼನ ಬಗ್ಗೆ ಮತ್ತು ಸಂಭವಿಸಲಿರುವ ಗಡಿಪಾರಿನ ಬಗ್ಗೆ ಸಂದೇಶಗಳನ್ನು ನೀಡಿದಾಗ ಅವನ ಜೀವಕ್ಕೆ ಬೆದರಿಕೆಗಳು ಸೇರಿದಂತೆ ವೈಯಕ್ತಿಕ ದಾಳಿಗಳನ್ನು ಎದುರಿಸಬೇಕಾಯಿತು. ಅವನ ಈ ನಾಲ್ಕನೆಯ ವಿಖ್ಯಾಪನೆ, ಈ ಹಗೆತನದ ವಾತಾವರಣವನ್ನು ಹಾಗೂ ತನ್ನ ಪ್ರವಾದಿತ್ವದ ಧ್ಯೇಯವನ್ನು ವಿರೋಧಿಸಿದವರ ವಿರುದ್ಧ ದೇವರಿಂದ ಸಮರ್ಥನೆ ಬಯಸುವುದನ್ನು ತೋರಿಸುತ್ತವೆ.

ವಿಖ್ಯಾಪನೆಯ ಸಮಯಕ್ಕೆ, ಯೆರೆಮಿಯ ಗಮನಾರ್ಹ ವಿರೋಧವನ್ನು ಎದುರಿಸಿದ್ದನು. ವಿನಾಶದ ಅವನ ಸಂದೇಶಗಳು ಮತ್ತು ಪಶ್ಚಾತ್ತಾಪದ ಕರೆ ಅವರಿಗೆ ಸ್ವಾಗತಾರ್ಹವಾಗಿರಲಿಲ್ಲ ಮತ್ತು ಅವನ ಟೀಕಾಕಾರರು ಅವನನ್ನು ಮೌನವಾಗಿಸಲು ಪ್ರಯತ್ನಿಸಿದ್ದರು. ದೇವರ ವಾಕ್ಯವನ್ನು ಅನ್ಯಾಯವಾಗಿ ವಿರೋಧಿಸುತ್ತಿದ್ದಾರೆಂದು ಕಂಡುಕೊಂಡ ಅವನು, ತನ್ನ ಹಿಂಸಕರ ಮೇಲಿನ ಅವನ ಹತಾಶೆಯನ್ನು ನಾಲ್ಕನೆಯ ವಿಖ್ಯಾಪನೆ ಹೇಳುತ್ತದೆ. ಆದರೂ, ತನ್ನ ಸಂಕಟದ ನಡುವೆ ತನ್ನನ್ನು ಗುಣಪಡಿಸುವ ಮತ್ತು ಸಮರ್ಥಿಸುವ ದೇವರ ಶಕ್ತಿಯಲ್ಲಿ ತನ್ನ ವಿಶ್ವಾಸವನ್ನು ಯೆರೆಮಿಯ ತನ್ನ ಹೇಳಿಕೆಯಲ್ಲಿ ಪ್ರದರ್ಶಿಸುತ್ತಾನೆ.


ಯೆರೆಮಿಯನ ವಿಖ್ಯಾಪನೆ

14:ಹೇ ಸರ್ವೇಶ್ವರಾ, ನನ್ನನ್ನು ಸ್ವಸ್ಥಪಡಿಸಿರಿ, ನಾನು ಸ್ವಸ್ಥನಾಗುವೆನು. ನನ್ನನ್ನು ರಕ್ಷಿಸಿರಿ, ನಾನು ರಕ್ಷಿತನಾಗಿಯೆ ತೀರುವೆನು. ನೀವೇ ನನಗೆ ಸ್ತುತ್ಯಾರ್ಹರು.”

ಯೆರೆಮಿಯ ಸ್ವಸ್ಥತೆಗಾಗಿ ಮತ್ತು ರಕ್ಷಣೆಗಾಗಿ ತನ್ನ ವೈಯಕ್ತಿಕ ಮನವಿಯೊಂದಿಗೆ ವಿಖ್ಯಾಪನೆಯನ್ನು ಪ್ರಾರಂಭಿಸುತ್ತಾನೆ. ಹೀಬ್ರೂ ಪದ ರಾಫಾ ಎಂದರೆಗುಣಪಡಿಸುವುದು ಅಥವಾ ಸ್ವಸ್ಥಪಡಿಸುವುದು.” ಯೆರೆಮಿಯನ ಪ್ರಾರ್ಥನೆಯಲ್ಲಿ ಸ್ವಸ್ಥಪಡಿಸು ಎಂಬ ಪದ ಕೇವಲ ಗುಣಪಡಿಸುವುದು ಮಾತ್ರವಲ್ಲ, ವ್ಯಕ್ತಿಯ ಸಮಗ್ರ ಪುನಃಸ್ಥಾಪನೆಯನ್ನು (comprehensive restorationಸೂಚಿಸುತ್ತದೆ. ದೇವರು ಮಾತ್ರ ನಿಜವಾದ ಪುನಃಸ್ಥಾಪನೆಯನ್ನು ಮಾಡಬಲ್ಲರೆಂದು ಯೆರೆಮಿಯ ತೋರಿಸುತ್ತಾನೆ. ಅವನ ಮಾತುಗಳು, ದೈಹಿಕ ಮತ್ತು ಆಧ್ಯಾತ್ಮಿಕ ಗುಣಪಡಿಸುವಿಕೆಯನ್ನು ಸೂಚಿಸುತ್ತವೆ, ಅದು ದೇವರಿಂದಲೇ ಆಗಬೇಕು ಎಂದು ಸಾರುತ್ತವೆ. "ನೀವೇ ನನಗೆ ಸ್ತುತ್ಯಾರ್ಹರು" ಎಂಬ ನುಡಿಗಟ್ಟು ತನ್ನ ಕಷ್ಟಗಳ ನಡುವೆಯೂ ದೇವರಲ್ಲಿ ಯೆರೆಮಿಯನ ಅಚಲವಾದ ಭಕ್ತಿಯನ್ನು ಒತ್ತಿಹೇಳುತ್ತದೆ.

15:ಅಕಟಾ, ಜನರು ನನ್ನನ್ನುಸರ್ವೇಶ್ವರನ ಮಾತೆಲ್ಲಿ? ಅದು ಈಗಲೇ ನೆರವೇರಲಿಎಂದು ಮೂದಲಿಸುತ್ತಾರೆ.

ತನ್ನ ಪ್ರವಾದನೆಗಳ ನೆರವೇರುವಿಕೆಯನ್ನು ಪ್ರಶ್ನಿಸುವ ತನ್ನ ವಿರೋಧಿಗಳ ಅಪಹಾಸ್ಯವನ್ನು ಯೆರೆಮಿಯ ಇಲ್ಲಿ ಉದ್ದೇಶಿಸುತ್ತಾನೆ. ಇದು ಯೆರೆಮಿಯ ಎದುರಿಸಿದ ಸಂದೇಹ ಮತ್ತು ಹಗೆತನವನ್ನು ತೋರಿಸುತ್ತದೆ. ಅವನ ಮಾತುಗಳು ದೈವಿಕ ಸಂದೇಶ ಮತ್ತು ಮಾನವ ಅಪನಂಬಿಕೆಯ ನಡುವಿನ ಉದ್ವಿಗ್ನತೆಯನ್ನು ಒತ್ತಿಹೇಳುತ್ತವೆ, ಇದು ಪ್ರವಾದಿಯ ಸೇವೆಯಲ್ಲಿ ಒಂದು ಪುನರಾವರ್ತಿತ ಹಾಗೂ ಸಾಮಾನ್ಯ ವಿಷಯ.

ಯೆರೆಮಿಯ ತನ್ನ ಪ್ರವಾದಿಯ ಸೇವೆಗೆ ನೇರ ಸವಾಲನ್ನು ಎದುರಿಸುತ್ತಾನೆ. ಅವನ ಶತ್ರುಗಳು ಅವನನ್ನು ಅಪಹಾಸ್ಯ ಮಾಡುತ್ತಾರೆ, ಅವನ ಭವಿಷ್ಯವಾಣಿಗಳ ನೆರವೇರುವಿಕೆಯನ್ನು ಅನುಮಾನಿಸುತ್ತಾರೆ. ಅವರ ಮೂದಲಿಕೆಗಳು ಯೆರೆಮಿಯ ನುಡಿದ ತೀರ್ಪಿನ ಎಚ್ಚರಿಕೆಗಳ ಬಗ್ಗೆ ಅವರ ಅಪನಂಬಿಕೆ ಮತ್ತು ಅಸಹನೆಯನ್ನು ವ್ಯಕ್ತಪಡಿಸುತ್ತವೆ. ಪ್ರವಾದಿಯ ಘೋಷಣೆಗಳು ಮತ್ತು ಯೆರೆಮಿಯ ಸಾರುತ್ತಿದ್ದ ಸಂದೇಶಗಳ ನೆರವೇರಿಕೆಯ ನಡುವೆ ಆಗುತ್ತಿರುವ ವಿಳಂಬದ ನಡುವಿನ ಉದ್ವಿಗ್ನತೆಯನ್ನು ಜನರ ಈ ಸಂದೇಹ ನಮಗೆ ತೋರಿಸುತ್ತದೆ.

16:ನಾನಾದರೋಕೇಡನ್ನು ಬರಮಾಡಿಎಂದು ನಿಮ್ಮನ್ನು ತವಕಪಡಿಸಲಿಲ್ಲ. ಅನಿವಾರ್ಯ ವಿಪತ್ತಿನ ದಿನವನ್ನು ನಾನು ಅಪೇಕ್ಷಿಸಲಿಲ್ಲ. ಇದು ನಿಮಗೆ ತಿಳಿದ ವಿಷಯ. ನನ್ನ ಮಾತುಗಳು ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯಿಂದ ಹೊರಟವು.”

ಯೆರೆಮಿಯ ಪ್ರವಾದಿಯಾಗಿ ತನ್ನ ವಿಶ್ವಾಸಾರ್ಹತೆಯನ್ನು ಸಮರ್ಥಿಸಿಕೊಳ್ಳುತ್ತಾನೆ, ಅವನು ತನ್ನ ಪ್ರವಾದಿತನದ ಕರೆಯನ್ನು ತ್ಯಜಿಸಿಲ್ಲ ಎಂದು ವಾದಿಸುತ್ತಾನೆ. ವೈಯಕ್ತಿಕ ಲಾಭಕ್ಕಾಗಿ ಬೋಧಿಸಿದ ಸುಳ್ಳು ಪ್ರವಾದಿಗಳಿಗಿಂತ ಭಿನ್ನವಾಗಿ ಯೆರೆಮಿಯ ದೃಢವಾಗಿ ಉಳಿದನು, ದೇವರು ಆಜ್ಞಾಪಿಸಿದ್ದನ್ನೇ ಹೇಳಿದನು. ನ್ಯಾಯತೀರ್ಪನ್ನು ಸಾರುವುದರಲ್ಲಿ ತನಗೆ ಸಂತೋಷವಿಲ್ಲ ಎಂದು ಅವನು ಸ್ಪಷ್ಟಪಡಿಸುತ್ತಾನೆ. ಇಲ್ಲಿ "ವಿಪತ್ತಿನ ದಿನ" ಎಂದರೆ ಮುಂದೆ ಎರಗಲಿರುವ "ಪ್ರಭುವಿನ ದಿನ"ದ ಉಲ್ಲೇಖವಾಗಿದೆ. "ಪ್ರಭುವಿನ ದಿನ" ಸರ್ವೇಶ್ವರ ಬಂದು ಇಸ್ರಯೇಲನ್ನು ಅದರ ಶತ್ರುಗಳ ವಿರುದ್ಧ ರಕ್ಷಿಸುವ ದಿನ ಎಂದು ಇಸ್ರಯೇಲರು ನಂಬಿದ್ದರು; ಆದರೆ ಇಲ್ಲಿ "ವಿಪತ್ತಿನ ದಿನ" ಸರ್ವೇಶ್ವರ ತನ್ನ ಸ್ವಂತ ಜನರ ವಿರುದ್ಧ ಹೋರಾಡಲು ಬರುವ ಸಮಯ ಎಂದು ಯೆರೆಮಿಯ ಹೇಳುತ್ತಾನೆ.

"ನನ್ನ ಮಾತುಗಳು ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯಿಂದ ಹೊರಟವು" ಎಂಬ ಹೇಳಿಕೆ ಯೆರೆಮಿಯನ ಸಂದೇಶದ ಪ್ರಾಮಾಣಿಕತೆಯನ್ನು ಒತ್ತಿಹೇಳುತ್ತದೆ: ದೇವರು ಅವನಿಗೆ ಹೇಳಲು ಕೊಟ್ಟಿದ್ದನ್ನು ಮಾತ್ರ ಅವನು ಹೇಳಿದನು. ಯೆರೆಮಿಯ ತನ್ನ ಸಮಕಾಲೀನರ ಪ್ರತಿರೋಧದೊಂದಿಗೆ ತನ್ನ ವಿಧೇಯತೆಯನ್ನು ಹೋಲಿಸುತ್ತಾನೆ, ದೇವರ ಆಜ್ಞೆಗಳನ್ನು ಪಾಲಿಸುವಲ್ಲಿ ಅವನ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ದೃಢೀಕರಿಸುತ್ತಾನೆ.

17:ನನಗೆ ಭಯಕ್ಕೆ ಕಾರಣವಾಗಬೇಡಿ, ಕೇಡಿನ ಕಾಲದಲ್ಲಿ ನನಗೆ ಆಶ್ರಯ ನೀಡಿ.” 

ತನ್ನ ಆಶ್ರಯ ಮತ್ತು ರಕ್ಷಕನಾಗಿರಲಿ ಎಂದು ಯೆರೆಮಿಯ ದೇವರನ್ನು  ಬೇಡಿಕೊಳ್ಳುತ್ತಾನೆ. ಯೆರೆಮಿಯ ರಕ್ಷಣೆಗಾಗಿ ದೇವರ ಮೇಲೆ ತನ್ನ ಅವಲಂಬನೆಯನ್ನು ವ್ಯಕ್ತಪಡಿಸುತ್ತಾ, ದೇವರು ಮಾತ್ರ ವಿರೋಧಿಗಳ ಭಯದಿಂದ ತನ್ನನ್ನು ರಕ್ಷಿಸಬಲ್ಲವರೆಂದು ಹೇಳುತ್ತಾನೆ. ವಾಕ್ಯ ದೇವರ ನ್ಯಾಯದಲ್ಲಿ ಅವನ ವಿಶ್ವಾಸದ ಪುನರುಚ್ಚಾರಣೆ ಎನ್ನಬಹುದು.

18:ನನಗಲ್ಲ, ನನ್ನ ಹಿಂಸಕರಿಗೆ ಅವಮಾನವಾಗಲಿ. ಭಯಭ್ರಾಂತಿ ನನ್ನನ್ನಲ್ಲ, ಅವರನ್ನು ಅಪಹರಿಸಲಿ. ಅವರಿಗೆ ಕೇಡುಗಾಲವನ್ನು ಬರಮಾಡಿ ಬೇರುಸಹಿತ ಅವರನ್ನು ನಾಶಪಡಿಸಿರಿ!”

ವೈಯಕ್ತಿಕ ಸಮರ್ಥನೆಯನ್ನು ಹೇಳುತ್ತಾ ತನ್ನ ಶತ್ರುಗಳು ಇಂತಹ ಪರಿಣಾಮಗಳನ್ನು ಎದುರಿಸುವಂತಾಗಲಿ ಎಂದು ಯೆರೆಮಿಯ ಕೇಳಿಕೊಳ್ಳುತ್ತಾನೆ. ಅವನ ವಿರೋಧಿಗಳ ಮೇಲೆ ದೇವರ ತೀರ್ಪಿಗೆ ನಿಷ್ಠುರ ಪ್ರಾರ್ಥನೆ ಬೇಡಿಕೆ ಇಡುತ್ತದೆ. ಅವರ ಶಿಕ್ಷೆಗಾಗಿ ಯೆರೆಮಿಯ ಬೇಡಿಕೊಳ್ಳುವ ಈ ಭಾಗ ಹಳೆಯ ಒಡಂಬಡಿಕೆಯಲ್ಲಿ ಕಂಡು ಬರುವ ʼದೈವಿಕ ಪ್ರತೀಕಾರʼ (divine retribution)ದ ತತ್ವವನ್ನು ಪ್ರತಿಬಿಂಬಿಸುತ್ತದೆ. ಅವನ ಭಾಷೆ, ನಾವು ಗಮನಿಸಬಹುದಾದಷ್ಟು ದಿಟ್ಟವಾಗಿದೆ ಮತ್ತು ನ್ಯಾಯಕ್ಕಾಗಿ ಅವನ ದುಃಖ ಹಾಗೂ ತೀವ್ರ ಬಯಕೆಯನ್ನು ತೋರಿಸುತ್ತದೆ.

ಇಂದಿನ ಸುವಾರ್ತಾ ಪ್ರಸಾರ ಕಾರ್ಯಭಾರಿಗಳಿಗೆ ವಿಖ್ಯಾಪನೆಯ ಪ್ರಸ್ತುತತೆ

ದೇವರ ಸೇವೆ ಮಾಡುವಾಗ ವಿರೋಧವನ್ನು ಅನುಭವಿಸುವ ಸುವಾರ್ತಾ ಪ್ರಸಾರ ಕಾರ್ಯಭಾರಿಗಳಿಗೆ ಮತ್ತು ವಿಶ್ವಾಸಿಗಳಿಗೆ ಯೆರೆಮಿಯನ ಈ ನಾಲ್ಕನೆಯ ವಿಖ್ಯಾಪನೆ ಬಹಳ ಪ್ರಸ್ತುತವಾಗಿದೆ.

ದೇವರೊಂದಿಗೆ ಪ್ರಾಮಾಣಿಕ ಸಂಭಾಷಣೆ

ದೇವರ ಮುಂದೆ ವೈಯಕ್ತಿಕ ಹೋರಾಟಗಳು, ಅನುಮಾನಗಳು ಮತ್ತು ಹತಾಶೆಗಳನ್ನು ಪ್ರಾರ್ಥನೆಯಲ್ಲಿ ಹೇಳುವುದರ ಔಚಿತ್ಯವನ್ನು ಯೆರೆಮಿಯ ಇಲ್ಲಿ ತೋರಿಸುತ್ತಾನೆ. ಸವಾಲುಗಳ ನಡುವೆಯೂ ದೇವರೊಂದಿಗೆ ಆಳವಾದ ಮತ್ತು ದೃಢವಾದ ಸಂಬಂಧವನ್ನು ಬೆಳೆಸಿಕೊಳ್ಳಲು ಸುವಾರ್ತಾ ಪ್ರಸಾರ ಕಾರ್ಯಭಾರಿಗಳು ಮಾದರಿಯನ್ನು ಬಳಸಬಹುದು.

ವಿರೋಧದ ಸನ್ನಿವೇಶದಲ್ಲಿ ಅಗತ್ಯವಾದ ಮನೋಧಾರ್ಡ್ಯತೆ

ಪ್ರತಿಕೂಲ ಸಂದರ್ಭಗಳ ನಡುವೆಯೂ ಯೆರೆಮಿಯನ ಪರಿಶ್ರಮಗಳು, ಟೀಕೆ ಅಥವಾ ಸಂದೇಹಗಳನ್ನು ಎದುರಿಸುವ ಸುವಾರ್ತಾ ಪ್ರಸಾರ ನಾಯಕರು ತಮ್ಮ ಕರೆಯಲ್ಲಿ ದೃಢವಾಗಿರುವಂತೆ ಪ್ರೋತ್ಸಾಹಿಸುತ್ತದೆ.

ದೇವರ ಸ್ವಸ್ಥಪಡಿಸುವ ಶಕ್ತಿ ಮತ್ತು ನ್ಯಾಯದ ಮೇಲೆ ಅವಲಂಬನೆ

ಸ್ವಸ್ಥಪಡಿಸುವಿಕೆ ಮತ್ತು ಸಮರ್ಥನೆಗಾಗಿ ಯೆರೆಮಿಯನ ಮನವಿ, ಸುವಾರ್ತಾ ಪ್ರಸಾರ ಕಾರ್ಯಭಾರಿಗಳು ಶಕ್ತಿಗಾಗಿ ದೇವರ ಮೇಲೆ ಅವಲಂಬಿತರಾಗಲು ಜ್ಞಾಪಿಸುತ್ತದೆ; ಸ್ವಾವಲಂಬನೆ ಅಥವಾ ಪ್ರತೀಕಾರವನ್ನು ಹುಡುಕುವ ಬದಲು ದೇವರ ಮಾರ್ಗದರ್ಶನ ಮತ್ತು ಸಹಾಯ ನಮಗೆ ಅಗತ್ಯ ಎಂಬುದನ್ನು ಕಲಿಸುತ್ತದೆ.

ಸಮಗ್ರತೆ ಮತ್ತು ನಿಷ್ಠೆ (Integrity and Faithfulness)

ಸುವಾರ್ತಾ ಪ್ರಸಾರ ಕಾರ್ಯಭಾರಿಗಳು, ತಮ್ಮ ಸೇವೆಯಲ್ಲಿ ಬಾಹ್ಯ ಒತ್ತಡಗಳನ್ನು ಲೆಕ್ಕಿಸದೆ ಮನುಜರ ರಕ್ಷಣಾ ಕಾರ್ಯದಲ್ಲಿ ಸಮಗ್ರತೆ ಮತ್ತು ದೇವರೆಡೆ ವಿಧೇಯತೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಎತ್ತಿ ಈ ವಿಖ್ಯಾಪನೆ ತೋರಿಸುತ್ತದೆ.

ದೇವರ ಸಾರ್ವಭೌಮತ್ವದಲ್ಲಿ ನಂಬಿಕೆ

ದೇವರು ತನ್ನ ಆಶ್ರಯವೆಂದು ನಂಬಿದ ಯೆರೆಮಿಯ, ಅಂತಿಮ ನ್ಯಾಯ ಮತ್ತು ರಕ್ಷಣೆ ದೇವರ ಕೈಯಲ್ಲಿದೆ ಎಂಬುದನ್ನು ಸುವಾರ್ತಾ ಪ್ರಸಾರ ಕಾರ್ಯಭಾರಿಗಳಿಗೆ ನೆನಪಿಸುತ್ತಾನೆ.

ಸಮಾರೋಪ

ಸ್ವಸ್ಥಪಡಿಸುವಿಕೆ ಮತ್ತು ರಕ್ಷಣೆಗಾಗಿ ಯೆರೆಮಿಯನ ಮನವಿ ಕ್ರೈಸ್ತರಿಗೆ, ಅವರ ಶಕ್ತಿಯ ಮೂಲ ದೇವರು ಎಂಬುದನ್ನು ನೆನಪಿಸುತ್ತದೆ. ಭಾವನಾತ್ಮಕ, ಆಧ್ಯಾತ್ಮಿಕ ಅಥವಾ ದೈಹಿಕ ಯಾತನೆಯ ಸಮಯದಲ್ಲಿ, ಪ್ರಾರ್ಥನೆಯಲ್ಲಿ ದೇವರ ಕಡೆಗೆ ತಿರುಗುವುದು ಅತ್ಯಗತ್ಯ.

ಯೆರೆಮಿಯನ ನಾಲ್ಕನೆಯ ವಿಖ್ಯಾಪನೆ ಸೇವೆಯಲ್ಲಿ ಎದುರಾಗುವ ಹೋರಾಟಗಳು, ಅಗತ್ಯವಾದ ವಿಶ್ವಾಸ ಮತ್ತು ದೃಢತೆಯ (resilience) ಬಗ್ಗೆ ಕಾಲಾತೀತ ಉದಾಹರಣೆಯನ್ನು ನೀಡುತ್ತದೆ. ಇದರ ಸಂದೇಶಗಳು ಆಧುನಿಕ ನಾಯಕತ್ವದ ವಾಸ್ತವಗಳನ್ನು ತೆರೆದಿಡುತ್ತವೆ, ತಮ್ಮ ದೈವಿಕ ಕರೆಯನ್ನು ಜೀವಿಸಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬರಿಗೂ ಪ್ರತಿಕೂಲತೆಯನ್ನು ಎದುರಿಸಲು ಭರವಸೆ ಮತ್ತು ಸ್ಫೂರ್ತಿಯನ್ನು ನೀಡುತ್ತವೆ.

[ಇದು ಪ್ರೋಕ್ಲೌಡೆ ಮರಿಯೋಟಿನಿ ಅವರ Jeremiah’s Fourth Confession: Jeremiah 17:14-18 ಎಂಬ ಪ್ರಬಂಧದ ಕನ್ನಡ ಭಾಷಾಂತರಇದರ ಮೂಲ ಬರವಣಿಗೆಯನ್ನು https://claudemariottini.com/2025/06/09/jeremiahs-fourth-confession/ ಇದರಲ್ಲಿ ಕಾಣಬಹುದು.]


Comments

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23