“ಎಂತಹ ಮಹಾರಕ್ಷಣೆ” – ಹಿಬ್ರಿಯ 2:1–4 ರ ಒಂದು ಚಿಂತನೆ
ಮೂಲಪಠ್ಯ: ಹಿಬ್ರಿಯ 2:1-4
1
ಆದುದರಿಂದಲೇ,
ಗೊತ್ತುಗುರಿಯಿಲ್ಲದೆ ಅಲೆಯದ ಹಾಗೆ ನಾವು ಕೇಳಿರುವ ವಿಷಯಗಳಿಗೆ ವಿಶೇಷ ಗಮನಕೊಡಬೇಕು.
2 ಏಕೆಂದರೆ, ದೇವದೂತರ
ಮುಖಾಂತರ ನಮ್ಮ ಪೂರ್ವಜರಿಗೆ ನೀಡಲಾದ ಸಂದೇಶ ವಿಶ್ವಸನೀಯ ಎಂದು ಖಚಿತವಾದುದರಿಂದ, ಅದನ್ನು
ಮೀರಿದ ಪ್ರತಿಯೊಂದು ಉಲ್ಲಂಘನೆ ಮತ್ತು ಅವಿಧೇಯತೆ ನ್ಯಾಯಸಮ್ಮತವಾಗಿ ಶಿಕ್ಷಾರ್ಹವಾಗಿದ್ದರೆ,
3 ಇಂಥ
ಉತ್ಕೃಷ್ಟ ರಕ್ಷಣೆಯನ್ನು ಅಲಕ್ಷ್ಯ ಮಾಡಿದಲ್ಲಿ, ನಾವು ಶಿಕ್ಷೆಯಿಂದ ಹೇಗೆ ತಾನೆ
ತಪ್ಪಿಸಿಕೊಳ್ಳಬಲ್ಲೆವು? ಅದನ್ನು ಮೊತ್ತಮೊದಲು ಸಾರಿದವರು ಪ್ರಭುವೇ. ಅವರನ್ನು ಆಗ ಆಲಿಸಿದವರು
ನಮಗೆ ಅದನ್ನು ಪ್ರಮಾಣೀಕರಿಸಿದ್ದಾರೆ.
4 ಸೂಚಕಕಾರ್ಯಗಳಿಂದಲೂ
ಅದ್ಭುತಕಾರ್ಯಗಳಿಂದಲೂ ಹಲವಾರು ಮಹತ್ಕಾರ್ಯಗಳಿಂದಲೂ ಮತ್ತು ತಮ್ಮ ಚಿತ್ತಾನುಸಾರ ಅನುಗ್ರಹಿಸಿದ
ಪವಿತ್ರಾತ್ಮರ ವರದಾನಗಳಿಂದಲೂ ದೇವರು ಅದಕ್ಕೆ ಸಾಕ್ಷಿನೀಡಿದ್ದಾರೆ.
ಪಠ್ಯದ ಹಿನ್ನಲೆ
1. ಕರ್ತೃ
ಮತ್ತು ಅಭಿಗ್ರಾಹಿ:
ಕಿರುಕುಳದಿಂದಾಗಿ ಯಹೂದಿ ಧರ್ಮಕ್ಕೆ ಮರಳಲು
ಆಲೋಚಿಸುತ್ತಿದ್ದ ಯೆಹೂದಿ ಕ್ರೈಸ್ತರನ್ನು ಉದ್ದೇಶಿಸಿ ಈ ಪತ್ರವನ್ನು ಬರೆಯಲಾಗಿದೆ. ಲೇಖಕ ಆ ಜನರನ್ನು
ದೇವದೂತರು, ಮೋಶೆ ಮತ್ತು ಹಳೆಯ ಒಡಂಬಡಿಕೆಗಿಂತ ಶ್ರೇಷ್ಠನಾದ ಕ್ರಿಸ್ತರಲ್ಲಿ ದೃಢವಾಗಿ ಉಳಿಯುವಂತೆ
ಪ್ರೋತ್ಸಾಹಿಸುತ್ತಾರೆ.
2. ಹಿಬ್ರಿಯ
2:1–4 ರ ಸಂದರ್ಭ:
ಈ ಭಾಗ ಇದರ ಹಿಂದಿನ ೧ನೇ ಅಧ್ಯಾಯವನ್ನು
ಅನುಸರಿಸುತ್ತದೆ; ದೇವದೂತರೆಲ್ಲರಿಗಿಂತಲೂ ಮೇಲಾದ ಕ್ರಿಸ್ತರ ಶ್ರೇಷ್ಠತೆಯನ್ನು ಇದು ಒತ್ತಿಹೇಳುತ್ತದೆ.
ವಚನ 2:1 ರಲ್ಲಿರುವ "ಆದುದರಿಂದ" ಒಂದು ಪರಿವರ್ತನೆಯನ್ನು ಸೂಚಿಸುತ್ತದೆ; ಯೇಸು ದೇವದೂತರೆಲ್ಲರಿಗಿಂತಲೂ
ಶ್ರೇಷ್ಠರಾಗಿರುವುದರಿಂದ, ಅವರು ತಂದ ಸಂದೇಶವೂ ದೇವದೂತರ ಮುಖಾಂತರ ನೀಡಲಾದ ಸಂದೇಶಕ್ಕಿಂತಲೂ ಶ್ರೇಷ್ಠ
(ಧರ್ಮೋ33:2; ಪ್ರೇ.ಕಾ 7:53; ಗಲಾ 3:19).
3. ಯಹೂದಿ
ತಿಳುವಳಿಕೆ:
ಯೆಹೂದಿಗಳ ಪ್ರಕಾರ ತೋರಾ ಎಂದರೆ ಪಂಚಪುಸ್ತಕಗಳನ್ನು
ದೇವದೂತರ ಮೂಲಕ ನೀಡಲಾಗಿತ್ತು, ಆದುದರಿಂದ, ಅದನ್ನು ಉಲ್ಲಂಘಿಸಿದರೆ ತೀವ್ರ ಪರಿಣಾಮಗಳನ್ನು ಅದು ತರುತ್ತಿತ್ತು
(ಉದಾ: ಕೋರಹನ ದಂಗೆ, ಸಂಖ್ಯಾಕಾಂಡ 16). ಹಿಬ್ರಿಯ 2:1-4ರಲ್ಲಿ ಲೇಖಕ ಹೇಳುತ್ತಾನೆ, ಯೇಸು ತಂದ ಹೊಸ
ಒಡಂಬಡಿಕೆ ಇನ್ನೂ ಹೆಚ್ಚಿನ ಪರಿಣಾಮವನ್ನು ತರುತ್ತದೆ.
ಅರ್ಥವಿವರಣೆ:
ವಚನ 1:
“ಆದುದರಿಂದಲೇ, ಗೊತ್ತುಗುರಿಯಿಲ್ಲದೆ
ಅಲೆಯದ ಹಾಗೆ ನಾವು ಕೇಳಿರುವ ವಿಷಯಗಳಿಗೆ ವಿಶೇಷ ಗಮನಕೊಡಬೇಕು.”
"ಕೇಳಿರುವ
ವಿಷಯಗಳಿಗೆ" = ಸಾರಲಾದ ಸುವಾರ್ತೆ ಅಥವಾ ಬೋಧಿಸಲಾದ ಶುಭಸಂದೇಶ
"ವಿಶೇಷ
ಗಮನಕೊಡಬೇಕು" = ತೀವ್ರ ಎಚ್ಚರಿಕೆಯಿಂದ ಆಲೋಚನೆ ನೀಡಬೇಕು, ಜಾಗರೂಕತೆ ಮತ್ತು ಪರಿಶ್ರಮದ
ಅಗತ್ಯವನ್ನು ಒತ್ತಿಹೇಳುತ್ತದೆ
"ಗೊತ್ತುಗುರಿಯಿಲ್ಲದೆ
ಅಲೆಯದ ಹಾಗೆ" = ವಿಶ್ವಾಸದಿಂದ ದೂರವಾಗುವುದು, ಇದು ನಾವಿಕ ಚಿತ್ರಣ; ಸರಿಯಾಗಿ
ಲಂಗರು ಹಾಕದ ದೋಣಿಯಂತೆ, ನಮ್ಮ ಆತ್ಮ ಸತ್ಯವನ್ನು ಅರಿತುಕೊಳ್ಳದೆ ನಿಧಾನವಾಗಿ ದೂರ ಹೋಗಬಹುದು
ವ್ಯಾಖ್ಯಾನ: ಧರ್ಮಭ್ರಷ್ಟತೆ ಮತ್ತು ಭಕ್ತಿವಿಹೀನತೆ
ಎಂಬುದು ಸಾಮಾನ್ಯವಾಗಿ ನಿರ್ಲಕ್ಷ್ಯದಿಂದ ಪ್ರಾರಂಭವಾಗುತ್ತದೆ, ಧಿಕ್ಕಾರದಿಂದಲ್ಲ. ಈ ವಚನ ವಿಶ್ವಾಸದಲ್ಲಿ
ನಿಷ್ಕ್ರಿಯರಾಗುವುದರ ಬಗ್ಗೆ ಎಚ್ಚರಿಸುತ್ತದೆ.
ವಚನ 2:
“ಏಕೆಂದರೆ, ದೇವದೂತರ
ಮುಖಾಂತರ ನಮ್ಮ ಪೂರ್ವಜರಿಗೆ ನೀಡಲಾದ ಸಂದೇಶ ವಿಶ್ವಸನೀಯ ಎಂದು ಖಚಿತವಾದುದರಿಂದ, ಅದನ್ನು
ಮೀರಿದ ಪ್ರತಿಯೊಂದು ಉಲ್ಲಂಘನೆ ಮತ್ತು ಅವಿಧೇಯತೆ ನ್ಯಾಯಸಮ್ಮತವಾಗಿ ಶಿಕ್ಷಾರ್ಹವಾಗಿದ್ದರೆ,”
ದೇವದೂತರ
ಮುಖಾಂತರ ನಮ್ಮ ಪೂರ್ವಜರಿಗೆ ನೀಡಲಾದ ಸಂದೇಶ = ಹಳೆಯ ಒಡಂಬಡಿಕೆಯ ಆಜ್ಞೆಗಳು ಮತ್ತು
ಮೋಶೆಯ ನಿಯಮಗಳು
ವಿಶ್ವಸನೀಯ
ಎಂದು ಖಚಿತವಾದುದರಿಂದ = ದೇವರಿಗೆ ವಿರುದ್ಧವಾದ ಪ್ರತೀ ಕ್ರಿಯೆಗೆ ಶಿಕ್ಷೆಯಿದೆ ಎಂಬುದು ತಿಳಿದಿದ್ದುದರಿಂದ
ಉಲ್ಲಂಘನೆ
ಮತ್ತು ಅವಿಧೇಯತೆ ಶಿಕ್ಷಾರ್ಹವಾಗಿದ್ದರೆ = ಹಳೆಯ ಒಡಂಬಡಿಕೆಯಲ್ಲಿರುವ ಶಿಕ್ಷೆಯ ತೀವ್ರತೆ
ಇಲ್ಲಿ ಕಾಣಸಿಗುತ್ತದೆ
ವ್ಯಾಖ್ಯಾನ: ದೇವದೂತರ ಮುಖಾಂತರ ಪಡೆಯಲಾದ ನಿಯಮಗಳು ಅಷ್ಟು ಗಂಭೀರವಾಗಿದ್ದಲ್ಲಿ,
ದೇವಪುತ್ರ ಕ್ರಿಸ್ತರ ಶುಭಸಂದೇಶವನ್ನು ಅಲಕ್ಷಿಸುವುದು ಇನ್ನೂ ಹೆಚ್ಚು ಅಪಾಯಕಾರಿ ಎಂಬುದನ್ನು ಈ ವಚನ
ಹೇಳುತ್ತದೆ.
ವಚನ 3:
“ಇಂಥ
ಉತ್ಕೃಷ್ಟ ರಕ್ಷಣೆಯನ್ನು ಅಲಕ್ಷ್ಯ ಮಾಡಿದಲ್ಲಿ, ನಾವು ಶಿಕ್ಷೆಯಿಂದ ಹೇಗೆ ತಾನೆ
ತಪ್ಪಿಸಿಕೊಳ್ಳಬಲ್ಲೆವು?”
"ಉತ್ಕೃಷ್ಟ
ರಕ್ಷಣೆಯನ್ನು" = ಕ್ರಿಸ್ತರು ಎಸಗಿದ ವಿಮೋಚನಾ ಕಾರ್ಯ, ಇದರಲ್ಲಿ ಅವರ ಮನುಷ್ಯ
ಜನನ-ಜೀವನ, ಮರಣ ಮತ್ತು ಪುನರುತ್ಥಾನ ಸೇರಿವೆ
"ಅಲಕ್ಷ್ಯ ಮಾಡಿದಲ್ಲಿ"
= ದಂಗೆ ಅಥವಾ
ಬಂಡಾಯವಲ್ಲ, ಆದರೆ ಉದಾಸೀನತೆ ಅಥವಾ ಅಜಾಗರೂಕತೆ
“ಹೇಗೆ ತಾನೆ
ತಪ್ಪಿಸಿಕೊಳ್ಳಬಲ್ಲೆವು” = ಶಿಕ್ಷೆಯಿಂದ ಅಥವಾ ದಂಡನೆಯಿಂದ ತಪ್ಪಿಸಿಕೊಳ್ಳಲಾರೆವು
ವ್ಯಾಖ್ಯಾನ: ಈ ವಚನದಲ್ಲಿ ಪ್ರೇಷಿತರು
ಬೋಧಿಸಿದ ಯೇಸುವಿನ ಶುಭಸಂದೇಶದ ಪಾಲನೆಯ ಬಗ್ಗೆ ಎಚ್ಚರಿಕೆ ತೀವ್ರಗೊಳ್ಳುತ್ತದೆ; ವಿಶ್ವಾಸಿಗಳಿಗೆ
ಸ್ವರ್ಗಜೀವನ ಅಥವಾ ರಕ್ಷಣೆಯನ್ನು ಅನುಗ್ರಹಿಸಲಾಗುವುದು ನಿಜ, ಆದರೆ ಯಾಂತ್ರಿಕ ಅಥವಾ ಸ್ವಯಂಚಾಲಿತವಾಗಿ
ಅಲ್ಲ, ಅದಕ್ಕೆ ವೈಯಕ್ತಿಕ ಒಲವು ಮತ್ತು ಪ್ರತಿಕ್ರಿಯೆ ಅಗತ್ಯ.
ವಚನ 4:
“ಸೂಚಕಕಾರ್ಯಗಳಿಂದಲೂ
ಅದ್ಭುತಕಾರ್ಯಗಳಿಂದಲೂ ಹಲವಾರು ಮಹತ್ಕಾರ್ಯಗಳಿಂದಲೂ ಮತ್ತು
ತಮ್ಮ
ಚಿತ್ತಾನುಸಾರ ಅನುಗ್ರಹಿಸಿದ ಪವಿತ್ರಾತ್ಮರ ವರದಾನಗಳಿಂದಲೂ ದೇವರು ಅದಕ್ಕೆ
ಸಾಕ್ಷಿನೀಡಿದ್ದಾರೆ.”
ಶುಭಸಂದೇಶಕ್ಕೆ ಮೂರು ಪುರಾವೆಗಳು:
ಪ್ರಭುವಿನಿಂದಲೇ = ಯೇಸುವೇ ಅದನ್ನು ಸಾರಿದರು
ದೃಕ್ಸಾಕ್ಷಿಗಳಿಂದ = ಆತನ ಶಿಷ್ಯರು, ಅಪೋಸ್ತಲರು
ಅದನ್ನು ಸಾರಿದರು
ದೇವರೇ = ಸೂಚಕಕಾರ್ಯಗಳಿಂದ,
ಅದ್ಭುತಕಾರ್ಯಗಳಿಂದ, ಹಲವಾರು ಮಹತ್ಕಾರ್ಯಗಳಿಂದ ಮತ್ತು ಪವಿತ್ರಾತ್ಮರ ವರದಾನಗಳಿಂದ
ವ್ಯಾಖ್ಯಾನ: ಇದು ಶುಭಸಂದೇಶದ ದೈವಿಕ ದೃಢೀಕರಣವನ್ನು
ಸ್ಥಾಪಿಸುತ್ತದೆ. ಶುಭಸಂದೇಶ, ಅದರಲ್ಲೂ ಹೊಸ ಒಡಂಬಡಿಕೆ ಎಂಬುದು ಮಾನವ ಆವಿಷ್ಕಾರವಲ್ಲ, ಬದಲಿಗೆ ಸರ್ವೇಶ್ವರ
ತಾವೇ ಬಂದು ತಮ್ಮ ಪುತ್ರನ ಮೂಲಕ ಮಾಡಿಕೊಂಡ ಶಾಶ್ವತ ಒಡಂಬಡಿಕೆ, ಇದನ್ನು ಸಾಧ್ಯವಾದ ಎಲ್ಲ ಬಗೆಯಲ್ಲೂ
ಮಾನವರಿಗೆ ಮನದಟ್ಟು ಮಾಡಲು ದೇವರೇ ಪ್ರಯತ್ನಿಸಿದ್ದಾರೆ ಎಂಬುದನ್ನು ಈ ವಚನ ತೋರಿಸುತ್ತದೆ.
ದೈವಶಾಸ್ತ್ರ ಒಳಹುಗಳು
ಹೊಸ ಒಡಂಬಡಿಕೆಯಲ್ಲಿ ಅತ್ಯಂತ ತುರ್ತು
ಮನವಿಗಳಲ್ಲಿ ಹಿಬ್ರಿಯ 2:1–4 ನ್ನು ಪರಿಗಣಿಸಲಾಗಿದೆ. ಭಕ್ತವಿಶ್ವಾಸಿಗಳನ್ನು
ವಿಶ್ವಾಸಕ್ಕೆ ಮಾತ್ರವಲ್ಲ, ಗಮನ, ಪರಿಶ್ರಮ ಮತ್ತು ರಕ್ಷಣೆಯ ಉಡುಗೊರೆಗಾಗಿ ಕರೆ ನೀಡುತ್ತದೆ. ಈ ವಚನಗಳು
ಭಯದಿಂದಲ್ಲ, ಪ್ರೀತಿಯಿಂದ ಎಚ್ಚರಿಕೆಯ ವಹಿಸುವುದರ ಬಗ್ಗೆ ಹೇಳುತ್ತವೆ - ದೂರ ಸರಿಯಬೇಡಿ, ಕ್ರಿಸ್ತ
ಯೇಸುವಿನಲ್ಲಿ ಪ್ರಕಟವಾದ ಕೃಪೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂಬುದೇ ಆ ಕರೆ. "ಆದುದರಿಂದ
ನಾವು ಕೇಳಿರುವ ವಿಷಯಗಳಿಗೆ ವಿಶೇಷ ಗಮನಕೊಡಬೇಕು, ಗೊತ್ತುಗುರಿಯಿಲ್ಲದೆ
ಅಲೆಯಬಾರದು"
ಎಂದು ಲೇಖಕ ಪ್ರಾರಂಭಿಸುತ್ತಾನೆ. ಇದು ಕೇವಲ ಕಾವ್ಯಾತ್ಮಕ ಹೇಳಿಕೆಯಲ್ಲ - ಇದು ಸಭಾಪಾಲಕನ ಕಳಕಳಿಯ
ಧ್ವನಿ. ಬಹುಶಃ, ನಿರಾಸಕ್ತಿ ಅಥವಾ ಕಿರುಕುಳದಿಂದ ಪ್ರಲೋಭನೆಗೆ ಒಳಗಾದ ಜನರು ತಮ್ಮ ವಿಶ್ವಾಸದ ಲಂಗರನ್ನು
ಬಿಟ್ಟುಬಿಡಲು ಆಲೋಚಿಸುವಾಗ ಸಭಾಪಾಲಕ ಹೇಳುತ್ತಿರುವ ಎಚ್ಚರಿಕೆಯ ಮಾತುಗಳು ಇವು.
ಅಲೆದಾಡುವುದು ಸುಲಭ, ಇದಕ್ಕೆ ಯಾವುದೇ
ನಿರ್ಧಾರ, ಪ್ರತಿರೋಧ ಅಗತ್ಯವಿಲ್ಲ. ಕಟ್ಟಿಹಾಕದೆ ಬಿಟ್ಟ ದೋಣಿ ತನ್ನ ಹಾದಿಯನ್ನು ಕಳೆದುಕೊಳ್ಳಲು
ಗಾಳಿ ಅಥವಾ ಅಲೆಯ ಅಗತ್ಯವಿಲ್ಲ; ಅದು ಸಹಜವಾಗಿ ತೇಲುತ್ತದೆ - ಮೌನವಾಗಿ, ನಿಧಾನವಾಗಿ, ಆದರೆ ನಿಸ್ಸಂಶಯವಾಗಿ
ಗೊತ್ತುಗುರಿಯಿಲ್ಲದೆ ದಿಕ್ಕಾಪಾಲಾಗಿ ಹೋಗುತ್ತದೆ. ಹಿಬ್ರಿಯರಿಗೆ ಬರೆದ ಪತ್ರದ ಈ ಭಾಗ, ಅಂತಹ ಆಧ್ಯಾತ್ಮಿಕ
ಅಲೆದಾಟ ಎಲ್ಲರಿಗೂ ಅಪಾಯಕಾರಿ ಎಂಬುದನ್ನು ನೆನಪಿಸುತ್ತದೆ. "ವಿಶೇಷ
ಗಮನಕೊಡಬೇಕು"
ಎಂಬ ಕರೆ ಕೇವಲ ಸಿದ್ಧಾಂತಗಳನ್ನು ಅಥವಾ ಧರ್ಮೋಪದೇಶವನ್ನು ಕಂಠಪಾಠ ಮಾಡುವುದು ಅಥವಾ ಧಾರ್ಮಿಕ ಅಭ್ಯಾಸಗಳನ್ನು
ಚಾಚೂತಪ್ಪದೆ ನಡೆಸುವುದು ಎಂದಲ್ಲ. ಇದು ನಾವು ಸ್ವೀಕರಿಸಿದ ಶುಭಸಂದೇಶದ ಮೇಲೆ, ಸುವಾರ್ತೆಯ ವಿಷಯದ
ಮೇಲೆ ನಮ್ಮ ಹೃದಯಗಳನ್ನು ಕೇಂದ್ರೀಕರಿಸುವ ಬಗ್ಗೆ; ಶುಭಸಂದೇಶ
ಎಂದರೆ, ಕೇವಲ ವಿಶ್ವಾಸಿಸಬೇಕಾದ ಸತ್ಯ ಮಾತ್ರವಲ್ಲ, ಅದಕ್ಕೂ ಮಿಗಿಲಾಗಿ ಅನುಸರಿಸಬೇಕಾದ ಮತ್ತು
ಪೂಜಿಸಬೇಕಾದ ವ್ಯಕ್ತಿ, ಯೇಸು!
ಲೇಖಕ ಕ್ರಿಸ್ತನ ಸಂದೇಶವನ್ನು ಮೋಶೆಗೆ
ನೀಡಲಾದ ಕಾನೂನಿಗೆ ಉಲ್ಲೇಖಿಸಿ, ದೇವದೂತರ ಮೂಲಕ ಹಿಂದೆ ನೀಡಲಾದ ನಿಯಮಗಳಿಗೆ ಹೋಲಿಸಿದಾಗ ಎಚ್ಚರಿಕೆಯ
ತೀವ್ರತೆ ಇನ್ನೂ ಹೆಚ್ಚಾಗುತ್ತದೆ ಎಂಬುದನ್ನು ತಿಳಿಸುತ್ತಾನೆ. ಹಳೆಯ ಒಡಂಬಡಿಕೆಯ ಬಗ್ಗೆ ಇದ್ದ ಅವಿಧೇಯತೆಗೆ
ತಕ್ಕ ಪರಿಣಾಮಗಳು ಇದ್ದಲ್ಲಿ, ಸುವಾರ್ತೆಯನ್ನು ನಿರ್ಲಕ್ಷ್ಯ ಮಾಡಿದರೆ ಎಷ್ಟು ಗಂಭೀರವಾಗಿರಬಹುದು
ಆಲೋಚಿಸಿರಿ? ಕ್ರಿಸ್ತರಲ್ಲಿ ನಮಗೆ ನೀಡಲಾಗಿರುವುದು ಕಲ್ಲಿನ ಹಲಗೆಗಳ ಮೇಲೆ ಬರೆಯಲಾದ ನಿಯಮವಲ್ಲ,
ಅದು ಜೀವ ನೀಡುವಂತಹದ್ದು - ಶಾಶ್ವತವಾದ, ನಾವು ಅನರ್ಹರಾಗಿದ್ದರೂ, ನಮಗೆ ಉಚಿತವಾಗಿ ನೀಡಲಾಗಿರುವ
ಮತ್ತು ದೇವರಪುತ್ರನ ರಕ್ತದಿಂದ ಮುದ್ರೆ ಹಾಕಲಾಗಿರುವ ಹೊಸ ಒಡಂಬಡಿಕೆ!
ಈ "ಮಹಾರಕ್ಷಣೆ"ಯನ್ನು ಮೊದಲು
ಘೋಷಿಸಿದ್ದು ಸರ್ವೇಶ್ವರನೇ ಎಂದು ಲೇಖಕನು ವಿವರಿಸುತ್ತಾನೆ. ಸ್ವರ್ಗರಾಜ್ಯದ ಬಗ್ಗೆ ಯೇಸು ಮಾತನಾಡಿದ್ದಲ್ಲದೆ,
ಅದನ್ನು ಅವರು ಸಾಕಾರಗೊಳಿಸಿದರು. ಅವರ ಮಾತುಗಳು, ಅವರ ಕಾರ್ಯಗಳು, ಅವರ ಮರಣ ಮತ್ತು ಅವರ ಪುನರುತ್ಥಾನ
ಸುಳ್ಳಲ್ಲ, ಅವು ಮಾನವ ಇತಿಹಾಸಕ್ಕೆ ನೀಡಲಾದ ದೇವರ ಕರುಣೆಯ ಸಾಕ್ಷಾತ್ ಪ್ರಾತ್ಯಕ್ಷಿಕೆ. ಅವರ ಮಾತುಗಳನ್ನು
ಕೇಳಿದವರು - ಅವರ ಅಪೊಸ್ತಲರು ಮತ್ತು ಮೊದಲ ಶಿಷ್ಯರು - ತಮ್ಮ ಉಪದೇಶದ ಮೂಲಕ ಮಾತ್ರವಲ್ಲದೆ, ಅವರ
ಜೀವನದ ಮೂಲಕವೂ ಸಾಕ್ಷಿಯಾದರು, ಅನೇಕರು ಹುತಾತ್ಮರಾದರು.
ಆದರೆ, ಮಾನವ ಸಾಕ್ಷ್ಯಕ್ಕಿಂತ ಹೆಚ್ಚಾಗಿ,
ದೇವರು ಸ್ವತಃ ಈ ಸಂದೇಶಕ್ಕೆ ಸಾಕ್ಷಿಯಾಗಿದ್ದಾರೆ; ಅದನ್ನು "ಸೂಚಕಕಾರ್ಯಗಳಿಂದಲೂ
ಅದ್ಭುತಕಾರ್ಯಗಳಿಂದಲೂ ಹಲವಾರು ಮಹತ್ಕಾರ್ಯಗಳಿಂದಲೂ ಮತ್ತು ತಮ್ಮ ಚಿತ್ತಾನುಸಾರ ಅನುಗ್ರಹಿಸಿದ
ಪವಿತ್ರಾತ್ಮರ ವರದಾನಗಳಿಂದಲೂ" ದೃಢಪಡಿಸಿದ್ದಾರೆ. ಅಪೊಸ್ತಲರ ಮತ್ತು ಮೊದಲ ಶಿಷ್ಯರ ಜೀವನಸಾಕ್ಷ್ಯಗಳ
ಮೂಲಕ, ಸುವಾರ್ತೆಯನ್ನು ಹೇಳಲಾಗಿದೆ, ಬೋಧಿಸಲಾಗಿದೆ ಮಾತ್ರವಲ್ಲ, ಅದನ್ನು ಜೀವಿಸಲಾಗಿದೆ, ಸಾಬೀತುಪಡಿಸಲಾಗಿದೆ
ಮತ್ತು ಸಬಲೀಕರಣಗೊಳಿಸಲಾಗಿದೆ. ಅದ್ಭುತವಾದ ಗುಣಪಡಿಸುವಿಕೆಗಳ ಮೂಲಕ, ಕಠಿಣ ಹೃದಯಗಳ ಪರಿವರ್ತನೆಗಳ
ಮೂಲಕ, ಧರ್ಮಸಭೆಯ ಪವಿತ್ರಾತ್ಮರ ವೈವಿಧ್ಯಮಯ ಕೊಡುಗೆಗಳ ಮೂಲಕ, ದೇವರು ಈ ಮಹಾರಕ್ಷಣೆಯ ಸತ್ಯವನ್ನು
ದೃಢೀಕರಿಸುತ್ತಲೇ ಇದ್ದಾರೆ.
ಆದರೂ, ಇಷ್ಟೆಲ್ಲ ಶ್ರೇಷ್ಠತೆ ಇದ್ದರೂ,
ಈ ಮಹಾರಕ್ಷಣೆಯ ನಿರ್ಲಕ್ಷಿಸಬಹುದು. ಹಗೆತನದಿಂದ ತಿರಸ್ಕರಿಸ ಬೇಕಿಲ್ಲ, ಬದಲಿಗೆ ಸರಳವಾಗಿ ಅಲಕ್ಷ್ಯಮಾಡುವುದು.
ವಿರೋಧಿಸುವುದಿಲ್ಲ, ಸುಮ್ಮನೆ ಮುಂದೂಡುವುದು. ಸುವಾರ್ತೆಯನ್ನು ನಿರಾಕರಿಸುವುದರಲ್ಲಿ ಮಾತ್ರವಲ್ಲ
– ಅದರ ಬಗ್ಗೆ ಯಾವ ಪ್ರತಿಕ್ರಿಯೆ
ನೀಡದಿರುವುದು, ಕ್ಷುಲಕ ವಿಷಯಗಳಲ್ಲಿ ಮಗ್ನರಾಗುವುದು, ಅತಿ ಪರಿಚಿತತೆಯಿಂದ ಮಂದವಾಗುವುದು. ಇದೇ ಲೇಖಕನ
ಮುಖ್ಯ ಕಾಳಜಿಯ ವಿಷಯ: ಅಂತಹ ಅದ್ಭುತವಾದುದ್ದನ್ನು ಸಾಮಾನ್ಯ ಎಂಬಂತೆ ಪರಿಗಣಿಸುವುದು, ವಿಶ್ವಾಸದ
ಬೆಂಕಿ ತಣ್ಣಗಾಗಲು ಬಿಡುವುದು; ಸತ್ವಪರೀಕ್ಷೆಯಿಂದಾಗಿ ಅಲ್ಲ, ಕೇವಲ ಸೌಕರ್ಯ ಅಥವಾ ಲೋಕಾರೂಢಿಯಿಂದಾಗಿ.
ಹಿಬ್ರಿಯ 2:1–4 ಶತಮಾನಗಳಿಂದ ಇಂದಿನವರೆಗೆ
ಮಾತನಾಡುತ್ತಿದೆ. ಗೊಂದಲವೇ ಜೀವನವಾಗಿರುವ ಈ ಆಧುನಿಕ ಸಮಾಜದಲ್ಲಿ, ಸತ್ಯವನ್ನು ಹೆಚ್ಚಾಗಿ ಸಾಪೇಕ್ಷವೆಂದು
ಪರಿಗಣಿಸುವ ಮತ್ತು ಆಧ್ಯಾತ್ಮಿಕ ಮಧ್ಯಮತೆಯ ಪ್ರಲೋಭನೆಗಳು ಪ್ರತಿಯೊಂದು ಮೂಲೆಯಲ್ಲೂ ಹುದುಗಿರುವ ಈ
ಕಾಲದಲ್ಲಿ, ಈ ಪಠ್ಯ ಒಂದು ಸ್ಪಷ್ಟ ಕರೆಯಾಗಿದೆ. ನಾವು
ಅಲೆದಾಡುವವರಾಗಬಾರದು. ನಾವು ನಿರ್ಲಕ್ಷಿಸದಿರೋಣ, ಬದಲಿಗೆ, ನಾವು ಕ್ರಿಸ್ತನಲ್ಲಿ ಪಡೆದಿರುವ
ʼಮಹಾರಕ್ಷಣೆʼಯ ಬಗ್ಗೆ ನಮ್ಮ ಹೃದಯವನ್ನು
ಮತ್ತೆ ಜಾಗೃತಗೊಳಿಸೋಣ – ನಮ್ಮ ಪುಣ್ಯಕಾರ್ಯಗಳಿಂದ ನಾವು ಸಂಪಾದಿಸಿದಲ್ಲ, ಆದರೆ ನಮಗೆ ಉಚಿತವಾಗಿ
ನೀಡಲಾಗಿರುವುದು, ಈ ಲೋಕವಲ್ಲ, ಆದರೂ ಈ ಲೋಕದ ನಮ್ಮ ಜೀವನಕ್ಕಾಗಿ ನೀಡಲಾಗಿರುವ ಮಹಾ ರಕ್ಷಣೆ!
ಅಷ್ಟು ಮಹಾರಕ್ಷಣೆ ನಮ್ಮ ಆಸಕ್ತಿಗೆ ಮಾತ್ರವಲ್ಲ,
ನಮ್ಮ ಭಕ್ತಿಗೆ ಅರ್ಹವಾದುದು. ಕ್ರಿಸ್ತರನ್ನು ಅನುಸರಿಸುವುದು ಎಂದರೆ ಉದ್ದೇಶ ಹೊತ್ತು ಗುರಿಯೆಡೆಗೆ
ನಡೆಯುವುದು, ಭಕ್ತಿಯಿಂದ ಅವರನ್ನು ಆಲಿಸುವುದು ಮತ್ತು ಕೃತಜ್ಞತೆಯಿಂದ ಬದುಕುವುದು. ಈ ಸಂದೇಶವನ್ನು
ನುಡಿಯಲಾಗಿದೆ, ದೃಢೀಕರಿಸಲಾಗಿದೆ ಮತ್ತು ಸಾರಲಾಗಿದೆ.
ಉಳಿದಿರುವ ಏಕೈಕ ಪ್ರಶ್ನೆ: ನಾವು ಇದಕ್ಕೆ
ಗಮನ ಕೊಡುತ್ತೇವೆಯೇ?

Comments
Post a Comment