ಯೆರೆಮಿಯನ ಎರಡನೇ ವಿಖ್ಯಾಪನೆ - 12:1–6
ಪಠ್ಯ: ಯೆರೆಮಿಯ 12:1–6
1 ಸರ್ವೇಶ್ವರಾ,
ನೀವು ಸತ್ಯಸ್ವರೂಪಿ.
ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ.
ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ:
ದುರುಳರ ಬಾಳು ಬೆಳಗುತ್ತಿರುವುದು ಏಕೆ?
ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?
2 ಅವರನ್ನು
ನಾಟಿಮಾಡಿದವರು ನೀವು
ಬೇರೂರಿ ಬೆಳೆದು ಹಣ್ಣುಬಿಡುತ್ತಿದ್ದಾರೆ ಅವರು.
ನೀವು ಅವರ ಅಧರಕ್ಕೆ ಹತ್ತಿರ, ಹೃದಯಕ್ಕೆ ದೂರ.
3 ಸರ್ವೇಶ್ವರಾ,
ನನ್ನ ಪರಿಚಯ ನಿಮಗಿದೆ,
ನಿಮ್ಮ ನೋಟ ನನ್ನ ಮೇಲಿದೆ.
ನನ್ನ ಹೃದಯ ನಿಮ್ಮೊಂದಿಗಿದೆ,
ಇದರ ಪರೀಕ್ಷೆ ನಿಮ್ಮಿಂದಾಗಿದೆ.
ಅವರನ್ನೋ, ಕುರಿಗಳೋ ಎಂಬಂತೆ ಕೊಲೆಗೆ ಕರೆದೊಯ್ಯಿರಿ,
ವಧ್ಯದಿವಸದವರೆಗೂ ಅವರನ್ನು ವಿಂಗಡಿಸಿಡಿ.
4 ಇನ್ನೆಷ್ಟರವರೆಗೆ
ನಾಡು ದುಃಖಿಸುತ್ತಿರಬೇಕು?
ಅದರ ಎಲ್ಲೆಎಲ್ಲೆಗಳಲ್ಲಿ ಹುಲ್ಲು ಸೊಪ್ಪು ಒಣಗಿರಬೇಕು?
ನಾಡಜನರ ನೀಚತನದ ನಿಮಿತ್ತ,
ಮಾಯವಾಗಿವೆ ಪ್ರಾಣಪಕ್ಷಿಗಳು ಕೂಡ.
‘ನಮ್ಮ
ನಡತೆಯನ್ನು ಗಮನಿಸರು ದೇವರು’
ಎಂದುಕೊಳ್ಳುತ್ತಿರುವರು ಆ ಜನರು.
5 ಆಗ
ಸರ್ವೇಶ್ವರ ನನಗೆ:
“ಕಾಲಾಳುಗಳ
ಸಂಗಡ ಓಡಲು ಆಯಾಸಗೊಂಡೆಯಾದರೆ,
ಕುದುರೆಗಳೊಂದಿಗೆ ಓಡಿ ಹೇಗೆ ಹೋರಾಡುವೆ?
ಪ್ರಶಾಂತ ಪ್ರದೇಶದಲ್ಲಿ ನಿರ್ಭಯನಾಗಿ ನಿಲ್ಲಲಾರೆಯಾದರೆ,
ಜೋರ್ಡಾನಿನ ದಟ್ಟ ಅಡವಿಯಲ್ಲಿ ಏನು ಮಾಡಬಲ್ಲೆ?
6 ನಿನ್ನ
ಸೋದರರೇ, ನಿನ್ನ ತೌರುಮನೆಯವರೇ ನಿನಗೆ ದ್ರೋಹವೆಸಗಿದ್ದಾರೆ.
ಇವರೇ ನಿನ್ನ ಬೆನ್ನಟ್ಟಿ ಬಂದು
ಧಿಕ್ಕಾರ ಕೂಗಿದ್ದಾರೆ.
ಇಂತಿರಲು ಇವರು ಸವಿನುಡಿದರೂ ನಂಬಲೆಬೇಡ.”
ಪರಿಚಯ
ಯೆರೆಮಿಯನ ಎರಡನೇ ವಿಖ್ಯಾಪನೆಯಲ್ಲಿ ಪ್ರವಾದಿ ಮತ್ತು ದೇವರ ನಡುವಿನ ನಿಕಟ ಸಂಭಾಷಣೆಯನ್ನು ಕಾಣುತ್ತೇವೆ. ದೇವರ ನ್ಯಾಯ ಮತ್ತು ಜೂಡಾದಲ್ಲಿ ದುಷ್ಟರ ಏಳಿಗೆಯ ನಡುವಿನ ಸ್ಪಷ್ಟ ವಿರೋಧಾಭಾಸಗಳೊಂದಿಗೆ ಯೆರೆಮಿಯನ ಹೋರಾಟವನ್ನು ಈ ಭಾಗ ತಿಳಿಸುತ್ತದೆ. ಯೆರೆಮಿಯನ "ವಿಖ್ಯಾಪನೆಗಳು" (Confessions) ಅಥವಾ "ಪ್ರಲಾಪಗಳು" (Laments) ಎಂದು ಕರೆಯಲಾಗುವ ಈ ಪಠ್ಯದಲ್ಲಿ ಇಸ್ರಯೇಲಿನ ಇತಿಹಾಸದಲ್ಲಿದ್ದ ಪ್ರಕ್ಷುಬ್ಧ ಅವಧಿಯಲ್ಲಿ ದೇವರ ಸಂದೇಶವಾಹಕನಾಗಿ ಸೇವೆ ಸಲ್ಲಿಸುವ ಪ್ರವಾದಿ ಯೆರೆಮಿಯನ ಆಧ್ಯಾತ್ಮಿಕ ಪ್ರಯಾಣದ ಆಂತರ್ಯದ ಒಳನೋಟವನ್ನು ಇಲ್ಲಿ ಕಾಣುತ್ತೇವೆ.
ಈ ವಿಖ್ಯಾಪನೆ, ದೇವರ ನ್ಯಾಯವನ್ನು ಪ್ರಶ್ನಿಸುವಲ್ಲಿ ಯೆರೆಮಿಯನ ಧೈರ್ಯ, ದುಷ್ಟರ ಸಮೃದ್ಧಿಯ ಬಗ್ಗೆ ಅವನ ಹತಾಶೆ ಮತ್ತು ಮುಂದೆ ಹೆಚ್ಚು ಗಮನಾರ್ಹ ತೊಂದರೆಗಳಿಗೆ ಪ್ರವಾದಿಯನ್ನು ಸಿದ್ಧಪಡಿಸುವ ದೇವರ ಸವಾಲಿನ ಪ್ರತಿಕ್ರಿಯೆಯಿಂದ ನಿಬಿಡವಾಗಿದೆ. ಪ್ರವಾದಿ, ತಾನು ಮಾಡುವ ಸೇವೆಗಾಗಿ ತೆರಬೇಕಾಗುವ ಬೆಲೆ ಎಷ್ಟೆಂಬುದಕ್ಕೆ ಈ ಭಾಗ ಒಂದು ದೃಷ್ಟಾಂತವನ್ನು ಒದಗಿಸುತ್ತದೆ ಮತ್ತು ದೇವರು ಹಾಗೂ ಪ್ರವಾದಿಗಳ ನಡುವಿನ ನಿಕಟ, ಆದರೆ ಕೆಲವೊಮ್ಮೆ ಕಷ್ಟಕರವಾದ ಸಂಬಂಧವನ್ನೂ ಇದು ಪ್ರದರ್ಶಿಸುತ್ತದೆ.
ಯೆರೆಮಿಯ 12:1-6ರ ಭಾಗದಲ್ಲಿ ಜೂಡಾದ ನೈತಿಕ ಮತ್ತು ಆಧ್ಯಾತ್ಮಿಕ ಅವನತಿಯ ಬಗ್ಗೆ ಅದರ ಹೆಚ್ಚುತ್ತಿರುವ ಹತಾಶೆಯ ಸಂದರ್ಭವನ್ನು ನಮ್ಮ ಕಣ್ಣ ಮುಂದೆ ತರುತ್ತದೆ. ಈ ಭಾಗ, ಜನರಿಗೆ ಎಚ್ಚರಿಕೆಗಳ ಸರಮಾಲೆಯನ್ನೇ ನೀಡುತ್ತದೆ (ಯೆರೆಮಿಯ 11) ಮತ್ತು ಪ್ರವಾದಿಯ ಸ್ವಂತ ಕುಟುಂಬ ಅವನ ವಿರುದ್ಧ ಸಂಚು ರೂಪಿಸಿದ್ದರಿಂದ ಅವನ ಸೇವೆಗೆ ತೆರಬೇಕಾಗುವ ಬೆಲೆಯನ್ನು ತೋರಿಸುತ್ತದೆ.
ಐತಿಹಾಸಿಕ ಹಿನ್ನೆಲೆ
ಯೆರೆಮಿಯ, ಜೂಡಾದ ಇತಿಹಾಸದ ಅತ್ಯಂತ ಪ್ರಕ್ಷುಬ್ಧ ಅವಧಿಗಳೊಂದರಲ್ಲಿ ಪ್ರವಾದಿಯಾಗಿದ್ದವನು; ಇದು ಸುಮಾರು ಕ್ರಿ.ಪೂ 627-587 ರವರೆಗಿನ ಐದು ರಾಜರ ಆಳ್ವಿಕೆಯಲ್ಲಿ ವ್ಯಾಪಿಸಿತು. ಅವನ ಸೇವೆ, ರಾಜ ಯೋಷೀಯನ ಆಳ್ವಿಕೆಯಲ್ಲಿ ಪ್ರಾರಂಭವಾಯಿತು, ಇದು ಧಾರ್ಮಿಕ ಸುಧಾರಣೆಯ ಅವಧಿಯಾಗಿತ್ತು, ಆದರೆ ಜೂಡಾದ ಅವನತಿ, ಬ್ಯಾಬಿಲೋನ್ ದೇಶದ ಮುತ್ತಿಗೆ ಮತ್ತು ಅಂತಿಮವಾಗಿ ಜೆರುಸಲೆಮಿನ ಪತನ ಈ ಅವಧಿಯಲ್ಲಿ ನಡೆದಿತ್ತು.
ಈ ಎರಡನೇ ವಿಖ್ಯಾಪನೆಯ ತಕ್ಷಣದ ಸಂದರ್ಭ ಯೋಷೀಯನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಅಥವಾ ಯೆಹೋಯಾಕೀಮನ ಆಳ್ವಿಕೆಯ ಆರಂಭಿಕ ವರ್ಷಗಳಲ್ಲಿ (ಸುಮಾರು 609-605 ಕ್ರಿ.ಪೂ.) ಇದ್ದಿರಬಹುದು. ಯೋಷೀಯನ ಧಾರ್ಮಿಕ ಸುಧಾರಣೆಗಳ ಹೊರತಾಗಿಯೂ, ಜೂಡಾದಲ್ಲಿ ಅನೇಕರು, ವಿಶೇಷವಾಗಿ ಸಮಾಜದ ಗಣ್ಯರು ಮತ್ತು ಧಾರ್ಮಿಕ ನಾಯಕರು, ದೇವರ ಒಡಂಬಡಿಕೆಯ ಬಗ್ಗೆ ಮೇಲ್ನೋಟಕ್ಕೆ ಬದ್ಧರಾಗಿದ್ದರು. ಭ್ರಷ್ಟಾಚಾರ, ಸಾಮಾಜಿಕ ಅನ್ಯಾಯ ಮತ್ತು ವಿಗ್ರಹಾರಾಧನೆ ಪ್ರಚಲಿತವಾಗಿಯೇ ಇತ್ತು.
ಎರಗಲಿರುವ ದೇವರ ತೀರ್ಪಿನ ಬಗ್ಗೆ ಯೆರೆಮಿಯ ನುಡಿದ ಸಂದೇಶ ಅವನನ್ನು ಜನರ ನಡುವೆ ಅಪ್ರಿಯನನ್ನಾಗಿಸಿತು. ಅವನು ಖಂಡಿಸಿದ ಜೆರುಸಲೆಮಿನ ಧಾರ್ಮಿಕ ನಾಯಕರ ಸಭೆ, ಬ್ಯಾಬಿಲೋನಿನ ವಿಜಯದ ಬಗ್ಗೆ ಅವನು ನುಡಿದ ಭವಿಷ್ಯವಾಣಿಗಳನ್ನು ದೇಶದ್ರೋಹವೆಂದು ತೀರ್ಪಿಟ್ಟಿದ್ದರಿಂದ ರಾಜಕೀಯ ನಾಯಕರು ಮತ್ತು ಅನಾಥೋತ್ನಲ್ಲಿರುವ ಅವನ ಸ್ವಂತ ಪಟ್ಟಣವಾಸಿಗಳು ಸೇರಿದಂತೆ ಎಲ್ಲೆಡೆಗಳಿಂದ ವಿರೋಧವನ್ನು ಎದುರಿಸಬೇಕಾಯಿತು.
ಅವನ ಸ್ವಂತ ಊರಾದ ಅನಾಥೋತ್ನಿಂದ ಬಂದ ಬೆದರಿಕೆಗಳು ಈ ವಿಖ್ಯಾಪನೆಗೆ ತಕ್ಷಣದ ಕಾರಣ. ಯೆರೆಮಿಯ ತನ್ನ ಜೀವಕ್ಕೆ ಎದುರಾಗಿರುವ ಸಂಚಿನಿಂದ ದೇವರ ರಕ್ಷಣೆಯನ್ನು ಪಡೆದಿದ್ದನು (ಯೆರೆ 11:18-23). ಆದರೂ, ಆ ಅನುಭವ ದೇವರ ನ್ಯಾಯ ಮತ್ತು ಅವರ ಒಡಂಬಡಿಕೆಯನ್ನು ತಿರಸ್ಕರಿಸಿದವರ ಸಮೃದ್ಧಿಯ ಬಗ್ಗೆ ಅವನಿಗೆ ಹೆಚ್ಚು ಗಹನವಾದ ಪ್ರಶ್ನೆಗಳನ್ನು ಪ್ರೇರೇಪಿಸಿತು.
1. ಯೆರೆಮಿಯನ ಪ್ರಲಾಪ 12:1-6
ಯೆರೆಮಿಯ 12:1: “ಸರ್ವೇಶ್ವರಾ, ನೀವು ಸತ್ಯಸ್ವರೂಪಿ.
ನಿಮ್ಮೊಡನೆ ವ್ಯಾಜ್ಯ ನನಗೆ ಅಸಾಧ್ಯ.
ಆದರೂ ನಿಮ್ಮೊಡನೆ ಚರ್ಚಿಸಬೇಕೆಂದಿರುವೆ ಈ ನ್ಯಾಯ:
ದುರುಳರ ಬಾಳು ಬೆಳಗುತ್ತಿರುವುದು ಏಕೆ?
ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?”
ಯೆರೆಮಿಯ ದೇವರ ನೀತಿಯನ್ನು ಔಪಚಾರಿಕವಾಗಿ ಒಪ್ಪಿಕೊಳ್ಳುವ ಮೂಲಕ ತನ್ನ ಮಾತನ್ನು ಪ್ರಾರಂಭಿಸುತ್ತಾನೆ; ದೇವರ ವಿರುದ್ಧ ಆರೋಪ ಹೊರಿಸುವ ಮೂಲಕ ಕಾನೂನು ರೂಪಕವನ್ನು ಬಳಸುತ್ತಾನೆ. ರಿಬ್ Rib ಅಥವಾ ರೂಬ್ Rub ಎಂಬ ಹೀಬ್ರೂ ಪದ ದೇವರ ಮುಂದೆ ಯೆರೆಮಿಯ "ಕಾನೂನು ಪ್ರಕರಣ"ವನ್ನು ತರುತ್ತಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಈ ಸ್ವರೂಪ ಪ್ರವಾದಿಯ ಸಾಹಿತ್ಯದಲ್ಲಿ ಬೇರೆ ಕಡೆಗಳಲ್ಲಿ ಕಂಡುಬರುವ “ಒಡಂಬಡಿಕೆ ಮೊಕದ್ದಮೆ” (The Covenant Lawsuit) ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ತಾನು ಗಮನಿಸುತ್ತಿರುವ ನಿರ್ದಿಷ್ಟ ಸಂದರ್ಭಗಳಲ್ಲಿ ಈ ನ್ಯಾಯ ಹೇಗೆ ಸರಿಯೆನಿಸುತ್ತದೆ ಎಂದು ದೇವರನ್ನು ಪ್ರಶ್ನಿಸುವ ಮೊದಲು, ಪ್ರವಾದಿ ದೇವರ ನ್ಯಾಯವನ್ನು ದೃಢೀಕರಿಸುತ್ತಾನೆ.
ನಮ್ಮನ್ನು ಚಕಿತಗೊಳಿಸುವ ಯೆರೆಮಿಯನ "ಏಕೆ" ಎಂಬ ಪ್ರಶ್ನೆ ಕೀರ್ತನೆಗಾರನ ಪ್ರಶ್ನೆಯನ್ನು (ಕೀರ್ತನೆ 73) ಮತ್ತು ಯೋಬನ ದೂರುಗಳನ್ನು ಜ್ಞಾಪಿಸುತ್ತದೆ. ಇದು ದೇವರ ನ್ಯಾಯದ ಪ್ರಶ್ನೆ: ದುರುಳರ ಬಾಳು ಬೆಳಗುತ್ತಿರುವುದು ಏಕೆ? ದ್ರೋಹಿಗಳೆಲ್ಲರು ನೆಮ್ಮದಿಯಾಗಿರುವುದು ಏಕೆ?
ಈ ವಾಕ್ಯಗಳು, ಪ್ರವಾದಿಯ ವಿಶ್ವಾಸದ ಕೊರತೆಯನ್ನು
ತೋರಿಸುತ್ತಿಲ್ಲ, ಬದಲಿಗೆ, ಅದಕ್ಕೂ ಹೆಚ್ಚಾಗಿ ಜೀವನದ ಅಸಂಗತತೆಗಳೊಂದಿಗೆ (inconsistencies) ಯೆರೆಮಿಯನ ಹೋರಾಟವನ್ನು ಬಹಿರಂಗಪಡಿಸುತ್ತಿದೆ. ಅಂದರೆ, ನೀತಿವಂತರು ಬಳಲುತ್ತಿರುವಾಗ ದುಷ್ಟರು ಏಕೆ ಅಭಿವೃದ್ಧಿ ಹೊಂದುತ್ತಾರೆ ಎಂಬ ಬಗ್ಗೆ ತನ್ನ ಗೊಂದಲವನ್ನು ಪ್ರಾಮಾಣಿಕವಾಗಿ ವ್ಯಕ್ತಪಡಿಸುತ್ತಾ ಅವನು ದೇವರ ಅಂತಿಮ ನೀತಿಯನ್ನು ಒಪ್ಪಿಕೊಳ್ಳುತ್ತಾನೆ. ಇಂದಿಗೂ, ಅನ್ಯಾಯವನ್ನು ನೋಡುವ ಮತ್ತು ದೇವರ ನ್ಯಾಯವನ್ನು ಪ್ರಶ್ನಿಸುವ ಅನೇಕ ವಿಶ್ವಾಸಿಗಳ ಹೋರಾಟವನ್ನು ಇದು ಪ್ರತಿಧ್ವನಿಸುತ್ತದೆ.
ಯೆರೆಮಿಯ 12:2: "ಅವರನ್ನು ನಾಟಿಮಾಡಿದವರು ನೀವು,
ಬೇರೂರಿ ಬೆಳೆದು ಹಣ್ಣುಬಿಡುತ್ತಿದ್ದಾರೆ ಅವರು.
ನೀವು ಅವರ ಅಧರಕ್ಕೆ ಹತ್ತಿರ, ಹೃದಯಕ್ಕೆ ದೂರ."
ತನ್ನ ದೂರನ್ನು ಮುಂದುವರಿಸುತ್ತಾ, ಯೆರೆಮಿಯ ಕೃಷಿಗೆ ಸಂಬಂಧಿಸಿದ ರೂಪಕಗಳನ್ನು ಬಳಸುತ್ತಾನೆ. "ನಾಟಿ ಮಾಡಿದ ಅಥವಾ ನೆಟ್ಟ" ಮತ್ತು "ಬೇರೂರಿರುವ" ಚಿತ್ರಣಗಳು ಈ ದುಷ್ಟ ವ್ಯಕ್ತಿಗಳನ್ನು ದೇವರೇ ಸ್ಥಾಪಿಸಿದಂತೆ ಮತ್ತು ಶಾಶ್ವತತೆಯನ್ನು ನೀಡಿರುವಂತೆ ಸೂಚಿಸುತ್ತದೆ. ಅವರ ಕಪಟತನದ ಹೊರತಾಗಿಯೂ ಅವರು ದೇವರ ಆಶೀರ್ವಾದವನ್ನು ಆನಂದಿಸುತ್ತಿದ್ದಾರೆ ("ಹಣ್ಣು ಬಿಡುತ್ತಿದ್ದಾರೆ ಅಥವಾ ಫಲವನ್ನು ಉತ್ಪಾದಿಸುತ್ತಾರೆ") ಎಂದು ಪ್ರವಾದಿ ಮಂಡಿಸುತ್ತಾನೆ.
ಪದ್ಯದ ದ್ವಿತೀಯಾರ್ಧ, ಯೆರೆಮಿಯನ ದೂರಿನ ಹೃದಯವನ್ನು ಕತ್ತರಿಸುತ್ತದೆ: ಈ ವ್ಯಕ್ತಿಗಳು ಧಾರ್ಮಿಕತೆಯನ್ನು ("ಅವರ ಅಧರಕ್ಕೆ ಹತ್ತಿರ") ನಡೆಸುತ್ತಾರೆ, ಆದರೆ ಅವರ ಹೃದಯಗಳು ದೇವರಿಂದ ದೂರವಾಗಿವೆ. ಈ ವಿರೋಧಾಭಾಸವು ದೇವರ ಸೇವೆಗೆ ಪ್ರಾಮಾಣಿಕವಾಗಿ ಬದ್ಧನಾಗಿರುವ ಪ್ರವಾದಿಯ ಮನಸ್ಸನ್ನು ಹೆಚ್ಚಾಗಿ ಬಾಧಿಸುತ್ತದೆ.
2. ಯೆರೆಮಿಯನ ಪ್ರಾರ್ಥನೆ
ಯೆರೆಮಿಯ 12:3: “ಸರ್ವೇಶ್ವರಾ, ನನ್ನ ಪರಿಚಯ ನಿಮಗಿದೆ,
ನಿಮ್ಮ ನೋಟ
ನನ್ನ ಮೇಲಿದೆ.
ನನ್ನ ಹೃದಯ
ನಿಮ್ಮೊಂದಿಗಿದೆ,
ಇದರ ಪರೀಕ್ಷೆ
ನಿಮ್ಮಿಂದಾಗಿದೆ.
ಅವರನ್ನೋ, ಕುರಿಗಳೋ ಎಂಬಂತೆ ಕೊಲೆಗೆ ಕರೆದೊಯ್ಯಿರಿ,
ವಧ್ಯದಿವಸದವರೆಗೂ ಅವರನ್ನು ವಿಂಗಡಿಸಿಡಿ.”
ಯೆರೆಮಿಯ, ದೇವರ ಮುಂದೆ ತನ್ನ ಪಾರದರ್ಶಕತೆಯನ್ನು ತನ್ನ ವಿರೋಧಿಗಳ ಕಪಟತನದೊಂದಿಗೆ ಹೋಲಿಸುತ್ತಾನೆ. ಇಲ್ಲಿ, “ಸರ್ವೇಶ್ವರಾ, ನನ್ನ ಪರಿಚಯ ನಿಮಗಿದೆ” ಎಂಬುದರ ಸರಿಯಾದ ಭಾಷಾಂತರ “ಆದರೆ, ಸರ್ವೇಶ್ವರ ನೀವು ನನ್ನನ್ನು ತಿಳಿದಿದ್ದೀರಿ.” “ತಿಳಿದಿದ್ದೀರಿ” ಎಂಬುದರ ಹೀಬ್ರೂ ಪದ ʼಯದ (Yada)ʼ ಎಂದರೆ, ನಿಕಟ ಪರಿಚಯ ಹೊಂದಿರುವುದು ಮತ್ತು ದೇವರೊಂದಿಗಿನ ವೈಯಕ್ತಿಕ ಸಂಬಂಧವನ್ನು ಸೂಚಿಸುತ್ತದೆ. ದೇವರಿಂದ ದೂರದಲ್ಲಿರುವ ಹೃದಯಗಳನ್ನು ಹೊಂದಿರುವ ದುಷ್ಟರಿಗೆ ಹೋಲಿಸಿದರೆ, ಪ್ರವಾದಿಯ ಹೃದಯ “ಪರೀಕ್ಷಿತ” ಮತ್ತು ನಂಬಿಗಸ್ತನೆಂದು ಕಂಡುಬಂದಿದೆ ಎಂದು ಯೆರೆಮಿಯ ಹೇಳಿಕೊಳ್ಳುತ್ತಾನೆ.
ಯೆರೆಮಿಯ ತನ್ನ ಶತ್ರುಗಳ ವಿರುದ್ಧ ತೀರ್ಪು ನೀಡುವಂತೆ ಕರೆ ನೀಡುತ್ತಿದ್ದಂತೆ ಪದ್ಯದ ದ್ವಿತೀಯಾರ್ಧ ನಾಟಕೀಯವಾಗಿ ಬದಲಾಗುತ್ತದೆ. ಬಳಸಿದ ಚಿತ್ರಣ ಸ್ಪಷ್ಟವಾಗಿದೆ - “ವಧೆಗೆ ಕುರಿಗಳಂತೆ ಅವರನ್ನು ಕರೆದೊಯ್ಯಿರಿ” - ಇದು ಯೆರೆಮಿಯನ ಹತಾಶೆ ಮತ್ತು ದೇವರ ಹಸ್ತಕ್ಷೇಪಕ್ಕಾಗಿ ಅವನ ವಿನಂತಿ, ಎರಡನ್ನೂ ವಿವರಿಸುತ್ತದೆ.
ಯೆರೆಮಿಯ ದುಷ್ಟರೊಂದಿಗೆ ತನ್ನನ್ನು ವ್ಯತಿರಿಕ್ತಗೊಳಿಸುತ್ತಾನೆ, ದೇವರಿಗೆ ತನ್ನ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಪ್ರತಿಪಾದಿಸುತ್ತಾನೆ. ದುಷ್ಟರ ಮೇಲೆ ನ್ಯಾಯತೀರ್ಪಿಗಾಗಿ ಅವನ ಮನವಿ ʼಪ್ರಲಾಪ ಕೀರ್ತನೆʼಗಳನ್ನು ಪ್ರತಿಧ್ವನಿಸುತ್ತದೆ; ಅವನ ಆಳವಾದ ಹತಾಶೆ ಮತ್ತು ದೇವರ ಹಸ್ತಕ್ಷೇಪದ ಬಯಕೆಯನ್ನು ಅದು ವ್ಯಕ್ತಪಡಿಸುತ್ತದೆ.
ಯೆರೆಮಿಯ 12:4: “ಇನ್ನೆಷ್ಟರವರೆಗೆ ನಾಡು ದುಃಖಿಸುತ್ತಿರಬೇಕು?
ಅದರ ಎಲ್ಲೆಎಲ್ಲೆಗಳಲ್ಲಿ ಹುಲ್ಲು ಸೊಪ್ಪು
ಒಣಗಿರಬೇಕು?
ನಾಡಜನರ ನೀಚತನದ
ನಿಮಿತ್ತ
ಮಾಯವಾಗಿವೆ ಪ್ರಾಣಿಪಕ್ಷಿಗಳು ಕೂಡ.
‘ನಮ್ಮ ನಡತೆಯನ್ನು ಗಮನಿಸರು
ದೇವರು’
ಎಂದುಕೊಳ್ಳುತ್ತಿರುವರು ಆ
ಜನರು.”
ಜನರ ಮಾತುಗಳನ್ನು ಗಮನಿಸಿ ಯೆರೆಮಿಯ, ದುಷ್ಟತನದ ಎಲ್ಲೆ ಮೀರಿರುವುದರಿಂದ ಪರಿಸರದ ಮೇಲಾಗುತ್ತಿರುವ ಪರಿಣಾಮಗಳನ್ನು ವಿವರಿಸುತ್ತಾನೆ. “ದುಃಖಿಸುವ ನಾಡು" ಅಥವಾ ʼಭೂಮಿʼ ಒಡಂಬಡಿಕೆಯ ವಾಗ್ದಾನವನ್ನು ಪ್ರತಿಬಿಂಬಿಸುತ್ತದೆ, ಅಲ್ಲಿ ಮಾನವ ಪಾಪಗಳು ನೈಸರ್ಗಿಕ ಕ್ರಮದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಿದ್ದಾನೆ. “ದುಃಖಿಸು” ಎಂಬುದು ಮಾನವ ದುಷ್ಟತನದಿಂದ ಉಂಟಾಗುವ ದುಃಖವನ್ನು ಭೂಮಿ ಕೂಡ ಹಂಚಿಕೊಳ್ಳುವುದನ್ನು ನಿರೂಪಿಸುತ್ತದೆ.
ಪ್ರವಾದಿ ಪರಿಸರ ವಿನಾಶವನ್ನು (ಬಹುಶಃ ಆಗ ಸಂಭವಿಸಿದ ಬರಗಾಲ) ಮಾನವ ನೈತಿಕ ವೈಫಲ್ಯದೊಂದಿಗೆ ಹೊಂದಿಸುತ್ತಾನೆ. ಕೊನೆಯ ನುಡಿಗಟ್ಟು (“ನಮ್ಮ ನಡತೆಯನ್ನು ಗಮನಿಸರು ದೇವರು”) ದುಷ್ಟರು ದೇವರ ದೃಷ್ಟಿಯಿಂದ ತಪ್ಪಿಸಿಕೊಳ್ಳಬಹುದು ಎಂಬ ದುರಹಂಕಾರದ ಊಹೆಯನ್ನು ನಮಗೆ ತಿಳಿಸುತ್ತದೆ.
3. ಯೆರೆಮಿಯನಿಗೆ ದೇವರ ಪ್ರತಿಕ್ರಿಯೆ
ಯೆರೆಮಿಯ 12:5: “ಆಗ ಸರ್ವೇಶ್ವರ ನನಗೆ:
“ಕಾಲಾಳುಗಳ ಸಂಗಡ ಓಡಲು
ಆಯಾಸಗೊಂಡೆಯಾದರೆ,
ಕುದುರೆಗಳೊಂದಿಗೆ ಓಡಿ
ಹೇಗೆ ಹೋರಾಡುವೆ?
ಪ್ರಶಾಂತ ಪ್ರದೇಶದಲ್ಲಿ
ನಿರ್ಭಯನಾಗಿ ನಿಲ್ಲಲಾರೆಯಾದರೆ,
ಜೋರ್ಡಾನಿನ ದಟ್ಟ
ಅಡವಿಯಲ್ಲಿ ಏನು
ಮಾಡಬಲ್ಲೆ?”
ಯೆರೆಮಿಯನ ನ್ಯಾಯದ ದೂರುಗಳಿಗೆ ನೇರವಾಗಿ ಉತ್ತರಿಸುವ ಬದಲು ದೇವರು ಸವಾಲಿನ ವಾಕ್ಚಾತುರ್ಯದ ಪ್ರಶ್ನೆಗಳೊಂದಿಗೆ ಉತ್ತರಿಸುತ್ತಾರೆ. ಓಟದ ರೂಪಕ ಯೆರೆಮಿಯನ ಪ್ರಸ್ತುತ ತೊಂದರೆಗಳು ಕೇವಲ ಸಣ್ಣ ಸವಾಲುಗಳು ಎಂದು ಸೂಚಿಸುತ್ತದೆ. ಈ ಅಗಾಧತೆಯನ್ನು ಅವನು ಕಂಡುಕೊಂಡರೆ (“ಆಯಾಸಗೊಂಡೆಯಾದರೆ”), ಮುಂಬರುವ ಹೆಚ್ಚು ಮಹತ್ವದ ಪರೀಕ್ಷೆಗಳನ್ನು ಅವನು ಹೇಗೆ ನಿಭಾಯಿಸುತ್ತಾನೆ?
“ಜೋರ್ಡಾನಿನ ದಟ್ಟ ಅಡವಿ” ಜೋರ್ಡಾನ್ ನದಿ ಕಣಿವೆಯ ಉದ್ದಕ್ಕೂ ಇರುವ ದಟ್ಟವಾದ, ಅಪಾಯಕಾರಿ ಸಸ್ಯವರ್ಗವನ್ನು ಸೂಚಿಸುತ್ತದೆ, ಇದು ಸಿಂಹಗಳು ಮತ್ತು ಇತರ ಬೆದರಿಕೆಗಳನ್ನು ತಿಳಿಸುತ್ತದೆ. “ವಾಗ್ದತ್ತ ಭೂಮಿ” ಎಂಬುದರ ವ್ಯತಿರಿಕ್ತತೆಯನ್ನು ಯೆರೆಮಿಯ ಎದುರಿಸುತ್ತಿರುವ ಸವಾಲುಗಳು ಇಲ್ಲಿ ತೋರಿಸುತ್ತವೆ.
ಯೆರೆಮಿಯ 12:6: “ನಿನ್ನ ಸೋದರರೇ, ನಿನ್ನ ತೌರುಮನೆಯವರೇ ನಿನಗೆ ದ್ರೋಹವೆಸಗಿದ್ದಾರೆ.
ಇವರೇ ನಿನ್ನ
ಬೆನ್ನಟ್ಟಿಬಂದು ಧಿಕ್ಕಾರ
ಕೂಗಿದ್ದಾರೆ.
ಇಂತಿರಲು ಇವರು
ಸವಿನುಡಿದರೂ ನಂಬಲೆಬೇಡ.”
ದೇವರು ಯೆರೆಮಿಯನಿಗೆ ಎಚ್ಚರಿಕೆ ನೀಡುತ್ತಾರೆ, ಅವನ ಕುಟುಂಬ ಸಹ ಅವನಿಗೆ ದ್ರೋಹ ಮಾಡಿದೆ, ಪ್ರವಾದಿಯ ಏಕಾಂಗಿತನವನ್ನು ತೋರಿಸುತ್ತದೆ. ಈ ಸತ್ಯ, ವಿಶ್ವಾಸಿಗಳು ದೇವರ ಮೇಲಿನ ವಿಶ್ವಾಸಕ್ಕೆ ತೆರಬೇಕಾದ ಬೆಲೆ ಮತ್ತು ದೇವರ ಕರೆಗೆ ವಿಧೇಯತೆಯಿಂದ ಬರುವ ವೈಯಕ್ತಿಕ ಸಂಕಟವನ್ನು ಒತ್ತಿಹೇಳುತ್ತದೆ.
ಇಲ್ಲಿ, "ಬೆನ್ನಟ್ಟಿಬಂದು" ಎಂಬ ಬೇಟೆಯ ಚಿತ್ರಣವನ್ನು ಬಳಸಲಾಗಿದೆ; ಅವನ ಸಂಬಂಧಿಕರು ಅವನ ಪತನವನ್ನು ಬಯಸಿ, ಶತ್ರುಗಳೊಡನೆ ಕೂಡಿಕೊಂಡು, ರಣಸ್ಪೂರ್ತಿಯಿಂದ ಕೂಗುತ್ತಾ ಬೆನ್ನಟ್ಟಿ ಬರುವುದನ್ನು ಇದು ಸೂಚಿಸುತ್ತದೆ. ಅವರ "ಸವಿನುಡಿ" ನಂಬುವುದರ ವಿರುದ್ಧದ ಎಚ್ಚರಿಕೆಯನ್ನು, ಅದರಲ್ಲಿರುವ ಅವರ ವಂಚನೆಯನ್ನು ಮತ್ತು ಯೆರೆಮಿಯ ತನ್ನ ಪ್ರವಾದಿಯ ಕರೆಯಲ್ಲಿ ಅನುಭವಿಸುವ ಸಂಪೂರ್ಣ ಏಕಾಂಗಿತನವನ್ನು ಇಲ್ಲಿ ಚಿತ್ರಿಸಲಾಗಿದೆ.
ವಚನ 6 ವಚನ 5 ರಲ್ಲಿ ದೇವರು ಹಾಕಿದ ಸವಾಲಿಗೆ ಪ್ರತಿಕ್ರಿಯೆಯಂತೆ ಕಾಣಬಹುದು - ಯೆರೆಮಿಯ ಹೆಚ್ಚಿನ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು, ಏಕೆಂದರೆ ಅವನ ಸೇವೆಗೆ ಸವಾಲುಗಳು ತೀವ್ರವಾಗುತ್ತವೆಯೇ ವಿನಃ ಕಡಿಮೆಯಾಗುವುದಿಲ್ಲ ಎಂಬುದು ಇದರ ಇಂಗಿತ.
ಸುವಾರ್ತಾ ಪ್ರಸಾರ ಸೇವೆಗೆ ಎರಡನೆಯ ವಿಖ್ಯಾಪನೆಯ ಅನ್ವಯಿಕೆ
ಯೆರೆಮಿಯನ ಎರಡನೇ ವಿಖ್ಯಾಪನೆ ನಮ್ಮ ಕಾಲದ ಸುವಾರ್ತಾ ಪ್ರಸಾರ ಸೇವೆಗೆ ಹಲವಾರು ಒಳನೋಟಗಳನ್ನು ನೀಡುತ್ತದೆ:
- ಆತ್ಮಿಕ ಹೋರಾಟ
ಯೆರೆಮಿಯ ದೇವರೊಂದಿಗೆ ಆತ್ಮೀಯ, ಪ್ರಾಮಾಣಿಕ ಮತ್ತು ವೈಯಕ್ತಿಕ ಅನುಬಂಧವನ್ನು ಹೊಂದಿದ್ದನು; ಅದು ಪ್ರಶ್ನಿಸುವುದು, ಅನುಮಾನಿಸುವುದು ಮತ್ತು ದೂರು ಹೇಳುವುದನ್ನು ಸಹ ಒಳಗೊಂಡಿತ್ತು. ವೈಯಕ್ತಿಕ ಆತ್ಮೀಯ ಸಂಬಂಧದಲ್ಲಿ ಇದು ಸಹಜ. ಅದರ ಹೊರತಾಗಿಯೂ, ದೇವರ ಕರೆಗೆ ನಿಷ್ಠಾವಂತ ಸೇವೆಯ ಭಾಗವಾಗಿ ಆತ್ಮಿಕ ಹೋರಾಟ ಇರುತ್ತದೆ; ದೇವರ ಒಡನಾಟ ಈ ಹೋರಾಟವನ್ನು ಇಲ್ಲವಾಗಿಸುವುದಿಲ್ಲ, ಬದಲಿಗೆ ಆ ಹೋರಾಟದಲ್ಲಿ ಬೆಂಗಾವಲಾಗುತ್ತದೆ ಎಂಬುದನ್ನು ಈ ವಿಖ್ಯಾಪನೆ ಸ್ಪಷ್ಟಪಡಿಸುತ್ತದೆ. ಸಂದೇಹಗಳು ದುರ್ಬಲ ವಿಶ್ವಾಸವನ್ನು ಸೂಚಿಸುವುದಿಲ್ಲ, ಆದರೆ ಅದು ಪ್ರೌಢತೆಯತ್ತ ಕರೆದೊಯ್ಯುತ್ತದೆ ಎಂಬುದನ್ನು ಶುಭಸಂದೇಶ ಸೇವಕರು ತಮ್ಮೊಳಗೆ ಗುರುತಿಸಬೇಕು.
- ವಿರೋಧಗಳ ನಡುವೆಯೂ ಸತತ ಪರಿಶ್ರಮ
ಯೆರೆಮಿಯನಿಗೆ ದೇವರ ಪ್ರತಿಕ್ರಿಯೆ ಆಧ್ಯಾತ್ಮಿಕ ಸಹಿಷ್ಣುತೆಯ ಅಗತ್ಯವನ್ನು ಒತ್ತಿಹೇಳುತ್ತದೆ. ಆಧುನಿಕ ಸೇವೆಗೆ ಆಗಾಗ್ಗೆ ಇದೇ ರೀತಿಯ ಪರಿಶ್ರಮದ ಅಗತ್ಯವಿರುತ್ತದೆ. ಅನಿರೀಕ್ಷಿತ ಮೂಲಗಳಿಂದ ಎದುರಾಗುವ ವಿರೋಧಗಳು ಸುವಾರ್ತಾ ಪ್ರಸಾರ ಸೇವೆಯ ಸಾಮಾನ್ಯ ಭಾಗ ಎಂಬುದನ್ನು ಶುಭಸಂದೇಶ ಸೇವಕರು ತಿಳಿಯಬೇಕು.
- ದುಷ್ಟತನದ ಸಮಸ್ಯೆಯನ್ನು ನಿಭಾಯಿಸುವುದು
ಯೆರೆಮಿಯನಂತೆ, ಸುವಾರ್ತಾ ಪ್ರಸಾರ ಸೇವಕರು ಮತ್ತು ಆತ್ಮಿಕ ನಾಯಕರು ಹೆಚ್ಚಾಗಿ ದುಷ್ಟರ ಸ್ಪಷ್ಟ ಯಶಸ್ಸಿನೊಂದಿಗೆ ಹೋರಾಡುತ್ತಾರೆ. ವಿಳಂಬವಾದರೂ ಸಹ, ನ್ಯಾಯ ಅಂತಿಮವಾಗಿ ದೇವರಿಗೆ ಸೇರಿದ್ದು ಎಂಬುದನ್ನು ಹತಾಶರಾಗದೆ ಸದಾ ನೆನಪಿಡಬೇಕು.
- ವಿಶ್ವಾಸಕ್ಕೆ
ತೆರಬೇಕಾದ ಬೆಲೆ
ಯೆರೆಮಿಯನ ಅನುಭವ, ದೇವರ ಸೇವೆಯೊಂದಿಗೆ ಬರುವ ವೈಯಕ್ತಿಕ ತ್ಯಾಗಗಳನ್ನು ಎತ್ತಿ ತೋರಿಸುತ್ತವೆ. ಸುವಾರ್ತಾ ಪ್ರಸಾರ ಸೇವೆ ಏಕಾಂಗಿತನ ಮತ್ತು ಸವಾಲಿನದ್ದಾಗಿರಬಹುದು, ಆದರೆ ದೇವರು ತಮ್ಮ ಸೇವಕರನ್ನು ಸತತ ಪ್ರಯತ್ನ ಮತ್ತು ಪರಿಶ್ರಮಕ್ಕೆ ಕರೆಯುತ್ತಾರೆ ಹಾಗೂ ಅದರ ಪ್ರತಿಫಲವನ್ನೂ ನೀಡುತ್ತಾರೆ.
ಸಮಾರೋಪ
ಯೆರೆಮಿಯನ ಎರಡನೇ ವಿಖ್ಯಾಪನೆ ಅಂತಿಮವಾಗಿ ಸುವಾರ್ತಾ ಪ್ರಸಾರ ಸೇವೆಯಲ್ಲಿರುವವರಿಗೆ ಸವಾಲು ಹಾಕುತ್ತದೆ, ಹಾಗೆಯೇ ಸಾಂತ್ವನವನ್ನು ಕೂಡ ನೀಡುತ್ತದೆ. ಸ್ಪಷ್ಟವಾದ ಅನ್ಯಾಯ ಮತ್ತು ವಿರೋಧದ ನಡುವೆಯೂ ದೇವರು ಪ್ರಸ್ತುತ ಮತ್ತು ತಮ್ಮನ್ನೇ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವಾಗ, ವಿಶ್ವಾಸಿ ಪಡುವ ಕಷ್ಟಕ್ಕೆ ಮತ್ತು ನೀಡುವ ಸಾಕ್ಷಿಗೆ ಬೆಲೆ ಬರುತ್ತದೆ. ʻಈ ವಿಖ್ಯಾಪನೆ ಸುವಾರ್ತಾ ಪ್ರಸಾರ ನಾಯಕರಿಗೆ ಸಂಕೀರ್ಣ ಕಾಲದಲ್ಲಿ ಪ್ರವಾದಿತನದ ಸೇವೆಗೆ ತೆರಬೇಕಾಗುವ ಬೆಲೆ ಮಾತ್ರವಲ್ಲ, ಅದಕ್ಕೆ ದೇವರು ನೀಡುವ ಸವಲತ್ತು ಎರಡನ್ನೂ ಪರಿಚಯಿಸುತ್ತದೆ ಮತ್ತು ಅದನ್ನು ಸ್ವೀಕರಿಸಲು ಆಹ್ವಾನಿಸುತ್ತದೆ.
ಎಂಬ ಪ್ರಬಂಧದ ಕನ್ನಡ ಭಾಷಾಂತರ. ಇದರ ಮೂಲ ಬರವಣಿಗೆಯನ್ನು Jeremiah’s Second Confession (Jeremiah 12:1–6) | Dr. Claude Mariottini – Professor of Old Testament ಇದರಲ್ಲಿ ಕಾಣಬಹುದು.]

Comments
Post a Comment