ಯೆರೆಮಿಯನ ಮೂರನೆಯ ವಿಖ್ಯಾಪನೆ - 15:10-21

ಪಠ್ಯಭಾಗ: ಯೆರೆಮಿಯ 15:10-21 

10 “ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ. 

11 ಸರ್ವೇಶ್ವರಾ, ನಾನು ನಿಮಗೆ ಶ್ರೇಷ್ಠವಾದ ಸೇವೆಸಲ್ಲಿಸದೆ ಹೋಗಿದ್ದರೆ, ನನ್ನ ಶತ್ರುಗಳು ಕಷ್ಟಸಂಕಟಗಳಲ್ಲಿ ಸಿಕ್ಕಿಬಿದ್ದ ಕಾಲದಲ್ಲಿ ಅವರ ಪರವಾಗಿ ನಿನಗೆ ಮೊರೆಯಿಡದೆ ಇದ್ದಿದ್ದರೆ ನನಗೆ ಶಾಪ ತಗುಲಲಿ!

12 ಕಬ್ಬಿಣವನ್ನು ಅದೂ ಉತ್ತರದಿಂದ ಬಂದ ಕಬ್ಬಿಣವನ್ನು ಹಾಗು ಕಂಚನ್ನು ಬಗ್ಗಿಸಲು ಯಾರಿಂದಾದೀತು?”

13 ಸರ್ವೇಶ್ವರ: “ನಾಡಿನಾದ್ಯಂತ ನನ್ನ ಜನರು ಮಾಡಿದ ಎಲ್ಲ ಪಾಪಗಳ ನಿಮಿತ್ತ ಅವರ ಸೊತ್ತು ಸಂಪತ್ತನ್ನು ಪುಕ್ಕಟೆಯಾಗಿ ಕೊಳ್ಳೆಗಾರರ ಪಾಲಾಗಿಸುವೆನು.

14 ಅಪರಿಚಿತ ನಾಡಿಗೆ ಅವರನ್ನು ಸಾಗಿಸುವೆನು. ಅಲ್ಲಿ ಶತ್ರುಗಳಿಗೇ ಊಳಿಗದವರನ್ನಾಗಿಸುವೆನು. ಏಕೆಂದರೆ ನನ್ನ ಕೋಪಾಗ್ನಿ ಉರಿಯುತ್ತಿದೆ. ಅದು ನಿಮ್ಮನ್ನು ಸುಟ್ಟುಹಾಕುವುದು.”

15 ಅದಕ್ಕೆ ನಾನು: “ಸರ್ವೇಶ್ವರಾ, ನೀವು ಎಲ್ಲವನ್ನು ಬಲ್ಲವರು. ನನ್ನನ್ನು ನೆನಪಿಗೆ ತಂದುಕೊಂಡು ನೆರವು ನೀಡಿ. ನನಗಾಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸಿರಿ. ಅವರಿಗೆ ಹೆಚ್ಚು ತಾಳ್ಮೆ ತೋರಿ ನನ್ನನ್ನು ನಿರ್ಮೂಲಮಾಡಬೇಡಿ. ನಿಮ್ಮ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆ ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿ.

16 ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ?

17 ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ.

18 ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?”

19 ಅದಕ್ಕೆ ಸರ್ವೇಶ್ವರ: “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ.

20 ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು.

21 ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.”

ವಿಖ್ಯಾಪನೆಯ ಪರಿಚಯ

ಯೆರೆಮಿಯನ ಮೂರನೆಯ ವಿಖ್ಯಾಪನೆ ಯೆರೆಮಿಯನ ಅತ್ಯಂತ ವೈಯಕ್ತಿಕ ಮತ್ತು ಹೃದಯಸ್ಪರ್ಶಿಯಾದ ದುಃಖವನ್ನು ಹಾಗೂ ಅವನ ದೈವಿಕ ಕರೆಯೊಂದಿಗಿನ ಹೋರಾಟವನ್ನು ತೋರುವ ಒಂದು ಸುಂದರ ದೃಷ್ಟಾಂತ. ಈ ವಿಖ್ಯಾಪನೆ ಅವನ ವೈಯಕ್ತಿಕ ಪ್ರಲಾಪವನ್ನು ಅಲ್ಲದೇ, ಪ್ರವಾದಿಯ ಸೇವೆಯ ಹೋರಾಟಗಳ ಅಂತರಂಗವನ್ನು ನಮಗೆ ತೋರುತ್ತದೆ.

ದೇವರ ಸೇವೆಯಲ್ಲಿ ಯೆರೆಮಿಯ ದೇವರ ಸಂದೇಶವನ್ನು ಸಾರುವಾಗ ತನ್ನ ಸಮಕಾಲೀನರಿಂದ ಅಪಾರ ವಿರೋಧವನ್ನು ಎದುರಿಸಿದನು. ಈ ವಿಖ್ಯಾಪನೆ ಅವನ ಆಂತರಿಕ ಪ್ರಕ್ಷುಬ್ಧತೆ ಮತ್ತು ಅನುಮಾನದ ಕ್ಷಣಗಳನ್ನು ಕಾಣಿಸುತ್ತದೆ. ದೇವರು ಆಯ್ಕೆ ಮಾಡಿದ ಸಂದೇಶವಾಹಕನಾಗಿ ತಾನು ಎದುರಿಸುತ್ತಿರುವ ಕಷ್ಟ ಮತ್ತು ವಿರೋಧದ ಬಗ್ಗೆ ಯೆರೆಮಿಯ ವಿಷಾದಿಸುತ್ತಾನೆ. ಪ್ರತಿಕೂಲ ವಾತಾವರಣದಲ್ಲಿ ದೇವರಿಗೆ ನಂಬಿಕೆಯಿಂದ ಸೇವೆಮಾಡುವಾಗ ಪ್ರವಾದಿಯ ಸೇವಾಕಾರ್ಯದೊಂದಿಗೆ ಬರುವ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಪ್ರಕ್ಷುಬ್ಧತೆಯ ಬಗ್ಗೆ ಒಳನೋಟವನ್ನು ನಮಗೆ ಈ ವಿಖ್ಯಾಪನೆ ಒದಗಿಸುತ್ತದೆ.

ಸಂಕಟ ಮತ್ತು ದೇವರ ಮೇಲಿನ ಅವಲಂಬನೆಯ ಅವನ ಪ್ರಾಮಾಣಿಕ ಅಭಿವ್ಯಕ್ತಿಯ ಮೂಲಕ, ಯೆರೆಮಿಯನ ವಿಖ್ಯಾಪನೆ ವಿಶ್ವಾಸಕ್ಕಾಗಿ ತೆರಬೇಕಾಗುವ ವೆಚ್ಚವನ್ನು ನಮಗೆ ಬಹಿರಂಗಪಡಿಸುತ್ತದೆ ಹಾಗೂ ಯೆರೆಮಿಯನ ಕರೆಯ ನವೀಕರಣವನ್ನು ಮತ್ತು ದೇವರು ನೀಡುವ ಭರವಸೆಯನ್ನು ಅದು ಸ್ಪಷ್ಟವಾಗಿ ತೋರಿಸುತ್ತದೆ. ಸೇವೆಗಾಗಿ ದೇವರ ಕರೆಯನ್ನು ಪೂರೈಸುವಲ್ಲಿ ಸವಾಲುಗಳನ್ನು ಎದುರಿಸುತ್ತಿರುವವರನ್ನು ಈ ವಿಖ್ಯಾಪನೆ ಸಂತೈಸುತ್ತದೆ.

 ಐತಿಹಾಸಿಕ ಹಿನ್ನೆಲೆ

ಯೆರೆಮಿಯ, ಜೂಡಾದ ಇತಿಹಾಸದಲ್ಲಿ ಪ್ರಕ್ಷುಬ್ಧ ಅವಧಿಯಲ್ಲಿ ಪ್ರವಾದಿಸಿದನು. ಅವನ ಸೇವೆ, ರಾಜ ಯೋಷೀಯನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ಕ್ರಿ. ಪೂ. 7ನೇ ಶತಮಾನದ ಅಂತ್ಯದಲ್ಲಿ ರಾಜ ಯೋಷೀಯ ಧಾರ್ಮಿಕ ಸುಧಾರಣೆಗಳನ್ನು ಮಾಡಿದನು. ಯೋಷೀಯನ ಮರಣದ ನಂತರ, ಯೆಹೋಯಾಕೀಮ್ ಜೂಡಾದಲ್ಲಿ ರಾಜನಾದನು. ಯೆಹೋಯಾಕೀಮ್ ತನ್ನ ತಂದೆ ನಿರ್ಮೂಲ ಮಾಡಿದ್ದ ಎಲ್ಲಾ ಅನ್ಯನಾಡಿನ ಪದ್ಧತಿಗಳನ್ನು ಮರಳಿ ತಂದನು.

ಜನರು ಮಾಡುತ್ತಿದ್ದ  ನಿರಂತರ ವಿಗ್ರಹಾರಾಧನೆ, ಸಾಮಾಜಿಕ ಅನ್ಯಾಯ ಮತ್ತು ಒಡಂಬಡಿಕೆಗೆ ವಿಶ್ವಾಸದ್ರೋಹದಿಂದಾಗಿ ಬರಲಿರುವ ನ್ಯಾಯತೀರ್ಪಿನ ಬಗ್ಗೆ ಯೆರೆಮಿಯನ ಸಂದೇಶಗಳು ಅವರನ್ನು ಎಚ್ಚರಿಸುತ್ತಿದ್ದವು. ಈ ಎಚ್ಚರಿಕೆಗಳು ಯೆರೆಮಿಯನನ್ನು ಜನರು ಹಗೆಮಾಡುವಂತೆ ಮಾಡಿದವು. ʼಜೂಡಾ ಬ್ಯಾಬಿಲೋನಿನ ದಾಳಿಗೆ ನಿರ್ನಾಮವಾಗುತ್ತದೆʼ ಎಂದು ಭವಿಷ್ಯ ನುಡಿದಿದ್ದಕ್ಕಾಗಿ ಅನೇಕರು ಅವನನ್ನು ದೇಶದ್ರೋಹಿ ಎಂಬಂತೆ ನೋಡಿದರು ಮತ್ತು ಅವನ ಭವಿಷ್ಯವಾಣಿಗಳು ತಿರಸ್ಕಾರ, ಸೆರೆವಾಸ ಮತ್ತು ಜೀವಬೆದರಿಕೆಗಳನ್ನು ತಂದೊಡ್ಡಿದವು.

ಮೂರನೆಯ ಈ ವಿಖ್ಯಾಪನೆಯನ್ನು ಸಾಮಾಜಿಕ ನಿರಾಕರಣೆ ಮತ್ತು ಜನಪ್ರಿಯವಲ್ಲದ ಆದರೆ ಅಗತ್ಯವಾದ ದೈವಿಕ ಸತ್ಯವನ್ನು ಘೋಷಿಸುವ ಭಾರದ ಹಿನ್ನೆಲೆಯಲ್ಲಿ ನಾವು ಅರ್ಥಮಾಡಿಕೊಳ್ಳಬೇಕು. ಜೂಡಾದ ನಿರಂತರ ಅವಿಧೇಯತೆಯಿಂದಾಗಿ ಬರಲಿರುವ ತೀರ್ಪಿನ ಬಗ್ಗೆ ಯೆರೆಮಿಯನ ಸಂದೇಶ ಅವನನ್ನು ತನ್ನ ಜನರಲ್ಲಿ ತೀವ್ರ ಅಪ್ರಿಯನನ್ನಾಗಿ ಮಾಡಿತು. ಅವನು ತಿರಸ್ಕಾರ, ಕಿರುಕುಳ ಮತ್ತು ಅವನ ಜೀವಕ್ಕೆ ಬೆದರಿಕೆಗಳನ್ನು ಸಹಿಸಿಕೊಂಡನು, ಇದು ಈ ವಿಖ್ಯಾಪನೆಯಲ್ಲಿ ವ್ಯಕ್ತಪಡಿಸಿರುವ ಅವನ ಆಳವಾದ ವೈಯಕ್ತಿಕ ದುಃಖದಲ್ಲಿ ಕಾಣಸಿಗುತ್ತದೆ.

 ಯೆರೆಮಿಯನ ವಿಖ್ಯಾಪನೆ
ಯೆರೆಮಿಯನ ಹತಾಶೆ

ವ 10: “ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ.” (ಪವಿತ್ರ ಬೈಬಲ್)

ವ 10: “ಅಯ್ಯೋ ನಾನು, ಅಮ್ಮಾ! ನೀನು ನನ್ನನ್ನು ಈ ನಾಡಿಗೆ ಕಲಹ ಮತ್ತು ವಿವಾದದ ವ್ಯಕ್ತಿಯಾಗಿ ಹೆತ್ತಿದ್ದಿಯೇ! ನಾನು ಸಾಲ ಕೊಟ್ಟಿಲ್ಲ, ಸಾಲ ಪಡೆದಿಲ್ಲ, ಆದರೂ ಅವರೆಲ್ಲರೂ ನನ್ನನ್ನು ಶಪಿಸುತ್ತಾರೆ.” (ESV ಆವೃತ್ತಿಯಿಂದ)

ತನ್ನ ಜನನದ ಬಗ್ಗೆ ದುಃಖಿಸುವ ಮೂಲಕ ಯೆರೆಮಿಯ ಈ ಭಾಗವನ್ನು ಪ್ರಾರಂಭಿಸುತ್ತಾನೆ. ಈ ಮಾತುಗಳು ಯೆರೆಮಿಯನ ಒಂಟಿತನದ ಭಾವನೆಯನ್ನು ನಮಗೆ ತಿಳಿಸುತ್ತದೆ. ಯೆರೆಮಿಯ ವಿವಾದದ ವ್ಯಕ್ತಿ, ಅಂದರೆ, ಅವನು ಸಾರ್ವಜನಿಕವಾಗಿ ಜನರೊಂದಿಗೆ ವಾಗ್ವಾದ ಮಾಡುತ್ತಾನೆ, ಇತರರಿಗಿಂತ ಭಿನ್ನವಾಗಿದ್ದಾನೆ. ದ್ವೇಷವನ್ನು ಹುಟ್ಟುಹಾಕುವ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿಲ್ಲ, ಆದರೆ ದೇವರ ಸಂದೇಶವನ್ನು ನುಡಿದಿದ್ದಕ್ಕಾಗಿ ಅವನನ್ನು ದ್ವೇಷಿಸಲಾಗುತ್ತದೆ.

ತನ್ನ ಜನನದ ಬಗ್ಗೆ ದುಃಖದಿಂದ ನುಡಿಯುವ ಮೂಲಕ, ಯೆರೆಮಿಯ ತನ್ನ ಪ್ರವಾದಿತನದ ಭಾರವನ್ನು ವ್ಯಕ್ತಪಡಿಸುತ್ತಾನೆ. ಅವನ ಇಡೀ ಅಸ್ತಿತ್ವ ಸಂಘರ್ಷ ಮತ್ತು ತಿರಸ್ಕಾರದಿಂದ ಕೂಡಿದೆ ಎಂದು ಭಾವಿಸುತ್ತಾನೆ; ಅವನ ಮುಗ್ಧತೆಯ ಹೊರತಾಗಿಯೂ ಅವನನ್ನು ಹಗೆಮಾಡಲಾಗುತ್ತದೆ.

ಸರ್ವೇಶ್ವರನ ಪ್ರತಿಕ್ರಿಯೆ

ವ 11: ಸರ್ವೇಶ್ವರಾ, ನಾನು ನಿಮಗೆ ಶ್ರೇಷ್ಠವಾದ ಸೇವೆಸಲ್ಲಿಸದೆ ಹೋಗಿದ್ದರೆ, ನನ್ನ ಶತ್ರುಗಳು ಕಷ್ಟಸಂಕಟಗಳಲ್ಲಿ ಸಿಕ್ಕಿಬಿದ್ದ ಕಾಲದಲ್ಲಿ ಅವರ ಪರವಾಗಿ ನಿನಗೆ ಮೊರೆಯಿಡದೆ ಇದ್ದಿದ್ದರೆ ನನಗೆ ಶಾಪ ತಗುಲಲಿ! (ಪವಿತ್ರ ಬೈಬಲ್)

ವ 11: “ಸರ್ವೇಶ್ವರ ಹೀಗೆನ್ನುತ್ತಾನೆ: ನಿನ್ನ ಒಳಿತಿಗಾಗಿಯೇ ನಿನ್ನನ್ನು ಸ್ವತಂತ್ರನಾಗಿಸಿದ್ದೇನೆ; ನಿನ್ನ ಶತ್ರುಗಳು ಕಷ್ಟ ಮತ್ತು ಸಂಕಟದ ಕಾಲದಲ್ಲಿ ನಿನಗೆ ಮೊರೆಯಿಡುವಂತೆ ಖಂಡಿತವಾಗಿಯೂ ಮಾಡುತ್ತೇನೆ.” (NAU ಆವೃತ್ತಿಯಿಂದ)

ಈ ವಾಕ್ಯದಲ್ಲಿ, ದೇವರು ಯೆರೆಮಿಯನಿಗೆ ಹಿಂದಿನ ಅನೇಕ ತೊಂದರೆಗಳಿಂದ ಅವನನ್ನು ಬಿಡುಗಡೆ ಮಾಡಿದ್ದೇನೆ ಮತ್ತು ಮತ್ತೆ ಹಾಗೆಯೇ ಮಾಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಈ ವಾಕ್ಯದ ಭಾಷಾಂತರ ಬಹಳ ಸಂದಿಗ್ಧ. ಇಲ್ಲಿ ಬರುವ ಶೆರಾಟಿಕ ಎಂಬ ಹೀಬ್ರೂ ಪದವನ್ನು ನಾನಾರೀತಿಯಲ್ಲಿ ಹೇಳಬಹುದು: ʼನಾನು ನಿನ್ನನ್ನು ಖಂಡಿತವಾಗಿ ಕಳುಹಿಸಿಕೊಡುತ್ತೇನೆʼ ಅಥವಾ ʼನನ್ನ ಶತ್ರುಗಳಿಗಾಗಿ ವಿನಂತಿಸಿದ್ದೇನೆʼ ಅಥವಾ ʼನನ್ನ ಶತ್ರುಗಳು ನನ್ನಲ್ಲಿ ವಿನಂತಿಸಿದ್ದಾರೆʼ ಅಥವಾ ʼನಿನ್ನ ಶತ್ರುಗಳನ್ನು ನಿನ್ನಲ್ಲಿ ವಿನಂತಿಸುವಂತೆ ಮಾಡುತ್ತೇನೆ.ʼ “ನನ್ನ ಶತ್ರುಗಳು ಕಷ್ಟಸಂಕಟಗಳಲ್ಲಿ ಸಿಕ್ಕಿಬಿದ್ದ ಕಾಲದಲ್ಲಿ ಅವರ ಪರವಾಗಿ ನಿನಗೆ ಮೊರೆಯಿಡದೆ ಇದ್ದಿದ್ದರೆ” (ಪವಿತ್ರ ಬೈಬಲ್) ಎಂಬ ಅನುವಾದ ದಾರಿತಪ್ಪಿಸುವಂತಿದೆ, ಏಕೆಂದರೆ ಅದು, ಶತ್ರುಗಳು ಕಷ್ಟಸಂಕಟಗಳಲ್ಲಿ ಸಿಕ್ಕಿಬಿದ್ದ ಕಾಲದಲ್ಲಿ ಅವರ ಪರವಾಗಿ ಪ್ರವಾದಿ ಮೊರೆಯಿಟ್ಟನು ಎಂದು ಸೂಚಿಸುತ್ತದೆ. ಅಲ್ಲದೆ, ಇಲ್ಲಿ ಸರ್ವೇಶ್ವರ ಯಾರಿಗೆ ಹೇಳುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆ ಇದೆ: ಯೆರೆಮಿಯನಿಗೋ ಅಥವಾ ಜೆರುಸಲೇಮನ್ನು ವ್ಯಕ್ತಿಯಂತೆ ಕಂಡೋ, ಏಕೆಂದರೆ, ವಚನ 12-14ನ್ನು ಜೆರುಸಲೇಮಿಗೆ ಹೇಳಿದ್ದಾಗಿದೆ.

ವ 12: “ಕಬ್ಬಿಣವನ್ನು ಅದೂ ಉತ್ತರದಿಂದ ಬಂದ ಕಬ್ಬಿಣವನ್ನು ಹಾಗು ಕಂಚನ್ನು ಬಗ್ಗಿಸಲು ಯಾರಿಂದಾದೀತು?” ಎಂಬ ಪ್ರಶ್ನೆ ಜೂಡಾ ಮತ್ತು ಯೆರೆಮಿಯನನ್ನು ಉಲ್ಲೇಖಿಸುತ್ತದೆ. ದಂಗೆಕೋರ ಜೂಡಾ ಕಬ್ಬಿಣ ಮತ್ತು ಕಂಚಿನಂತಿದೆ.

ವ 13: “ಅವರ ಸೊತ್ತು ಸಂಪತ್ತನ್ನು ಪುಕ್ಕಟೆಯಾಗಿ ಕೊಳ್ಳೆಗಾರರ ಪಾಲಾಗಿಸುವೆನು.” ಜೂಡಾದ ಪಾಪಗಳ ನಿಮಿತ್ತ ಅದರ ಸಂಪತ್ತನ್ನು ಕೊಳ್ಳೆಯಾಗಿ ಶತ್ರುಗಳಿಗೆ ಒಪ್ಪಿಸುತ್ತಿರುವರು ಸರ್ವೇಶ್ವರ.

ವ 14: “ಅಪರಿಚಿತ ನಾಡಿಗೆ ಅವರನ್ನು ಸಾಗಿಸುವೆನು. ಅಲ್ಲಿ ಶತ್ರುಗಳಿಗೇ ಊಳಿಗದವರನ್ನಾಗಿಸುವೆನು.” 

ಜೂಡಾವನ್ನು ಬ್ಯಾಬಿಲೋನಿಗೆ ಗಡಿಪಾರು ಮಾಡಲಾಗುವುದು, ಅಲ್ಲಿ ಅವರು 70 ವರ್ಷಗಳ ಕಾಲ ಉಳಿಯುತ್ತಾರೆ. ಜೂಡಾದ ಸನ್ನಿಹಿತವಾದ ತೀರ್ಪಿನ ಘೋಷಣೆ ದೇವರ ನ್ಯಾಯ ಮತ್ತು ಯೆರೆಮಿಯನ ವೈಯಕ್ತಿಕ ಹೋರಾಟಗಳ ನಡುವಿನ ಉದ್ವಿಗ್ನತೆಯನ್ನು ಈ ವಾಕ್ಯ ವಿವರಿಸುತ್ತದೆ.

ಯೆರೆಮೀಯನ ಪ್ರಾರ್ಥನೆ

ವ 15: “ಸರ್ವೇಶ್ವರಾ, ನೀವು ಎಲ್ಲವನ್ನು ಬಲ್ಲವರು. ನನ್ನನ್ನು ನೆನಪಿಗೆ ತಂದುಕೊಂಡು ನೆರವುನೀಡಿ. ನನಗಾಗಿ ನನ್ನ ಶತ್ರುಗಳಿಗೆ ಮುಯ್ಯಿತೀರಿಸಿರಿ. ಅವರಿಗೆ ಹೆಚ್ಚು ತಾಳ್ಮೆತೋರಿ ನನ್ನನ್ನು ನಿರ್ಮೂಲಮಾಡಬೇಡಿ. ನಿಮ್ಮ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆ ಎಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿ.”

ಸರ್ವೇಶ್ವರ ತನ್ನನ್ನು ಚೆನ್ನಾಗಿ ಬಲ್ಲವರೆಂದು ಘೋಷಿಸುವ ಮೂಲಕ ಯೆರೆಮಿಯ ತನ್ನ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ. ನಂತರ ಅವನು ದೇವರನ್ನು ಸಮರ್ಥನೆಗಾಗಿ ಮತ್ತು ತನ್ನ ಶತ್ರುಗಳನ್ನು ಶಿಕ್ಷಿಸಲು ಬೇಡಿಕೊಳ್ಳುತ್ತಾನೆ. ಯೆರೆಮಿಯ ಸರ್ವೇಶ್ವರನ ಮಾತುಗಳನ್ನು, ನ್ಯಾಯತೀರ್ಪಿನ ನುಡಿಗಳನ್ನು ಘೋಷಿಸುವ ಪ್ರವಾದಿಯಾಗಿರುವುದರಿಂದ ಅವನಿಗೆ ಕಷ್ಟಗಳು ಎದುರಾಗುತ್ತಿವೆ ಎಂದು ಹೇಳುತ್ತಾನೆ.

ವ 16: ನಿಮ್ಮ ವಚನಗಳು ನನಗೆ ದೊರೆತವು. ಅವುಗಳನ್ನು ಹಾಗೆಯೆ ನುಂಗಿಬಿಟ್ಟೆನು. ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು. ಸರ್ವಶಕ್ತರಾದ ದೇವರೇ, ಸರ್ವೇಶ್ವರಾ, ನಾನು ನಿಮ್ಮ ನಾಮಧಾರಿಯಲ್ಲವೆ?

“ನಿಮ್ಮ ವಚನಗಳು ನನಗೆ ದೊರೆತವು” ಎಂಬ ಹೇಳಿಕೆ ದೇವಾಲಯದ ನವೀಕರಣದ ಸಮಯದಲ್ಲಿ ಕಂಡುಬಂದ ಧರ್ಮಶಾಸ್ತ್ರದ ಗ್ರಂಥವನ್ನು ಸೂಚಿಸುತ್ತದೆ (2 ಅರಸುಗಳು 22:8). ಈ ಗ್ರಂಥ, ಯೋಷೀಯನ ಸುಧಾರಣೆಗಳನ್ನು ಪ್ರೇರೇಪಿಸಿದ ಧರ್ಮೋಪದೇಶಕಾಂಡದ ಪ್ರತಿಯಾಗಿತ್ತು.

ಯೆರೆಮಿಯ ಆ ವಚನಗಳನ್ನು ತಿನ್ನುವುದು ಪ್ರವಾದಿಯಾಗಿ ಅವನ ಕರೆಯನ್ನು ಸೂಚಿಸುತ್ತದೆ, “ಈಗ, ನಾನು "ನನ್ನ ಮಾತುಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ" (ಯೆರೆಮೀಯ 1:9) ಮತ್ತು “ಜೂಡಾದಲ್ಲಿ ದೇವರ ವಾಕ್ಯವನ್ನು ಘೋಷಿಸಲು” ದೇವರ ಇಚ್ಛೆಯಾಗಿತ್ತು. ಯೆರೆಮೀಯ ಅವರ ಕರೆಯನ್ನು ಸಂತೋಷದಿಂದ ಸ್ವೀಕರಿಸಿದನು: "ನಿಮ್ಮ ನುಡಿಗಳು ನನಗೆ ಹರ್ಷವನ್ನೂ ಹೃದಯಾನಂದವನ್ನೂ ತಂದವು." ಆದಾಗ್ಯೂ, ಅವನನ್ನು ತಿರಸ್ಕರಿಸಿದಾಗ ಮತ್ತು ಟೀಕಿಸಿದಾಗ, ಯೆರೆಮಿಯನ ಸಂತೋಷ ನೋವು ಮತ್ತು ಖಿನ್ನತೆಯಾಗಿ ಮಾರ್ಪಟ್ಟಿತು.

ವ 17: “ವಿನೋದಗಾರರ ಕೂಟದಲ್ಲಿ ಭಾಗವಹಿಸಿ ನಾನು ಉಲ್ಲಾಸಪಟ್ಟವನಲ್ಲ. ನಿಮ್ಮ ಕೈ ನನ್ನ ಮೇಲೆ ಇದ್ದುದರಿಂದ ನಾನು ಒಬ್ಬಂಟಿಗನಾದೆ. ಕೋಪಾವೇಶದಿಂದ ತುಂಬಿದವನಾದೆ.”

ನಾನು ಒಬ್ಬಂಟಿಗನಾದೆ: ದೇವರ ಕರೆ ಮತ್ತು ತೀರ್ಪಿನ ಸಂದೇಶ ಯೆರೆಮಿಯನನ್ನು ಅವನ ಸ್ನೇಹಿತರು ಮತ್ತು ಕುಟುಂಬದಿಂದ ಪ್ರತ್ಯೇಕಿಸಿತು ಹಾಗೂ ಈ ಸಂದೇಶವನ್ನು ಸ್ವೀಕರಿಸದೇ ಇರುವವರ ಮೇಲೆ ಕೋಪಾವೇಶದಿಂದ ತುಂಬಿದವನಾದ.

ವ 18: “ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?”

ಯೆರೆಮಿಯನಿಗೆ ನೋವುಗಳಿವೆ, ಏಕೆಂದರೆ ಅವನು ದೇವರಿಂದ ಪಡೆದ ಮಾತುಗಳು ಮೊದಲು ಸಿಹಿಯಾಗಿದ್ದವು, ಆದರೆ ಅವು ಜೀರ್ಣವಾದ ನಂತರ ಕಹಿಯಾದವು, ಅಂದರೆ ಯೆರೆಮಿಯ ಜೂಡಾದ ಜನರಿಗೆ ಘೋಷಿಸಬೇಕಾದ ಸಂದೇಶವನ್ನು ಅರ್ಥಮಾಡಿಕೊಂಡ ನಂತರ ಅವನಿಗೆ ತನ್ನ ಪ್ರವಾದಿತನದ ನಿಜ ಅರ್ಥ ತಿಳಿಯಿತು.

ಯೆರೆಮಿಯ ದೇವರನ್ನು ದೂಷಿಸುತ್ತಾನೆ: “ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ.” ಯೆರೆಮಿಯ ದೇವರಿಂದ ದ್ರೋಹ ಹೋಗಿದ್ದಾನೆಂದು ಭಾವಿಸುತ್ತಾನೆ. ದೇವರು ತನ್ನನ್ನು ರಕ್ಷಿಸುವ ಮತ್ತು ಕಾಪಾಡುವ ಭರವಸೆ ನೀಡಿದ್ದರಿಂದ ಅವರನ್ನು ನಂಬಿದ್ದ, ಆದರೆ ಈಗ ಅವನ ಶತ್ರುಗಳು ಅವನ ವಿರುದ್ಧ ಮೇಲುಗೈ ಸಾಧಿಸುತ್ತಿದ್ದಾರೆ.

ಸರ್ವೇಶ್ವರನ ಪ್ರತಿಕ್ರಿಯೆ

ವ 19: “ಅದಕ್ಕೆ ಸರ್ವೇಶ್ವರ: “ನೀನು ನನಗೆ ಅಭಿಮುಖನಾಗಿ ಹಿಂದಿರುಗಿ ಬಂದರೆ ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು. ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ ನೀನು ನನ್ನ ಬಾಯಂತಿರುವೆ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ.”

ʼಹಿಂದಿರುಗಿ ಬಂದರೆʼ ʼಶೂಬ್‌ʼ ಎಂಬ ಹೀಬ್ರೂ ಭಾಷೆಯ ಪದದ ಅರ್ಥ “ಹಿಂದೆ ಬಾ, ಹಿಂದೆ ನೋಡು, ಹಿಂದಿರುಗು ಅಥವಾ ಪಶ್ಚಾತ್ತಾಪಪಡು.” ದೇವರು ಯೆರೆಮಿಯನನ್ನು ಅವರ ವಿರುದ್ಧ ಹೊರಿಸಿದ ಆರೋಪಕ್ಕೆ ಪಶ್ಚಾತ್ತಾಪಪಡುವಂತೆ ಕರೆಯುತ್ತಿದ್ದಾರೆ; “ಮರಳಿ ನಿನ್ನನ್ನು ನನ್ನ ಸೇವೆಗೆ ಸೇರಿಸಿಕೊಳ್ಳುವೆನು.” ಯೆರೆಮಿಯ ಮತ್ತೆ ಪ್ರವಾದಿಯಾಗಿ ದೇವರ ಮುಂದೆ ನಿಲ್ಲುವ ಮೊದಲು, ಅವನು ದೇವರ ಬಗ್ಗೆ ಹೇಳಿದ್ದಕ್ಕೆ ಪಶ್ಚಾತ್ತಾಪಪಡಬೇಕಾಗಿತ್ತು.

“ತುಚ್ಛವಾದುದನ್ನು ತೊರೆದು ಅಮೂಲ್ಯವಾದುದನ್ನು ಉಚ್ಚರಿಸುವೆಯಾದರೆ:” ಏಕೆಂದರೆ, ಯೆರೆಮಿಯ ಅರ್ಥಹೀನವಾದ ಮಾತುಗಳನ್ನು ಆಡಿದ್ದನು. ದೇವರ ಬಗ್ಗೆ ಯೆರೆಮಿಯ ಹೇಳಿದ್ದು ನಿಜವಲ್ಲದ್ದು , ಈ ಕಾರಣ ಅವು ನಿಷ್ಪ್ರಯೋಜಕವಾಗಿದ್ದವು.

“ನೀನು ನನ್ನ ಬಾಯಂತಿರುವೆ:” ಯೆರೆಮಿಯ ಪಶ್ಚಾತ್ತಾಪಪಟ್ಟರೆ ಅವನು ಮಾತನಾಡುವುದು ದೇವರ ಮಾತುಗಳಾಗುತ್ತವೆ, ಅವನು ನಿಷ್ಪ್ರಯೋಜಕವಾದ ಮಾತುಗಳನ್ನು ಆಡುತ್ತಿದ್ದರೆ ದೇವರ ಮಾತುಗಳನ್ನು ಆಡಲು ಸಾಧ್ಯವಾಗದು.

“ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು. ನೀನು ಅವರ ಕಡೆಗೆ ತಿರುಗದಿರುವೆ:” ಯೆರೆಮಿಯ ತನ್ನ ಶತ್ರುಗಳನ್ನು ಜಯಿಸಲು, ಅವನು ದೇವರ ಮಾತುಗಳಿಗೆ ಸತ್ಯಸಂಧನಾಗಿರಬೇಕಾಗಿತ್ತು.

ವ 20: “ನಾನು ನಿನ್ನನ್ನು ಆ ಜನರಿಗೆ ದುರ್ಗಮವಾದ ಕಂಚಿನ ಪೌಳಿಗೋಡೆಯನ್ನಾಗಿಸುವೆನು. ನಿನಗೆ ವಿರುದ್ಧ ಅವರು ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗದು. ನಿನ್ನ ನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು.

 “ನಾನು ನಿನ್ನನ್ನು ಈ ಜನರಿಗೆ ಕಂಚಿನ ಕೋಟೆಯ ಗೋಡೆಯನ್ನಾಗಿ ಮಾಡುತ್ತೇನೆ:” ಯೆರೆಮಿಯ ಪಶ್ಚಾತ್ತಾಪಪಟ್ಟು ದೇವರ ಬಳಿಗೆ ಹಿಂತಿರುಗಿದರೆ, ದೇವರು ಅವನನ್ನು "ಕಂಚಿನ ಕೋಟೆಯ ಗೋಡೆ"ಯನ್ನಾಗಿ ಮಾಡುತ್ತಾರೆ, ಅಲ್ಲಿ ಅವನ ಶತ್ರುಗಳು ಅವನ ಬಳಿಗೆ ಬರಲೂ ಸಾಧ್ಯವಾಗುವುದಿಲ್ಲ.

 21: “ಇದು ಸರ್ವೇಶ್ವರನಾದ ನನ್ನ ಮಾತು. ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಕ್ರೂರಿಗಳ ಕೈಯಿಂದ ರಕ್ಷಿಸುವೆನು.”

ದೇವರು ಯೆರೆಮಿಯನನ್ನು ಅವನ ಶತ್ರುಗಳಿಂದ, ಅವನಿಗೆ ಮರಣದಂಡನೆ ನೀಡಬೇಕೆಂದು ಬಯಸಿದವರಿಂದ ರಕ್ಷಿಸುವ ಭರವಸೆ ನೀಡುತ್ತಾರೆ.

ಇಂದಿನ ಸುವಾರ್ತಾ ಪ್ರಸಾರ ಕಾರ್ಯಾಭಾರಿಗಳಿಗೆ:

  • ವಿರೋಧದ ನಡುವೆ ವಿಶ್ವಾಸವನ್ನು ಕಾಯ್ದುಕೊಳ್ಳುವುದು: ಸುವಾರ್ತಾ ಪ್ರಸಾರ ಕಾರ್ಯಾಭಾರಿಗಳು ಬೈಬಲ್ ಸಂದೇಶವನ್ನು ಮಾತನಾಡಿದುದಕ್ಕಾಗಿ ನಿರಾಕರಣೆ ಮತ್ತು ಹಗೆತನವನ್ನು ಎದುರಿಸಬಹುದು. ವಿರೋಧಗಳು ಪ್ರವಾದಿಯ ಸೇವಾಕಾರ್ಯದ ಭಾಗವಾಗಿದೆ ಎಂದು ಯೆರೆಮಿಯನ ಅನುಭವ ನಮಗೆ ಕಲಿಸುತ್ತದೆ.
  • ದೇವರೊಂದಿಗೆ ಪ್ರಾಮಾಣಿಕ ಸಂವಾದ: ದೇವರ ಮುಂದೆ ಯೆರೆಮಿಯನ ಪರಿಶುದ್ಧ ಪ್ರಾಮಾಣಿಕತೆ ನಿರುತ್ಸಾಹದಿಂದ ಹೋರಾಡುತ್ತಿರುವ ಸುವಾರ್ತಾ ಪ್ರಸಾರ ಕಾರ್ಯಾಭಾರಿಗಳಿಗೆ ಮಾದರಿಯಾಗಿ ಕಾಣುತ್ತದೆ. ಪ್ರಾರ್ಥನೆಯಲ್ಲಿ ದೇವರ ಮುಂದೆ ವೈಯಕ್ತಿಕ ನೋವು ಮತ್ತು ಅನುಮಾನಗಳನ್ನು ತರುವುದು ತಪ್ಪೇನಿಲ್ಲ,  ಸ್ವೀಕಾರಾರ್ಹ.
  • ದೇವರ ಶಕ್ತಿಯ ಮೇಲೆ ಅವಲಂಬನೆ: ದೇವರು ಯೆರೆಮಿಯನನ್ನು "ದುರ್ಗಮವಾದ ಕಂಚಿನ ಪೌಳಿಗೋಡೆ"ಯನ್ನಾಗಿ ಮಾಡುತ್ತಾರೆ ಎಂಬ ಭರವಸೆ ಸುವಾರ್ತಾ ಪ್ರಸಾರ ಕಾರ್ಯಾಭಾರಿಗಳನ್ನು ದೇವರ ಶಕ್ತಿ ಬೆಂಬಲಿಸುತ್ತದೆ, ಮಾನವರ ಅನುಮೋದನೆಯಲ್ಲ ಎಂಬುದನ್ನು ನೆನಪಿಸುತ್ತದೆ.
  • ದೇವರ ಕರೆಯ ನವೀಕರಣ: ಆಯಾಸಗೊಂಡಾಗ, ಸುವಾರ್ತಾ ಪ್ರಸಾರ ಕಾರ್ಯಾಭಾರಿಗಳು ದೇವರ ಆಶ್ರಯವನ್ನು ಪಡೆಯಬೇಕು ಮತ್ತು ಯೆರೆಮಿಯನಂತೆ ತಮ್ಮ ಗುರಿಗೆ ಮತ್ತೆ ಬದ್ಧರಾಗಬೇಕು.

ಸಮಾರೋಪ

ಯೆರೆಮಿಯನ ಮೂರನೆಯ ಈ ವಿಖ್ಯಾಪನೆ ಪ್ರವಾದಿಯ ಸೇವಾಜೀವನಕ್ಕೆ ತೆರಬೇಕಾದ ಬೆಲೆಯನ್ನು ಮತ್ತು ದೇವರ ಪ್ರೋತ್ಸಾಹದ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಅವನ ಪ್ರಲಾಪ, ಅದಕ್ಕೆ ದೇವರ ಪ್ರತಿಕ್ರಿಯೆ ಮತ್ತು ನವೀಕರಣದ ಭರವಸೆ ಇಂದಿನ ಸುವಾರ್ತಾ ಪ್ರಸಾರ ಕಾರ್ಯಾಭಾರಿಗಳಿಗೆ ಪ್ರಬಲ ಸಂದೇಶವನ್ನು ನೀಡುತ್ತದೆ; ಸವಾಲುಗಳ ಹೊರತಾಗಿಯೂ ದೃಢವಾಗಿರಲು, ದೇವರ ಅಂತಿಮ ವಿಮೋಚನೆ ಮತ್ತು ರಕ್ಷಣೆಯಲ್ಲಿ ವಿಶ್ವಾಸವಿಡಲು ನಮಗೆ ಜ್ಞಾಪಿಸುತ್ತವೆ.

[ಇದು ಪ್ರೋಕ್ಲೌಡೆ ಮರಿಯೋಟಿನಿ ಅವರ Jeremiah’s Third Confession: Jeremiah 15:10-21 
ಎಂಬ ಪ್ರಬಂಧದ ಕನ್ನಡ ಭಾಷಾಂತರಇದರ ಮೂಲ ಬರವಣಿಗೆಯನ್ನು Jeremiah’s Third Confession: Jeremiah 15:10–21 | Dr. Claude Mariottini – Professor of Old Testament ಇದರಲ್ಲಿ ಕಾಣಬಹುದು.]


Comments

Popular posts from this blog

ಯೆರೆಮಿಯನ ಮೊದಲ ವಿಖ್ಯಾಪನೆ (ಯೆರೆಮಿಯ 11:18–23)

ಮಧ್ಯಸ್ಥಿಕೆ ಪ್ರಾರ್ಥನಾ ವೀರ: ಪ್ರವಾದಿ ಯೆರೆಮೀಯ

ಯೆರೆಮಿಯನ ಐದನೆಯ ವಿಖ್ಯಾಪನೆ – ಯೆರೆ 18: 18-23